ಅಂಗನವಾಡಿ ಮೇಲ್ಛಾವಣಿ ಕುಸಿದು ನಾಲ್ಕು ಮಕ್ಕಳಿಗೆ ಗಾಯ
01:48 PM Sep 23, 2024 IST | Samyukta Karnataka
ಕೊಪ್ಪಳ: ಮೇಲ್ಛಾವಣಿ ಕುಸಿದು ಬಿದ್ದು ನಾಲ್ಕು ಮಕ್ಕಳು ಗಾಯಗೊಂಡ ಘಟನೆ ಗಂಗಾವತಿಯ ಮೆಹಬೂನ್ ನಗರದ ೭ನೇ ವಾರ್ಡಿನ ೧೧ನೇ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ನಡೆದಿದೆ.
ಗಾಯಗೊಂಡ ಮಕ್ಕಳನ್ನು ಅಮನ್, ಮನ್ವಿತ್, ಮರ್ದಾನ್, ಸುರಕ್ಷಾ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಅಂಗನವಾಡಿ ಕೇಂದ್ರದಲ್ಲಿ ೨೦ಕ್ಕೂ ಹೆಚ್ಚು ಮಕ್ಕಳು ಆಟವಾಡುತ್ತಿದ್ದರು.
ನಗರಸಭೆಯ ಅಧ್ಯಕ್ಷ ಮೌಲಾಸಾಬ್, ವಾರ್ಡ್ ಸದಸ್ಯ
ಮನೋಹರಸ್ವಾಮಿ, ಸಿಡಿಪಿಓ ಜಯಶ್ರೀ ದೇಸಾಯಿ, ಮೇಲ್ವಿಚಾರಕಿ ಚಂದ್ರಮ್ಮ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಗಾಯಗೊಂಡ ಮಕ್ಕಳನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗಂಗಾವತಿಯ ೧೧ನೇ ಅಂಗನವಾಡಿ ಕೇಂದ್ರದ ಕಟ್ಟಡವು ಕೇವಲ ೭ ವರ್ಷದ ಹಿಂದೆ ನಿರ್ಮಿಸಿದ್ದು, ಕೆಲವೇ ವರ್ಷಗಳಲ್ಲಿ ಮೇಲ್ಛಾವಣಿ ಕುಸಿದಿರುವುದು ಹಲವು ಅನುಮಾನಗಳನ್ನು ಸಾರ್ವಜನಿಕರಲ್ಲಿ ಸೃಷ್ಟಿಸಿವೆ.