ಅದಾನಿಗೆ ದೇಶ ಮಾರದಂತೆ ರಾಜನಾಥ್‌ಗೆ ಗುಲಾಬಿ, ರಾಷ್ಟ್ರಧ್ವಜ
ನವದೆಹಲಿ: ದೇಶವನ್ನು ಅದಾನಿಗೆ ಮಾರಾಟ ಮಾಡಬೇಡಿ ಎಂದು ಒತ್ತಾಯಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರಿಗೆ ಬುಧವಾರ ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ನೀಡಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು. ಸಂಸತ್ತಿಗೆ ಪ್ರವೇಶಿಸಲು ರಾಜನಾಥ್‌ಸಿಂಗ್ ಕಾರಿನಿಂದ ಇಳಿಯುತ್ತಿದ್ದಂತೆ ರಾಹುಲ್ ಹಾಗೂ ಕಾಂಗ್ರೆಸ್ ನಾಯಕರು ಅವರ ಬಳಿಗೆ ತೆರಳಿ ಅಮೆರಿಕದಲ್ಲಿ ಅದಾನಿ ವಿರುದ್ಧದ ಲಂಚದ ಆರೋಪದ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ದೇಶವನ್ನು ಅದಾನಿಗೆ ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.
ನ. ೨೦ರಂದು ಪ್ರಾರಂಭವಾದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಈ ವಿಚಾರದ ಬಗ್ಗೆ ಗದ್ದಲ ನಡೆಯುತ್ತಿದೆ. ಏತನ್ಮಧ್ಯೆ ಸೋನಿಯಾ ಗಾಂಧಿ ಅವರು ಜಾರ್ಜ್ ಸೊರೊಸ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.
ಸ್ಪೀಕರ್ ಭೇಟಿ ಮಾಡಿದ ರಾಹುಲ್ ತನ್ಮಧ್ಯೆ, ಸಂಸತ್ ಕಲಾಪ ಬಿಕ್ಕಟ್ಟಿನ ನಡುವೆ ರಾಹುಲ್ ಗಾಂಧಿ ಅವರು ಸ್ಪೀಕರ್ ಓಂ ಬಿರ್ಲಾ ಅವರನ್ನೂ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ವಿರುದ್ಧ ಬಿಜೆಪಿ ಸಂಸದರು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ದಾಖಲೆಯಿಂದ ತೆಗೆದು ಹಾಕಬೇಕು ಮತ್ತು ಸುಗಮ ಕಲಾಪಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ. ಹೀಗಾಗಿ ರಾಹುಲ್ ಆರೋಪ ಪರಿಶೀಲಿಸುವುದಾಗಿ ಓಂ ಬಿರ್ಲಾ ಭರವಸೆ ನೀಡಿದ್ದಾರೆ. ಡಿಸೆಂಬರ್ ೧೩ ರಿಂದ ಲೋಕಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆಗೆ ಅವಕಾಶ ನೀಡಬೇಕು. ಸುಗಮ ಕಲಾಪಕ್ಕೆ ನಾವು ಸಿದ್ದರಿದ್ದೆವೆ. ಬಿಜೆಪಿ ಸಂಸದರು ವಿನಾಕಾರಣ ಆರೋಪ ಮಾಡು ತ್ತಿದ್ದಾರೆ. ಇವುಗಳನ್ನು ತೆಗೆದು ಹಾಕಬೇಕು ಎಂದವರು ಹೇಳಿಕೊಂಡಿದ್ದಾರೆ.