ಅ. 5ರಿಂದ ಹುಬ್ಬಳ್ಳಿಯಲ್ಲಿ ಸಾಯಿಬಾಬಾ ಸಮಾಧಿ ಉತ್ಸವ
ಹುಬ್ಬಳ್ಳಿ: ಇಲ್ಲಿನ ಹಳೇ ಕೋರ್ಟ್ ವೃತ್ತದ ಬಳಿಯ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಅಕ್ಟೋಬರ್ 5ರಿಂದ 13ರವರೆಗೆ ಶ್ರೀ ಸಾಯಿಬಾಬಾರ 106ನೇ ಸಮಾಧಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಮಾಧಿ ಉತ್ಸವದ ಮುಖ್ಯ ಅತಿಥಿ ಕ.ವಿ.ವಿ. ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ. ಜೆ.ಎಮ್. ಚಂದುನವರ ಅ. 5ರಂದು ಶನಿವಾರ ಸಂಜೆ 7 ಗಂಟೆಗೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಅ. 6ರಂದು ರವಿವಾರ ಬೆಳಗ್ಗೆ 6 ಗಂಟೆಗೆ ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣದ ಉದ್ಘಾಟನೆಯನ್ನು ಸಾಯಿ ಭಕ್ತರಾದ ರಮೇಶ ಪಾಟೀಲ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ 4 ಗಂಟೆಗೆ 16 ವರ್ಷದೊಳಗಿನ ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್ (ಸಾಂಪ್ರದಾಯಿಕ) ಸ್ಪರ್ಧೆ ಏರ್ಪಡಿಸಲಾಗಿದ್ದು, ನಯನಾ ಧೋಂಗಡಿ ಉದ್ಘಾಟಿಸಲಿದ್ದಾರೆ.
ಅ. 12 ರಂದು ಶ್ರೀ ಸಾಯಿ ಸಮಾಧಿ ಉತ್ಸವ ಜರುಗಲಿದ್ದು; ಬೆಳಗ್ಗೆ 5.15ಕ್ಕೆ ಕಾಕಡಾರತಿ, ಮಂಗಲಸ್ನಾನ, ಅಲಂಕಾರ, ಪೂಜೆ, ಆರತಿ, ಬೆ. 8.30ಕ್ಕೆ ಸಚ್ಚರಿತ್ರೆ ಪಾರಾಯಣದೊಂದಿಗೆ ಮುಕ್ತಾಯವಾಗುವುದು. ಬೆಳಗ್ಗೆ 7ರಿಂದ 11ರವರೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ ಮುಂತಾದ ವಿಧಿವಿಧಾನಗಳು ನೆರವೇರಲಿವೆ.
ಮುಂಜಾನೆ 11 ಗಂಟೆಗೆ ಮುಖ್ಯ ಉತ್ಸವ ಸಮಾರಂಭದ ಉದ್ಘಾಟನೆಯನ್ನು ರೈಲ್ವೆ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ಆರೋಗ್ಯ ನಿರ್ದೇಶಕರಾದ ಡಾ|| ಮಾಲತಿ ಎಲ್.ಕೆ. ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಈಶ್ವರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸಂತೋಷ ವೆರ್ಣೆಕರ್, ವಿಶ್ವ ವೇದಾಂತ ಪರಿಷತ್ ಹಾಗೂ ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರಾದ ಶಾಮಾನಂದ ಬಿ. ಪೂಜೇರಿ, ಅಪ್ಪಾಜಿ ಜನಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಿಜಯಕುಮಾರ ಎಮ್. ಅಪ್ಪಾಜಿ ಭಾಗವಹಿಸಲಿದ್ದಾರೆ. ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ ಅಧ್ಯಕ್ಷರಾದ ಮಹಾದೇವ ಎಚ್. ಮಾಶ್ಯಾಳ ನೇತೃತ್ವ ವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ಮಂದಿರದಿಂದ ವಿವಿಧ ವಾದ್ಯಮೇಳಗಳು, ಭಜನಾ ಕಾರ್ಯಕ್ರಮಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಸಾಯಿಬಾಬಾರ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ರಥೋತ್ಸವ ಮತ್ತು ಸಾಯಿಬಾಬಾರ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಲಾಗುವುದು. ಶ್ರೀ ಸಾಯಿ ರಥೋತ್ಸವ ಹಾಗೂ ಭಾವಚಿತ್ರ ಮೆರವಣಿಗೆಗೆ ಹಿರಿಯ ವೈದ್ಯರಾದ ಡಾ|| ಕೆ. ಶಶಿಧರ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿ ಶ್ರೀ ಸಾಯಿ ಮಂದಿರದಲ್ಲಿ ಅಖಂಡ ಭಜನೆ (ಜಾಗರಣೆ) ಕಾರ್ಯಕ್ರಮ ಜರುಗುವುದು.
ಅ. 13ರಂದು ಸಂಜೆ 7 ಗಂಟೆಗೆ ಶ್ರೀಸಾಯಿ ಸಮಾಧಿ ಉತ್ಸವದ ಮುಕ್ತಾಯ ಸಮಾರಂಭ ಜರುಗಲಿದೆ.