ಅಭಿಯಾನ ಮಾದರಿಯಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆ
06:01 PM Dec 18, 2024 IST | Samyukta Karnataka
ಬೆಳಗಾವಿ (ಸುವರ್ಣಸೌಧ) : ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ರವಿಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಈ ವರ್ಷ ರಾಜ್ಯದಲ್ಲಿ 5022 ಮುಜರಾಯಿ ಆಸ್ತಿಗಳನ್ನು ಮುಜರಾಯಿ ಇಲಾಖೆಗೆ ಖಾತೆ ಮಾಡಿಕೊಡುವ ಮೂಲಕ ಸಂರಕ್ಷಣೆ ಮಾಡಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿoದ ರಾಜ್ಯದ ಮುಜರಾಯಿ ಆಸ್ತಿಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು. ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ದಾನವಾಗಿ ನೀಡಿರುವ 1198.34 ಎಕರೆ ಜಾಗದಲ್ಲಿ ಒತ್ತುವರಿಯಾಗಿರುವ ಜಾಗದ ವಿಷಯದ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಒತ್ತುವರಿ ಜಾಗವನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.