For the best experience, open
https://m.samyuktakarnataka.in
on your mobile browser.

ಅಶಕ್ತನಿಗೆ ಆಸರೆಯಾಗುವುದೇ ಸ್ವಾತಂತ್ರ‍್ಯದ ಆಶಯ

04:08 AM Jan 09, 2025 IST | Samyukta Karnataka
ಅಶಕ್ತನಿಗೆ ಆಸರೆಯಾಗುವುದೇ ಸ್ವಾತಂತ್ರ‍್ಯದ ಆಶಯ

ಅತ್ಯುತ್ತಮ ವಕೀಲರಾಗಿ ಲಕ್ಷಾಂತರ ರೂಪಾಯಿ, ಆಸ್ತಿ ಸಂಪಾದಿಸುವ ಅವಕಾಶವನ್ನು ದೂರೀಕರಿಸಿ ಅರ್ಜಿಸಿದ ಸಂಪತ್ತನ್ನೂ ಸ್ವಾತಂತ್ರ‍್ಯ ಚಳವಳಿಯ ಯಶಸ್ಸಿಗಾಗಿ ಸಮರ್ಪಿಸಿದ ದೇಶಭಕ್ತ, ಸಮಾಜ ಸುಧಾರಕ ಕಾರ್ನಾಡು ಸದಾಶಿವರಾಯರು, ದಕ್ಷಿಣದ ಗಾಂಧಿಯೆಂಬ ಗೌರವಾದರಕ್ಕೆ ಪಾತ್ರರಾದ ಸರಳ ಸಜ್ಜನಿಕೆಯ ಧೀಮಂತ ವ್ಯಕ್ತಿ. ಕರ್ನಾಟಕದ ದಕ್ಷಿಣ ಕನ್ನಡದ ಸಂಪ್ರದಾಯಸ್ಥ, ಶ್ರೀಮಂತ, ವಿದ್ಯಾವಂತ ಮನೆತನದ ರಾಮಚಂದ್ರ ರಾವ್-ರಾಧಾಬಾಯಿ ದಂಪತಿಗಳಿಗೆ ಜನಿಸಿದ ಸದಾಶಿವರಾಯರು ಸೇವಾತತ್ಪರತೆಯನ್ನು ಬಾಲ್ಯದಿಂದಲೇ ಮೈಗೂಡಿಸಿದ ಮಹಾತ್ಮ. ಚೆನ್ನೈ ಹಾಗೂ ಮುಂಬೈಯಲ್ಲಿ ಉನ್ನತ ವಿದ್ಯಾಭ್ಯಾಸ ಪೂರೈಸಿ ಕಾನೂನು ಪದವೀಧರರಾದ ಕಾರ್ನಾಡರು ವಕೀಲಿಕೆಯಲ್ಲಿ ಮಿಂಚಿ, ಅಲ್ಪಕಾಲದಲ್ಲೇ ಮನೆಮಾತಾದರು. ಸರಳ ನಡೆನುಡಿ, ಪ್ರೀತಿತುಂಬಿದ ಮಾತು, ಆಡುಮಾಡುಗಳ ನಡುವೆ ವ್ಯತ್ಯಾಸವಿಲ್ಲದ ನಡವಳಿಕೆಯಿಂದ ಅಪಾರ ಜನಮನ್ನಣೆ ಗಳಿಸಿದರೂ ಸದಾಶಿವರಾಯರ ಮನಸ್ಸು ಭಾರತದ ದಾಸ್ಯಮುಕ್ತಿಯೆಡೆಗೆ ಆಕರ್ಷಿತವಾಗಿತ್ತು. ಗಾಂಧಿಪಥದ ಆಯ್ಕೆಗೈದು ಸ್ವಾತಂತ್ರ‍್ಯ ಆಂದೋಲನಕ್ಕೆ ಧುಮುಕಿದ ಕಾರ್ನಾಡರ ತನು, ಮನ, ಧನ ರಾಷ್ಟ್ರಸಮರ್ಪಿತ. ಹಾಯಾದ ಬದುಕು, ಶ್ರೀಮಂತಿಕೆಯ ಗತ್ತು, ತಲೆಮಾರಿಗೆ ಸಾಕಾಗುವ ಸಂಪತ್ತು, ಉಚ್ಚ ಶಿಕ್ಷಣ, ಸಾಮಾಜಿಕ ಗೌರವಗಳನ್ನು ತಲೆ ಮೇಲೆ ಹೊತ್ತು ತಿರುಗದೆ ಗಾಂಧೀಜಿಯವರ ಅಪೇಕ್ಷೆಯ ಸತ್ಯಾಗ್ರಹಕ್ಕೆ ಕರ್ನಾಟಕದಲ್ಲಿ ಚಾಲನೆಯಿತ್ತ ಪ್ರಮುಖರಲ್ಲಿ ಕಾರ್ನಾಡರದು ಮೊದಲ ಹೆಸರು. ದಕ್ಷ, ಸೇವಾಕಾಂಕ್ಷಿ, ನಿಷ್ಠಾವಂತ ಸತ್ಯಾಗ್ರಹಿ ಸ್ವಯಂಸೇವಕರ ನಿರ್ಮಾಣಕ್ಕಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದು ಪ್ರಬುದ್ಧ ಯುವಕರ ಸೃಷ್ಟಿಯನ್ನು ಗಮನದಲ್ಲಿರಿಸಿ ರಾಷ್ಟ್ರೀಯ ಶಿಕ್ಷಣದ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದರು. ಭಾರತದ ಉತ್ತರ ಭಾಗಕ್ಕೆ ಆದಷ್ಟು ಆಕ್ರಮಣ ಕರಾವಳಿಗೆ ಆಗದಿದ್ದರೂ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಮುಂದಿದ್ದ ಜನರನ್ನು ಶೈಕ್ಷಣಿಕವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿದ ಆಂಗ್ಲ ಸರಕಾರ ಪ್ರಾಯೋಜಿತ ಕುತಂತ್ರಕ್ಕೆ ತಡೆಗೋಡೆಯಾದ ಅವರ ಧೀಮಂತ ನಿಲುವು ನೂರಾರು ಮನೆಗಳನ್ನುಳಿಸಿತು. ವಿದ್ಯೆಯ ಜೊತೆಗೆ ಸಂಸ್ಕಾರ, ಕೈಕಸುಬು, ಸ್ವಾವಲಂಬಿ ಜೀವನದ ಪಾಠವನ್ನೂ ಕಲಿಸಲು ಯೋಜನೆ ರೂಪಿಸಿದ ಕಾರ್ನಾಡರ ಕನಸಿಗೆ ಜೊತೆಯಾದ ಪತ್ನಿ ಶಾಂತಾಬಾಯಿ, ಅಸಹಾಯಕ ಮಹಿಳೆಯರ ಗೌರವದ ಬದುಕಿನ ಕನಸು ಕಂಡರು.
