ಆರೋಗ್ಯದ ರಾಮಬಾಣ-ಸೋಲಿಯಸ್ ಪುಷ್‌ಅಪ್..!
ವೈದ್ಯಕೀಯ ಆವಿಷ್ಕಾರಗಳು ನಿರಂತರ. ಇಂತಹುದೇ ಒಂದು ಆಧುನಿಕ ಸಂಶೋಧನೆ ಸೋಲಿಯಸ್ ಪುಷ್-ಅಪ್. ಸೋಲಿಯಸ್ ಮಸಲ್ ಎಂಬ ಸ್ನಾಯು, ಕಾಲಿನ ಮೀನಖಂಡದಲ್ಲಿರುವ ಅತ್ಯಂತ ಮಹತ್ವದ ಅಂಗ. ಇದನ್ನು ಎರಡನೇ ಹೃದಯ ಎಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ಪುಷ್‌ಅಪ್ ಮೂಲಕ ಬಲ ತುಂಬಿದರೆ ದೇಹಾರೋಗ್ಯಕ್ಕೆ ರಾಮಬಾಣವೇ ಸರಿ.
ಹೌದು. ಸೋಲಿಯಸ್ ಪುಷ್‌ಅಪ್, ನವ ತಲೆಮಾರಿನ ಅಥವಾ ಜೀವನ ಶೈಲಿಯ ರೋಗಗಳೆಂದು ಕರೆಸಿಕೊಳ್ಳುವ ಬೊಜ್ಜು, ಮಿತಿ ಮೀರಿದ ತೂಕ ಹಾಗೂ ಸಕ್ಕರೆ ಕಾಯಿಲೆಯಂಥವುಗಳನ್ನು ದೂರ ಇಡುತ್ತದೆ. ಅಲ್ಲದೇ ದೇಹದ ಕೆಟ್ಟ ಮತ್ತು ಹಾನಿಕಾರಕ ಕೊಬ್ಬಿನ ಅಂಶವಾದ `ಟ್ರೈಗ್ಲಿಸರೈಡ್' ತಗ್ಗಿಸುತ್ತದೆ.
ಲೈಫ್ ಸ್ಟೈಲ್ ಡಿಸೀಸಿಸ್ ಮತ್ತು ಡಿಸ್ ಆಡರ‍್ಸ್ ಎನಿಸಿಕೊಳ್ಳುವ ಇವುಗಳಿಂದ ದೂರ ಇರುವುದಕ್ಕಾಗಿಯೇ ಸಾಕಷ್ಟು ಖರ್ಚು ವೆಚ್ಚಗಳನ್ನೂ ಮಾಡಬೇಕಾಗಿ ಬಂದಿದೆ. ಇವುಗಳಲ್ಲಿ ವೈದ್ಯಕೀಯ ವೆಚ್ಚದ ಜೊತೆಗೆ, ಜಿಮ್ ಮತ್ತು ಪೂರಕ ಖರ್ಚುಗಳೂ ಸೇರಿವೆ. ಆಧುನಿಕ ಸಂಕೀರ್ಣ ಬದುಕಿಗೆ ಇಂಥವು ಹೆಚ್ಚುವರಿ ಖರ್ಚುವೆಚ್ಚಗಳೇ ಸರಿ. ಹೀಗಾಗಿಯೇ ಪರ್ಯಾಯ ಮತ್ತು ವೆಚ್ಚದಾಯಕವಲ್ಲದ ಉಪಾಯಗಳಿಗಾಗಿ ಮನುಷ್ಯ ಇಂದು ಕಾತರನಾಗಿದ್ದಾನೆ.
ಇದಕ್ಕೆ ಉತ್ತರ ರೂಪವಾಗಿ ಒದಗಿ ಬಂದಿರುವುದೇ ಸೋಲಿಯಸ್ ಪುಷ್‌ಅಪ್ ವ್ಯಾಯಾಮ. ಹೆಸರು ಕ್ಲಿಷ್ಟಕರ ಎನಿಸಿದರೂ ಬರ‍್ಯಾವ ವ್ಯಾಯಾಮಗಳೂ ಇಲ್ಲದಷ್ಟು ಸರಳ ರೂಪದ ಪುಷ್‌ಅಪ್ ಪ್ರಕಾರವಿದು. ಜೊತೆಗೆ ನಯಾಪೈಸೆ ಖರ್ಚಿಲ್ಲದ, ಪ್ರತಿಯೊಬ್ಬರೂ ಕೂತಲ್ಲಿಯೇ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾದ ಅತ್ಯಪರೂಪದ ವಿಶಿಷ್ಟ ವ್ಯಾಯಾಮ ಕೂಡ.
