For the best experience, open
https://m.samyuktakarnataka.in
on your mobile browser.

ಅತ್ಯಾಚಾರ: ಮತ್ತಿಬ್ಬರ ಸೆರೆ

08:03 PM Aug 29, 2024 IST | Samyukta Karnataka
ಅತ್ಯಾಚಾರ  ಮತ್ತಿಬ್ಬರ ಸೆರೆ

ಕಾರ್ಕಳ: ಕೆಲ ದಿನಗಳ ಹಿಂದೆ ಕೌಡೂರು ರಂಗನಪಲ್ಕೆ ಬಳಿ ನಡೆದಿದ್ದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೇರಿದೆ.
ಬಂಧಿತ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಎರಡು ದಿನಗಳ ಹಿಂದೆ ವಶಕ್ಕೆ ಪಡೆದಿದ್ದರು. ಅವರ ಪ್ರಾಥಮಿಕ ವಿಚಾರಣೆಯ ಬಳಿಕ ಇದೀಗ ಬಂಧನ ಪ್ರಕ್ರಿಯೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಸ್ಟಡಿಗೆ ಪಡೆದಿದ್ದಾರೆ.
ಬಂಧಿತರನ್ನು ಸಿಯಾಜ್ ಮತ್ತು ಗಿರಿ ಎಂದು ಗುರುತಿಸಲಾಗಿದೆ. ಇವರಲ್ಲಿ ಸಿಯಾಜ್ ಕಾರ್ಕಳದವನಾಗಿದ್ದರೆ, ಗಿರಿ ಆಂಧ್ರಪ್ರದೇಶದವನು ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರಮುಖ ಆರೋಪಿ ಅಲ್ತಾಫ್‌ಗೆ ಡ್ರಗ್ ಪೂರೈಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಆ. ೨೪ರಂದು ೨೧ರ ಹರೆಯದ ಹಿಂದೂ ಯುವತಿಯನ್ನು ಪುಸಲಾಯಿಸಿ ಅಪಹರಿಸಿ ಕೌಡೂರು ಬಳಿಯ ರಂಗನಪಲ್ಕೆಯ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್, ಶ್ರಾವೆದ್ ರಿಚರ್ಡ್ ಕ್ವಾಡ್ರಸ್ ಹಾಗೂ ಅಭಯ್ ಅವರನ್ನು ಬಂಧಿಸಲಾಗಿತ್ತು.
ಯುವತಿಗೆ ನೀಡಲಾದ ಡ್ರಗ್ಸ್ ಮೂಲದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದು, ಅದು ಬೆಂಗಳೂರು, ತಿರುಪತಿಯಿಂದ ಸರಬರಾಜು ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಭಯ್ ಹಾಗೂ ಈ ಇಬ್ಬರು ಬಂಧಿತರನ್ನು ಪೊಲೀಸರು ಬೆಂಗಳೂರು ಹಾಗೂ ತಿರುಪತಿಗೆ ಕರೆದೊಯ್ದು ತನಿಖೆ ನಡೆಸಿದ್ದರು.
ಕಸ್ಟಡಿಗೆ..
ಪ್ರಕರಣದಲ್ಲಿ ಮೊದಲು ಬಂಧನವಾಗಿದ್ದ ಅಲ್ತಾಫ್, ಶ್ರಾವೆದ್ ರಿಚರ್ಡ್ ಕ್ವಾಡ್ರಸ್ ನ ಪೊಲೀಸ್ ಕಸ್ಟಡಿ ಅಂತ್ಯವಾದ ಕಾರಣದಿಂದ ಅವರನ್ನು ಕಾರ್ಕಳ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೀಗ ಇಬ್ಬರನ್ನು ಮತ್ತೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.