ಉತ್ತರಕನ್ನಡದಾದ್ಯಂತ ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ನದಿಗಳು, ಗುಡ್ಡ ಕುಸಿತ, ಮನೆಗಳಿಗೆ ನುಗ್ಗಿದ ನೀರು!
ಕಾರವಾರ: ಉತ್ತರಕನ್ನಡ ಜಿಲ್ಲೆಯಾಧ್ಯಂತ ವ್ಯಾಪಕವಾಗಿ ಮಳೆಯಾಗತೊಡಗಿದೆ. ಭಾರಿ ಮಳೆಗೆ ಕುಮಟಾದ ಕತಗಾಲ ಬಳಿ ಚಂಡಿಕಾ ನದಿ, ಹೊನ್ನಾವರದಲ್ಲಿ ಗುಂಡಬಾಳ ಹೊಳೆ ಉಕ್ಕಿ ಹರಿಯುತ್ತಿದ್ದು, ಹೊನ್ನಾವರದ ವರ್ನಕೇರಿ ಬಳಿ ಬೆಂಗಳೂರು-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಹಲವು ಹೆದ್ದಾರಿ ಸಂಪರ್ಕಗಗಳು ಕಡಿತಗೊಂಡಿದ್ದು, ಚಿಕ್ಕನಕೋಡ್ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ ಕಾರಣ ಮನೆಯಲ್ಲಿದ್ದವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನ ಬಹುತೇಕ ತಾಲ್ಲೂಕುಗಳಲ್ಲಿ ಬುಧವಾರದಿಂದ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಗುರುವಾರ ವ್ಯಾಪಕವಾಗಿ ಸುರಿಯಲಾರಂಭಿಸಿದೆ. ಪರಿಣಾಮ ಬಹುತೇಕ ಹಳ್ಳಕೊಳ್ಳಗಳು ತುಂಬಿಕೊಂಡಿದ್ದು, ನದಿಗಳು ಉಕ್ಕಿ ಹರಿಯಲಾರಂಭಿಸಿವೆ.
ಕುಮಟಾದ ಕತಗಾಲ ಬಳಿ ಹರಿಯುವ ಚಂಡಿಕಾ ನದಿ ಶಿರಸಿ ಕುಮಟಾ ರಾಷ್ಟ್ರೀಯ 766ಇ ಹೆದ್ದಾರಿಯಲ್ಲಿ ಸೇತುವೆ ಮೇಲೆ ಉಕ್ಕಿ ಹರಿಯುತ್ತಿದ್ದು ಶಿರಸಿ ಕುಮಟಾ ಸಂಪರ್ಕ ಕಡಿತಗೊಂಡಿದೆ. ಮಾತ್ರವಲ್ಲದೆ ಉಕ್ಕಿ ಹರಿಯುತ್ತಿರುವ ನೀರಿನಲ್ಲಿಯೇ ಖಾಸಗಿ ಬಸ್ ದಾಟಿಸಲು ಮುಂದಾದಾಗ ಅರ್ಧದಲ್ಲಿಯೇ ಬಸ್ ಸಿಲುಕಿಕೊಂಡಿದ್ದು ಪ್ರಯಾಣಿಕರನ್ನು ಬಸ್ ನಿಂದ ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಎರಡು ಬದಿ ಸಂಪರ್ಕ ಸಾಧ್ಯವಾಗದ ಕಾರಣ ಮುಂಜಾನೆಯಿಂದಲೇ ವಾಹನಗಳು ಸಾಲುಗಟ್ಟಿದ್ದು ಕೆಲ ವಾಹನ ಸವಾರರು ವಾಪಸ್ಸ್ ತೆರಳಿದ್ದಾರೆ.
ಇನ್ನು ಭಾರಿ ಮಳೆಗೆ ಹೊನ್ನಾವರ ತಾಲೂಕಿನ ವರ್ನಕೇರಿ ಗ್ರಾಮದ ಬಳಿ ಗುಡ್ಡ ಕುಸಿತವಾಗಿದ್ದು, ಕಾರವಾರ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಭಾರಿ ಮಳೆಯಿಂದಾಗಿ ಒಮ್ಮೇಲೆ ಬಂಡೆ, ಗಿಡಮರಗಳ ಸಹಿತ ಗುಡ್ಡ ಕುಸಿದಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಇದೀಗ ಹೆದ್ದಾರಿಯಲ್ಲಿ ಕುಸಿದಿರುವ ಮಣ್ಣನ್ನು ತೆರವು ಮಾಡಲು ಸ್ಥಳೀಯ ಆಡಳಿತ ಮುಂದಾಗಿದೆ.