ಬಡ ಮಹಿಳೆಯರು ಹಾಗೂ ವಿಧವೆಯರ ಮೊಗದಲ್ಲಿ ಮಂದಹಾಸ ಮೂಡಿಸಲು ಮಹಿಳಾ ಸಮಾಜ ಸ್ಥಾಪಿಸಿ ತನ್ಮೂಲಕ ಸ್ವೋದ್ಯೋಗ, ಗೃಹ ಕೈಗಾರಿಕೆಗಳಿಗೆ ಆರ್ಥಿಕ ಸಹಕಾರವಿತ್ತು ಪ್ರೋತ್ಸಾಹಿಸಿದ ಕಾರ್ಯ ಸದಾ ಸ್ಮರಣೀಯ. ಕನ್ನಡ ನೆಲದಲ್ಲಿ ಶತಮಾನದ ಹಿಂದೆಯೇ ಸ್ತ್ರೀ ಸಬಲೀಕರಣ ಕಾರ್ಯಗಳನ್ನು ಸಂಯೋಜಿಸಿ ಮಹಿಳೆಯನ್ನು ಆರ್ಥಿಕ ದೃಷ್ಟಿಯಿಂದ ಗೃಹಲಕ್ಷ್ಮೀಯನ್ನಾಗಿ ರೂಪಿಸಲು ಹಲವಾರು ದಾರಿಗಳನ್ನು ಹುಡುಕಿದ ಅವರ ವ್ಯಕ್ತಿತ್ವವೇ ವಿಶಿಷ್ಟ. ಬಾಲವಿಧವೆಯರ ಜೀವನಕ್ಕೆ ಶಕ್ತಿತುಂಬಿ ಮಹಿಳಾ ಶಿಕ್ಷಣವನ್ನು ಬೆಂಬಲಿಸಿದ ಸತಿಪತಿಗಳು ಕ್ಷಣಕ್ಷಣವೂ ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿದ ಪರಿಣಾಮ ಅನೂಹ್ಯ. ಸತಿಪದ್ಧತಿ ಅಷ್ಟಾಗಿ ಕಾಡದಿದ್ದರೂ ಒಂದಷ್ಟು ಅನಿಷ್ಟಗಳು ಅಲ್ಲಲ್ಲಿ ಜೀವಂತವಾಗಿದ್ದನ್ನು ಗಮನಿಸಿ ನೊಂದ ಕಾರ್ನಾಡರು, ಸಾಮರಸ್ಯದ ಭಾವಕ್ಕೆ ಹೊಸ ಭಾಷ್ಯ ಬರೆದ ಸೇವಾಜೀವಿ. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಜನಜಾಗೃತಿ ಮೂಡಿಸಿ ರಾಜ್ಯದ ಜನತೆಯ ನೋವು ಹಾಗೂ ಆಕ್ರೋಶಗಳಿಗೆ ಧ್ವನಿಯಾದ ದಕ್ಷಿಣದ ಗಾಂಧಿ ಕಾರ್ನಾಡರು, ತಮ್ಮ ಮನೆಯನ್ನೇ ಚಳವಳಿಯ ಕೇಂದ್ರವನ್ನಾಗಿಸಿದರು. ಉಪ್ಪಿನ ಸತ್ಯಾಗ್ರಹ, ಜನ ಅಸಹಕಾರ ಆಂದೋಲನದಲ್ಲೂ ಭಾಗವಹಿಸಿ ಜೈಲುಶಿಕ್ಷೆಗೆ ಗುರಿಯಾದ ಸದಾಶಿವರಾಯರು ತಮ್ಮ ಸಂಘಟನಾ ಸಾಮರ್ಥ್ಯ, ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯುವ ಚಾಕಚಕ್ಯತೆಯಿಂದ ರಾಷ್ಟ್ರಸ್ತರದ ನಾಯಕರ ಪ್ರಶಂಸೆಗೂ ಭಾಜನರಾದರು. ನಿರಂತರ ಓಡಾಟ, ದೇಶಸೇವೆಯ ತುಡಿತದಿಂದ ದೇಹಮನಸ್ಸುಗಳ ಆರೋಗ್ಯದಲ್ಲಿ ವ್ಯತ್ಯಯವಾದರೂ ಅದಕ್ಕೆಲ್ಲ ಬಗ್ಗುವ ವ್ಯಕ್ತಿ ಅವರಾಗಿರಲಿಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ ಕಾರ್ನಾಡರು, ಕೈಯಲ್ಲಿ ಬಿಡಿಗಾಸೂ ಇಲ್ಲದೆ ಗುಡಿಸಲಿನಲ್ಲಿ ವಾಸಿಸಿ ಅನಾರೋಗ್ಯಕ್ಕೀಡಾದರು. ಯಾರಿಗೂ ವಿಷಯ ತಿಳಿಸದೆ ಮತ್ತೆ ಕಾಲಿಗೆ ಚಕ್ರಕಟ್ಟಿ ಸಮಾಜಸೇವೆ, ಸ್ವಾತಂತ್ರ‍್ಯ ಹೋರಾಟದಲ್ಲೇ ತೊಡಗಿಸಿದ ಧರ್ಮರತ್ನಾಕರ ರಾಯರು ಬಹುಬೇಗನೆ ಮರಳಿ ಬಾರದ ಲೋಕಕ್ಕೆ ತೆರಳಿದರು. ವೈಭವದ ಜೀವನ ತ್ಯಜಿಸಿ ಬಡಜನರ ಬವಣೆ ಕಳೆಯಲು ಶ್ರಮಿಸಿ ಭಾರತದ ಇತಿಹಾಸದಲ್ಲಿ ಅಮರರಾಗಿರುವ ಕಾರ್ನಾಡು ಸದಾಶಿವರಾಯರು ಕರ್ನಾಟಕದ ಹೆಮ್ಮೆಯಷ್ಟೇ ಅಲ್ಲ, ಆರ್ಯಾವರ್ತ ಭೂಷಣರೂ ಹೌದು. ಸ್ವಾತಂತ್ರ‍್ಯ ಹೋರಾಟ, ಸಾಹಿತ್ಯ, ಸುಧಾರಣಾ ದೃಷ್ಟಿಕೋನ, ಸಾಮಾಜಿಕ ಸಮತ್ವ, ರಾಷ್ಟ್ರಹಿತ ರಾಜಕಾರಣದಲ್ಲಿ ತೊಡಗಿಸಿ ಎಲ್ಲಾ ರಂಗಗಳಲ್ಲಿಯೂ ಜನಮನ್ನಣೆ ಗಳಿಸಿ ಪ್ರಭಾವಿ ಸಂಸದೀಯ ಪಟುವೆಂಬ ಗೌರವ ಸಂಪಾದಿಸಿದ ಅಪರೂಪದ ಜನಸೇವಕ ನರಹರ ವಿಷ್ಣು ಗಾಡ್ಗೀಳರು, ಮೌಲ್ಯಾಧಾರಿತ ರಾಜಕೀಯ ವ್ಯವಸ್ಥೆಯನ್ನು ಪ್ರತಿಪಾದಿಸಿದ ಅಂಗುಲೀಗಣನೀಯರಲ್ಲಿ ಅನ್ಯತಮರು. ಇಂದಿನ ಮಧ್ಯಪ್ರದೇಶದ ಪುಟ್ಟ ಊರಿನ ವಿಷ್ಣು ನಾರಾಯಣ ಗಾಡ್ಗೀಳ ದಂಪತಿಗಳಿಗೆ ಜನಿಸಿದ ನರಹರ ಗಾಡ್ಗೀಳ್, ಪ್ರತಿಭಾಸಂಪನ್ನ ಬಾಲಕ. ಪುಣೆಯ ಇತಿಹಾಸಪ್ರಸಿದ್ಧ ಫರ್ಗ್ಯುಸನ್ ಕಾಲೇಜಿನಲ್ಲಿ ಪದವಿ ಸಂಪಾದಿಸಿ ಸರಕಾರಿ ಕಾನೂನು ಮಹಾವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು ವಕೀಲಿ ವೃತ್ತಿಯನ್ನು ಆರಂಭಿಸುವ ಹೊತ್ತಿಗೆ ಸ್ವಾತಂತ್ರ‍್ಯ ಆಂದೋಲನದ ಕಾವು ಮುಗಿಲು ಮುಟ್ಟಿತ್ತು. ವಂಗಭಂಗ ವಿರೋಧೀ ಹೋರಾಟ, ವಿದೇಶಕೇಂದ್ರಿತ ಕ್ರಾಂತಿ, ಸಶಸ್ತ್ರ ಸಂಗ್ರಾಮ, ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ಮೊದಲಾದ ಘಟನೆಗಳಿಂದ ನಿರ್ಣಾಯಕ ಹಂತ ತಲುಪಿದ್ದ ಚಳವಳಿಗೆ ಧುಮುಕಿದ ಗಾಡ್ಗೀಳರು ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ತಮ್ಮ ವಾಕ್ಚಾತುರ್ಯ, ಸಂಘಟನಾ ಕೌಶಲಗಳಿಂದ ಕಾಂಗ್ರೆಸ್‌ನ ನಾಯಕರಾಗಿ ಹೊರಹೊಮ್ಮಿ ರಾಜ್ಯ ಹಾಗೂ ರಾಷ್ಟ್ರಸ್ತರಗಳ ವಿವಿಧ ದಾಯಿತ್ವವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ಲೋಕಮಾನ್ಯ ಬಾಲಗಂಗಾಧರ ತಿಲಕರ ವೈಚಾರಿಕ ಬದ್ಧತೆ ಹಾಗೂ ಸನಾತನತೆಯ ಆಧಾರದ ರಾಷ್ಟ್ರನಿರ್ಮಾಣ, ಗಾಂಧೀಜಿಯವರ ಸತ್ಯಾಗ್ರಹ ಮತ್ತು ವಲ್ಲಭಭಾಯ್ ಪಟೇಲರ ಯೋಜನಾಬದ್ಧ ಹೋರಾಟಗಳಿಂದ ಪ್ರಭಾವಿತರಾದ ನರಹರರು ವಿವಿಧ ಸಂದರ್ಭಗಳ ಹೋರಾಟ, ಲಾಠಿಯೇಟು, ಸಂಘರ್ಷದ ನಡುವೆ ಎಂಟು ಬಾರಿ ಜೈಲುಶಿಕ್ಷೆಗೆ ಗುರಿಯಾದರು. ಮಹಾರಾಷ್ಟ್ರದ ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲೂ ಕಾರ್ಯ ನಿರ್ವಹಿಸಿ ವೈದಿಕ - ವೈಜ್ಞಾನಿಕ ತರ್ಕವಿಲ್ಲದ ಮೂಢನಂಬಿಕೆ, ಸಾಮಾಜಿಕವಾಗಿ ರೂಢಿಯಲ್ಲಿದ್ದ ತರತಮಭಾವ ಹೋಗಲಾಡಿಸಲು ಶ್ರಮಿಸಿ ಸ್ತಿçÃಯರ ಉಚ್ಚಶಿಕ್ಷಣ, ವಿಧವಾ ವಿವಾಹ, ಸ್ವಾವಲಂಬಿ ಬದುಕಿಗೂ ಪ್ರೋತ್ಸಾಹವಿತ್ತರು. ಪೂನಾ ಸಾರ್ವಜನಿಕ ಸಭಾ, ಯಂಗ್ ಮೆನ್ಸ್ ಅಸೋಸಿಯೇಶನ್ ಮೊದಲಾದ ಸಮಾಜಸೇವಾ ಸಂಘಟನೆಗಳ ಮುಂದಾಳತ್ವದಲ್ಲಿ ತರುಣರಿಗೆ ಸ್ಫೂರ್ತಿಯಿತ್ತು ಭವಿಷ್ಯದ ನಾಯಕರ ಸೃಷ್ಟಿಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿದ ಅವರ ದೂರದೃಷ್ಟಿಯ ಪ್ರಭಾವವನ್ನು ಇಂದಿಗೂ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜಕಾರಣದಲ್ಲಿ ಕಾಣಲು ಸಾಧ್ಯ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಬೋಧನೆಗಳಿಂದ ಪ್ರೇರಿತರಾದ ಗಾಡ್ಗೀಳರು ಸ್ವತಂತ್ರ ಭಾರತದ ಸರಕಾರದಲ್ಲಿ ಸಾರ್ವಜನಿಕ ಸೇವೆ, ಗಣಿ ಮತ್ತು ಇಂಧನ ಸಚಿವರಾಗಿ ಮಹತ್ವದ ಅನೇಕ ಯೋಜನೆಗಳಿಗೆ ಚಾಲನೆಯಿತ್ತರು. ಪಠಾಣಕೋಟ್ - ಶ್ರೀನಗರ ರಸ್ತೆನಿರ್ಮಾಣ, ಬಾಕ್ರಾ, ಕೊಯ್ನಾ, ಹಿರಾಕುಂಡ್ ಅಣೆಕಟ್ಟಿನ ನಕಾಶೆಯೇ ಮೊದಲಾಗಿ ಜನೋಪಯೋಗಿ ಕೆಲಸಗಳಿಂದ ದಕ್ಷ ಸಚಿವರೆಂದು ಸಂಪುಟ ಸಹೋದ್ಯೋಗಿಗಳ ಮೆಚ್ಚುಗೆ ಗಳಿಸಿದ ನರಹರರು ಪಂಜಾಬ್ ರಾಜ್ಯಪಾಲ, ಪೂನಾ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದರು. ಮರಾಠಿ ಹಾಗೂ ಇಂಗ್ಲಿಷ್ ಸಾಹಿತ್ಯದ ಮೇರು ಲೇಖಕರಾಗಿಯೂ ಗುರುತಿಸಲ್ಪಟ್ಟು ಮರಾಠಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೀಠ ಅಲಂಕರಿಸಿದ ವಿದ್ವಾಂಸ ಗಾಡ್ಗೀಳರು ಕಾನೂನು, ರಾಜಕೀಯ, ಅರ್ಥಶಾಸ್ತ್ರ, ಇತಿಹಾಸದ ಬಗ್ಗೆ ಹೊಂದಿದ್ದ ಜ್ಞಾನಕ್ಕೆ ಮಾರುಹೋಗದವರಿಲ್ಲ. ಭಾರತೀಯ ರಾಜಕೀಯರಂಗದಲ್ಲಿ ಸರಳ ಸಜ್ಜನಿಕೆಗೆ ಹೆಸರಾದ ನರಹರ ವಿಷ್ಣು ಗಾಡ್ಗೀಳರ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮುಕ್ತ ರಾಜಕಾರಣದ ಕನಸು ಇನ್ನೂ ನನಸಾಗದಿರುವುದು ನಿಜಕ್ಕೂ ದುರಂತ.
ಪ್ರತಿಷ್ಠೆ, ಹಮ್ಮು ಬಿಮ್ಮುಗಳನ್ನೇ ರಾಜಕಾರಣದ ಮುಕುಟಮಣಿಯೆಂದು ಭಾವಿಸುವ ಅನೇಕರಿಗೆ ಸರದಾರಿ ಯಾವುದೆಂದು ತೋರಿದ್ದಷ್ಟೇ ಅಲ್ಲದೆ ಬಡಜನರ ಸೇವೆಯನ್ನೇ ಸ್ವಾತಂತ್ರ್ಯದ ಮಹೋದ್ದೇಶವೆಂದು ಸಾರಿದ ಮಹಾಮಹಿಮ ಸದಾಶಿವರಾಯರನ್ನೂ, ಲಬ್ಧ ಅವಕಾಶವನ್ನು ಜನಸೇವೆಗೆಂದೇ ಪೂರ್ಣ ಮೀಸಲಿಟ್ಟು ಸ್ವಂತದ ಬಗ್ಗೆ ಕಿಂಚಿತ್ತೂ ಯೋಚಿಸದೆ ತನ್ನ ಬುದ್ಧಿಬಲವನ್ನು ನಾಡಿನೇಳಿಗೆಗೆ ಸಮರ್ಪಿಸಿದ ಗಾಡ್ಗೀಳರನ್ನೂ ಅವರ ಜನ್ಮದಿನದಂದು ನೆನೆದು ಕೃತಾರ್ಥರಾಗೋಣ.