ಇದನ್ನು ಮಾಡುವುದಕ್ಕೆ ಯಾವ ಉಪಕರಣವನ್ನೂ ಖರೀದಿಸಬೇಕಾಗಿಲ್ಲ. ಪ್ರತ್ಯೇಕ ಬೂಟ್, ಹೊಸ ಟ್ರ್ಯಾಕ್ ಸೂಟ್ ಅಥವಾ ಪ್ಯಾಂಟ್-ಟೀ ಶರ್ಟ್, ಸಾಕ್ಸ್ ಹೀಗೆ ಯಾವುವೂ ಬೇಡ. ಹೋಗಲಿ. ಇದಕ್ಕಾಗಿ ಪ್ರತ್ಯೇಕ ಜಾಗ, ಇಲ್ಲವೇ ತುಂಬ ವಿಶಾಲ ಸ್ಥಳ ಯಾವುದರ ಅವಶ್ಯಕತೆಯೂ ಇಲ್ಲ. ಶೂನ್ಯ ವೆಚ್ಚದ ಈ ವ್ಯಾಯಾಮ ಕೇವಲ ದಿನದ ಅರ್ಧ ತಾಸು ಸಮಯವನ್ನು ಮಾತ್ರ ಬಯಸುತ್ತದೆ. ಇದುವೇ ಸೋಲಿಯಸ್ ಪುಷ್‌ಅಪ್‌ನ ಸೊಬಗು.
ಪ್ರತಿಯೊಬ್ಬರೂ ಅತ್ಯಂತ ಸುಲಭವಾಗಿ ಮತ್ತು ಯಾವುದೇ ಖರ್ಚು ವೆಚ್ಚಗಳಿಲ್ಲದೇ ಕೂತಲ್ಲಿಯೇ ಮಾಡಬಹುದಾದ ವ್ಯಾಯಾಮ ಇದಾಗಿದೆ. ದಿನದಲ್ಲಿ ಒಂದಿಷ್ಟು ಸಮಯ ಹೊಂದಿಸಿಕೊಂಡು ಇದ್ದ ಸ್ಥಳದಲ್ಲಿಯೇ ಮಾಡಬಹುದಾದ ಈ ಪುಷ್-ಅಪ್‌ಗಳು ಅದ್ಭುತ ಆರೋಗ್ಯ ಲಾಭಗಳನ್ನು ತರುತ್ತವೆ. ಈ ಸ್ನಾಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಹಿಮ್ಮಡಿಗಳ ಪುಷ್‌ಅಪ್ ಅವಶ್ಯಕ. ಹೃದಯ ಆರೋಗ್ಯಕ್ಕಾಗಿ ಕೈಗಳನ್ನು ಬಳಸಿ ಮಾಡುವ ಪುಷ್ ಅಪ್‌ಗಳಂತೆಯೇ ಹಿಮ್ಮಡಿಯನ್ನು ಬಳಸಿ ಇದನ್ನು ಮಾಡಬೇಕು. ಸೋಲಿಯಸ್ ಪುಷ್‌ಅಪ್‌ನಿಂದ ಬೊಜ್ಜು ಮತ್ತು ದೇಹದ ತೂಕ ನಿಯಂತ್ರಣಕ್ಕೆ ಬರುತ್ತವೆ. ಒಟ್ಟಾರೆ ಆರೋಗ್ಯಕ್ಕೆ ಇದು ರಾಮಬಾಣ.
ಹೇಗೆ ಮಾಡಬೇಕು?
ಕುರ್ಚಿಯ ಮೇಲೆ ಕುಳಿತು ಎರಡೂ ಪಾದಗಳನ್ನು ಮೊದಲು ನೆಲದ ಮೇಲೆ ಇಡಬೇಕು.
ಕೆಲ ಸೆಕೆಂಡಿನ ನಂತರ ಹಿಮ್ಮಡಿಗಳನ್ನು ಸಾಧ್ಯವಾದಷ್ಟು ಮೇಲಕ್ಕೆ ಎತ್ತಬೇಕು. ಆದರೆ ಪಾದದ ಬೆರಳುಗಳನ್ನು ನೆಲದ ಮೇಲೇ ಇರಿಸಿರಬೇಕು.
ಒಂದು ಅಥವಾ ಎರಡು ಸೆಕೆಂಡುಗಳ ನಂತರ ಮೇಲಕ್ಕೆ ಎತ್ತಿದ ಹಿಮ್ಮಡಗಳನ್ನು ಪುನಃ ನೆಲಕ್ಕೆ ಒತ್ತಬೇಕು.
ಹೀಗೆ ಹಿಮ್ಮಡಗಳನ್ನು ಮೇಲೆತ್ತಿ-ನೆಲಕ್ಕೆ ಒತ್ತುವ ಈ `ಸೋಲಿಯಸ್ ಪುಷ್‌ಅಪ್'ಅನ್ನು ೧೦ರಿಂದ ೨೦ ಬಾರಿ ಒಂದು ಸೆಟ್‌ನಲ್ಲಿ ಮಾಡಬೇಕು. ದಿನಕ್ಕೆ ಅರ್ಧಗಂಟೆ ಇದನ್ನು ಮಾಡುವುದು ಸೂಕ್ತ.
ಒಟ್ಟಾರೆ ಆರೋಗ್ಯವಲ್ಲದೇ, ಸದೃಢ ಕಾಲುಗಳು ಮತ್ತು ಆಕರ್ಷಕ ನಡಿಗೆ (ವಾಕಿಂಗ್ ಸ್ಟೈಲ್) ಪ್ರಯೋಜನ ಕೂಡ ದೊರೆಯುತ್ತದೆ.