ಇನ್ನು ಹೊನ್ನಾವರದ ಗುಂಡಬಾಳ ನದಿಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಗ್ರಾಮಗಳ ಶಾಲೆಗೆ ಸ್ಥಳೀಯ ಆಡಳಿತದ ಕೋರಿಕೆ ಮೇರೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರಜೆ ಘೋಷಿಸಿದ್ದಾರೆ. ಇಲ್ಲಿನ ಅನಿಲಗೋಡ್ ಜನತಾ ವಿದ್ಯಾಲಯ, ಹಿರಿಯ ಪ್ರಾಥಮಿಕ ಶಾಲೆ, ಗುಂಡಬಾಳ ಶಾಲೆ ನಂ-2, ಗುಂಡಿಬೈಲ್ ಶಾಲೆ ನಂ-2, ವಲ್ಕಿಯ ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್, ಗಂಜಿಗೆರೆ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇನ್ನು ಗುಂಡಬಾಳ ನದಿಯಲ್ಲಿ ನೆರೆ ಪ್ರವಾಹದಿಂದ ಚಿಕ್ಕನಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಜನಕೇರಿ, ಹಿತ್ತಲಕೇರಿ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳಲ್ಲಿರುವ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಇದಲ್ಲದೆ ಅಘನಾಶಿನಿ ನದಿ ನೀರಿನ ಹರಿವು ಕೂಡ ತೀವ್ರವಾಗಿದ್ದು, ನೀರು ನದಿಯ ಮಟ್ಟಕ್ಕಿಂತ ಮೇಲೆ ಬರುತ್ತಿದ್ದು, ನದಿ ಪಾತ್ರದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವ ಕಾರಣ ಐಗಳಕುರ್ವೆ ಗ್ರಾಮದ ಸಾರ್ವಜನಿಕರಿಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಆಡಳಿತದಿಂದ ಸೂಚಿಸಲಾಗಿದೆ.
ಇನ್ನು ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿಯೂ ಅಬ್ಬರದ ಮಳೆಯಾಗುತ್ತಿದ್ದು, ಗಂಗಾವಳಿ ನದಿ ನೀರಿನ ಪ್ರಮಾಣ ಕೂಡ ಹೆಚ್ಚಳವಾಗಿದೆ. ಪ್ರವಾಸಿಗರ ಸುರಕ್ಷತಾ ಕಾರಣದಿಂದ ಯಲ್ಲಾಪುರ ತಾಲೂಕಿನ ಶಿರಲೆ ಪಾಲ್ಸ್ , ಕಾನೂರು ಪಾಲ್ಸ್ , ಕುಳಿ ಮಾಗೋಡು ಪಾಲ್ಸ್ ಗಳಲ್ಲಿ ಪ್ರವಾಸಿಗರ ವೀಕ್ಷಣೆಗೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಈ ಬಗ್ಗೆ ಅರಣ್ಯ ಇಲಾಖೆಯಿಂದ ನಿಷೇಧ ಫಲಕ ಹಾಕಿ ಸೂಚನೆ ನೀಡಲಾಗಿದೆ.
ಅಪ್ಪರ್ ಕಾನೇರಿ ಆಣೆಕಟ್ಟೆಯ ಪ್ರವಾಹದ ಮುನ್ನೆಚ್ಚರಿಕೆ: ಕಾಳಿ ನದಿ ಜಲ ವಿದ್ಯುತ್ ಹಂತ-1 ಯೋಜನೆಯ ಅಪ್ಪರ್ ಕಾನೇರಿ ಆಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳ ಬೀಳುತ್ತಿರುವುದರಿಂದ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಅಪ್ಪರ್ ಕಾನೇರಿ ಆಣೆಕಟ್ಟೆಯ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಲಿದೆ. ಅಪ್ಪರ್ ಕಾನೇರಿ ಜಲಾಶಯದ ಗರಿಷ್ಟ ಮಟ್ಟವು 615.50 ಮೀಟರ್‌ಗಳಿದ್ದು ಜು.4 ರಂದು 605.85 ಮೀಟರ್ ನೀರು ತುಂಬಿದೆ. ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರೆದಲ್ಲಿ ಕಡಿಮೆ ಜಲಸಂಗ್ರಹಣ ಸಾಮರ್ಥ್ಯವುಳ್ಳ ಅಪ್ಪರ್ ಕಾನೇರಿ ಜಲಾಶಯದ ಗರಿಷ್ಠ ಮಟ್ಟವು ಶೀಘ್ರದಲ್ಲಿಯೇ ತುಂಬುವ ಸಾಧ್ಯತೆ ಇರುವುದರಿಂದ ಆಣೆಕಟ್ಟು ಸುರಕ್ಷತೆಗಾಗಿ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುತ್ತದೆ. ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಈ ಮೂಲಕ ಎಚ್ಚರಿಸಲಾಗಿದೆ. ಆಣೆಕಟ್ಟೆಯ ಕೆಳಭಾಗದ ನದಿಯ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲದ ಅವಧಿಯಲ್ಲಿ ನಡೆಸದಂತೆ ಸೂಚಿಸಲಾಗಿದೆ.