For the best experience, open
https://m.samyuktakarnataka.in
on your mobile browser.

ಆಶಾಭಾವನೆಗಳ ಭಾರತ

07:10 AM Dec 15, 2024 IST | Samyukta Karnataka
ಆಶಾಭಾವನೆಗಳ ಭಾರತ

ಕೇಂದ್ರದ ಇಬ್ಬರು ಸಚಿವರು ವಿಕಸಿತ ಭಾರತದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಆದರೆ ನಿಜಸ್ಥಿತಿ ಬೇರೆ ಇದೆ. ಮೋದಿ ಹೇಳುವಂತೆ ಹಿಂದಿನ ಸರ್ಕಾರಗಳು ಏನೂ ಮಾಡೇ ಇಲ್ಲ. ಎಲ್ಲವನ್ನೂ ಸಾಧಿಸಿರುವುದು ಈಗಲೇ ಆಗಿದ್ದರೆ ಭಾರತದ ಹಿಂದಿನ ಇತಿಹಾಸ ಏನೂ ಇಲ್ಲವೇ ಎಂಬ ಪ್ರಶ್ನೆ ಹಾಗೆ ಉಳಿಯುತ್ತದೆ. ವಿದೇಶಾಂಗ ಸಚಿವ ಜೈಶಂಕರ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬೇಕಾದಷ್ಟು ಅಧ್ಯಯನ ಮಾಡಿದವರು. ಅದೇರೀತಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ದೇಶದ ಆರ್ಥಿಕ ಬೆಳವಣಿಗೆ ಬಗ್ಗೆ ಸುಂದರ ಚಿತ್ರಣ ನೀಡುತ್ತಿದ್ದಾರೆ. ನಮ್ಮ ದೇಶದ ವ್ಯಾಪಾರ- ವ್ಯವಹಾರ ನೋಡಿದರೆ ತಿಳಿಯುತ್ತದೆ. ರಫ್ತು ೪೩೭ ಬಿಲಿಯನ್ ಡಾಲರ್, ಆಮದು ೬೭೭ ಬಿಲಿಯನ್ ಡಾಲರ್. ವ್ಯಾಪಾರದಲ್ಲಿ ಕೊರತೆ ೨೪೦ ಬಿಲಿಯನ್ ಡಾಲರ್. ವಿದೇಶಿ ನೇರ ಬಂಡವಾಳ ಹೂಡಿಕೆ ೨೧-೨೨ ರಲ್ಲಿ ೮೪.೩೪ ಬಿಲಿಯನ್ ಡಾಲರ್ ಇದ್ದದ್ದು ಈಗ ೭೦.೯೫ ಬಿಲಿಯನ್ ಡಾಲರ್‌ಗೆ ಇಳಿದಿದೆ. ನಮ್ಮ ದೇಶದ ಬೆಳವಣಿಗೆ ಬಗ್ಗೆ ಜೈಶಂಕರ್ ಅವರಿಗೆ ಬಹಳ ಅಭಿಮಾನ. ಕಡು ಬಡವರಿಗೆ ಪ್ರತಿ ತಿಂಗಳೂ ೫ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದು ದೊಡ್ಡ ಕಲ್ಯಾಣ ಕಾರ್ಯಕ್ರಮವಾಗಿ ಕಂಡರೆ, ನಮಗೆ ನಿರುದ್ಯೋಗ ಮತ್ತು ಕಡಿಮೆ ಕೂಲಿ ಪಡೆಯುವ ಗ್ರಾಮೀಣ ಜನರ ಮುಖಗಳು ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ಕೊರೊನಾ ಕಾಲದಲ್ಲಿ ನಮ್ಮಲ್ಲೇ ಸಿದ್ಧಪಡಿಸಿದ ಕೋವ್ಯಾಕ್ಸೀನ್ ಲಸಿಕೆ ಶೇ.೮೦ ರಷ್ಟು ಜನರಿಗೆ ನೆಮ್ಮದಿ ನೀಡಿತು. ಕೋವಿಶೀಲ್ಡ್ ಶೇಕಡ ೯೦ ರಷ್ಟು ಜನರಿಗೆ ರಕ್ಷಣೆ ಒದಗಿಸಿತು. ಆಸ್ಟಾçಜನಿಕ ತಯಾರಿಸಿ ೧೬೦ ಕೋಟಿ ಜನರಿಗೆ ಕೋವಿಶೀಲ್ಡ್ ನೀಡಲು ನೆರವು ನೀಡಿತು.
