ಅನಾರೋಗ್ಯದಿಂದ ಮತದಾನಕ್ಕೆ ತೆರಳಿಲ್ಲ
ಯಲ್ಲಾಪುರ: ಮಂಗಳವಾರ ದಿಢೀರ್ ಆಗಿ ಅನಾರೋಗ್ಯ ಉಂಟಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಾದೆ. ಮಧ್ಯಾಹ್ನ ೨ಕ್ಕೆ ಆರೋಗ್ಯ ಸ್ಥಿರ ಆಗಬಹುದು ಎಂದು ವೈದ್ಯರು ಹೇಳಿದರು. ಈ ಕಾರಣದಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ವೈದ್ಯರ ಸಲಹೆಯ ಮೇರೆಗೆ ಸಂಜೆ ೬ ಗಂಟೆಯವರೆಗೂ ಆಸ್ಪತ್ರೆಯಲ್ಲಿಯೇ ಇರಬೇಕಾಯಿತು. ಈ ಕಾರಣದಿಂದ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಹೋಗಲು ಸಾಧ್ಯವಾಗಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಮಂಗಳವಾರ ನನಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ವೈದ್ಯರನ್ನು ಸಂಪರ್ಕಿಸಿದೆ. ಅವರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾದೆ. ನನ್ನನ್ನು ತಪಾಸಣೆ ನಡೆಸಿದ ವೈದ್ಯರು ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯಿಂದ ತೆರಳಬಹುದು ಎಂದು ಸಲಹೆ ನೀಡಿದ್ದರು. ಆದರೂ ನನಗೆ ಆರೋಗ್ಯ ಸ್ಥಿರವಾಗಲು ಸಂಜೆಯವರೆಗೆ ಸಮಯ ತೆಗೆದುಕೊಂಡಿತು ಎಂದು ವಿವರಿಸಿದರು.
ನನಗೆ ಯಾರ ಭಯವೂ ಇಲ್ಲ:
ನಾನು ಯಾರಿಗೂ ಹೆದರಿಕೊಂಡು ರಾಜ್ಯಸಭೆ ಚುನಾವಣೆಗೆ ಮತ ಹಾಕಲು ತೆರಳದೆ ಉಳಿದಿಲ್ಲ. ಆ ಅವಶ್ಯಕತೆಯೂ ನನಗೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಷ್ಟು ಶಾಸಕರ ಬೆಂಬಲ ಇತ್ತು. ಅವರಿಗೆ ನನ್ನ ಮತದ ಅವಶ್ಯಕತೆ ಇಲ್ಲ. ಹಾಗಾಗಿ ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಎಡವಿದರು. ಜೆಡಿಸ್ ಅಭ್ಯರ್ಥಿ ಹಾಕುವ ಅವಶ್ಯಕತೆಯೇ ಇರಲಿಲ್ಲ. ಆದರೂ ಯಾಕೆ ಹಾಕಿದರೋ ಗೊತ್ತಿಲ್ಲ ಎಂದು ತಿಳಿಸಿದರು.
ನಾನು ಕಳೆದ ೪೦ ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ವಿಪ್ ಕುರಿತು ಕಾನೂನಿನ ಅರಿವು ಇದೆ. ನಿನ್ನೆ ಯಾಕೆ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಸ್ಪಷ್ಟನೆ ನೀಡುವ ಅವಶ್ಯಕತೆ ಇತ್ತು. ಅದನ್ನು ನಾನು ನೀಡಿದ್ದೇನೆ ಎಂದರು.