ರೈಲ್ವೆ ಸಚಿವ ವೈಷ್ಣವ್ ಜಿಡಿಪಿ ಪ್ರಸ್ತಾಪಿಸಿ ಒಟ್ಟಾರೆ ಜಿಡಿಪಿ ಬೆಳವಣಿಗೆ ಶೇ. ೬-೮ ಎಂದು ಚಿತ್ರಿಸಿದ್ದಾರೆ. ಆದರೆ ನಿಜವಾದ ಬೆಳವಣಿಗೆ ಶೇ.೪.೯೯. ಇದರಲ್ಲಿ ಕೊರೊನಾ ಕಾಲವೂ ಸೇರಿದೆ. ಸರ್ಕಾರದ ಮೂಲ ಬಂಡವಾಳ ಹೂಡಿಕೆಯಲ್ಲೂ ಇಳಿಮುಖ ಕಂಡು ಬಂದಿದೆ. ಸರ್ಕಾರದ ಮೂಲಬಂಡವಾಳ ಹೂಡಿಕೆ ಶೇ.೪.೭ ಇದ್ದದ್ದು ಶೇ.೩.೮ಕ್ಕೆ ಇಳಿದಿದೆ. ಉತ್ಪಾದನಾ ವಲಯದಲ್ಲೂ ೨೦೧೪ ರಲ್ಲಿದ್ದ ಶೇ. ೧೫.೦೭ ಬೆಳವಣಿಗೆ ಈಗ ಶೇ. ೧೨.೮೪ಕ್ಕೆ ಇಳಿದಿದೆ.
ಎಲ್ಲವನ್ನೂ ಒಳಗೊಂಡಿರುವ ಬೆಳವಣಿಗೆ ಈಗಲೂ ಚರ್ಚೆಯ ವಿಷಯವಾಗಿದೆ. ಅದನ್ನು ಈಗ ಪುರಸ್ಕರಿಸುವಂತಿಲ್ಲ, ತಿರಸ್ಕರಿಸುವ ಹಾಗೂ ಇಲ್ಲ. ೧೦ ವರ್ಷಗಳಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಮತ್ತು ಆರ್‌ಬಿಐ ನಿಯಮಗಳು ಸೆಬಿ ನೀತಿ ಸಂಕೀರ್ಣತೆಯನ್ನು ಸೃಷ್ಟಿಸಿದೆ ಎಂದು ಲೆಕ್ಕಪರಿಶೋಧಕರು ಅಭಿಪ್ರಾಯ ತಿಳಿಸಿದ್ದಾರೆ. ವೀಸಾ, ಸಬ್‌ರಿಜಿಸ್ಟಾçರ್, ಬ್ಯಾಂಕ್ ಕಚೇರಿಗಳಲ್ಲಿ ಖಾತೆ ತೆರೆಯಲು ಹೋದರೆ ಎಲ್ಲ ಪುಟಗಳಿಗೆ ಸಹಿ ಮಾಡುವುದೇ ದೊಡ್ಡ ಕೆಲಸವಾಗುತ್ತದೆ. ನಿಜವಾದ ಪ್ರಗತಿ ಆರಂಭವಾಗಿದ್ದು ೧೯೯೧. ಉದಾರೀಕರಣ ಆರಂಭವೇ ಈಗ ಆರ್ಥಿಕ ಸ್ವಾತಂತ್ರö್ಯದ ಅರಂಭ ಎಂದು ಹೇಳಬಹುದು. ೧೯೯೭ ರಲ್ಲಿ ಜಾಗತಿಕ ಆರ್ಥಿಕ ಸಂಕಷ್ಟ ಆರಂಭವಾಯಿತು. ೨೦೦೮ರಲ್ಲಿ ಎಲ್ಲ ದೇಶಗಳು ಆರ್ಥಿಕ ಸಂಕಷ್ಟ ಎದುರಿಸುವುದು ಕಷ್ಟವಾಯಿತು. ಇದರಿಂದ ೨೦೦೮ ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮವನ್ನು ಸರ್ಕಾರಗಳು ಎದುರಿಸುವುದು ಅನಿವಾರ್ಯವಾಯಿತು. ೨೦೧೬ ರಲ್ಲಿ ನೋಟು ರದ್ದತಿ, ೨೦೨೦ರಲ್ಲಿ ಕೊರೊನಾ ಎದುರಿಸುವುದು ಅನಿವಾರ್ಯವಾಯಿತು. ಎಲ್ಲ ಸರ್ಕಾರಗಳೂ ಪ್ರಗತಿಯಲ್ಲಿ ಹೆಜ್ಜೆಯನ್ನಿಟ್ಟಿರುವುದನ್ನು ಕಾಣಬಹುದು. ಆದರೆ ಮೋದಿ ಅವರಿಗೆ ಇದು ಯಾವುದೂ ಕಾಣುತ್ತಿಲ್ಲ. ಆರ್‌ಬಿಐ ಗರ‍್ನರ್ ಆಗಿದ್ದ ರಂಗರಾಜನ್, ಬಿಮಲ್ ಜಲಾನ್ ಶೂನ್ಯ ಬಂಡವಾಳದ ಬ್ಯಾಂಕ್ ಖಾತೆ ತೆರೆಯುವುದಕ್ಕೆ ಬೀಜಾಂಕುರ ಮಾಡಿದ್ದರು. ಆಧಾರ್ ಕಾರ್ಡ್ ಸೆ.೨೯, ೨೦೧೦ ಮತ್ತು ಮೊಬೈಲ್ ಬಳಕೆ ೧೯೯೫ ಜುಲೈ ೩೧ ರಂದು ಆರಂಭಗೊಂಡವು. ಇಂದಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆರ್‌ಬಿಐ ಮಾಸಿಕ ವರದಿಯೇ ತಿಳಿಸುತ್ತದೆ.
ಇಂದು ನಾವು ಕಾಣುತ್ತಿರುವುದು ವಿಕಸಿತ ಭಾರತವನ್ನಲ್ಲ. ಆಶಾ ಗೋಪುರಗಳನ್ನು ಕಟ್ಟುತ್ತಿರುವ ಭಾರತವನ್ನು ಮಾತ್ರ. ಯಾವುದೇ ಆಶಾ ಗೋಪುರವಾಗಲಿ ಅದಕ್ಕೆ ಭದ್ರ ಬುನಾದಿ ಇರಬೇಕು. ಈಗ ಕಂಡು ಬರುತ್ತಿರುವುದು ಅಡಿಪಾಯವೇ ಇಲ್ಲದ ಗಾಳಿ ಗೋಪುರಗಳು ತಲೆ ಎತ್ತಿ ನಿಲ್ಲುತ್ತಿವೆ.
ಇವುಗಳು ಜನರಲ್ಲಿ ಭ್ರಮೆಗಳನ್ನು ಹುಟ್ಟಿಸುತ್ತವೆಯೇ ಹೊರತು ನಿಜವಾದ ಚಿತ್ರಣ ನೀಡುವುದಿಲ್ಲ. ಮುಂದಿನ ದಿನಗಳ ಬೆಳವಣಿಗೆಯ ಮೇಲೆ ವಿಶ್ವಾಸ ಇರಬೇಕು. ಅದಕ್ಕೆ ಇಂದಿನ ಬೆಳವಣಿಗೆ ತಳಹದಿಯನ್ನು ನಿರ್ಮಿಸಬೇಕು. ಇದನ್ನು ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ.
ಹಿಂದಿನ ಎಲ್ಲ ಸಾಧನೆಗಳನ್ನು ಅಲ್ಲಗಳೆಯುವುದು ಸುಲಭ. ಆದರೆ ಅಂಕಿಅಂಶಗಳು ಸುಳ್ಳು ಹೇಳುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು. ಈಗ ಎಲ್ಲವನ್ನೂ ಜನರ ಮುಂದಿಡುವ ಕಾಲ ಬಂದಿದೆ. ಅದಕ್ಕೆ ತಕ್ಕಂತೆ ನಡೆಯುವುದು ಅಗತ್ಯ.

Tags :