For the best experience, open
https://m.samyuktakarnataka.in
on your mobile browser.

ಉತ್ತರ ಕನ್ನಡ : ಭಾರಿ ಗಾಳಿ-ಮಳೆಯಿಂದ ಹೆಸ್ಕಾಂಗೆ 9.82 ಕೋಟಿ ರೂ.ನಷ್ಟ

02:19 PM Jul 24, 2024 IST | Samyukta Karnataka
ಉತ್ತರ ಕನ್ನಡ   ಭಾರಿ ಗಾಳಿ ಮಳೆಯಿಂದ ಹೆಸ್ಕಾಂಗೆ 9 82 ಕೋಟಿ ರೂ ನಷ್ಟ

ಧರೆಗುರುಳಿದ 5402 ವಿದ್ಯುತ್ ಕಂಬಗಳು, 536 ಟಿ.ಸಿ.ಗಳಿಗೆ ಹಾನಿ

ಉತ್ತರ ಕನ್ನಡ : ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಗೆ ಅಂದಾಜು 9.82 ಕೋಟಿ ರೂ. ನಷ್ಟವುಂಟಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ವಿಪರೀತ ಮಳೆ ಮತ್ತು ಗಾಳಿಯಿಂದ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತ, ಮರ-ಗಿಡಗಳು ಧರೆಗುರುಳುತ್ತಿವೆ. ಈ ಮಧ್ಯೆ ಇದುವರೆಗೆ 5,404 ವಿದ್ಯುತ್‌ ಕಂಬಗಳು, 536 ವಿದ್ಯುತ್ ಪರಿವರ್ತಕಗಳು, 184.43 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ. ಬಿಡುವು ನೀಡದೇ ಸುರಿಯುತ್ತಿರುವ ಮಳೆಯ ನಡುವೆಯೇ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿ ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ದಾಂಡೇಲಿ, ಅಂಕೋಲಾ, ಕಾರವಾರ, ಕುಮಟಾ ಹೊನ್ನಾವರ ಹಾಗೂ ಭಟ್ಕಳ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಒಟ್ಟು 5,402 ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಅವುಗಳ ಪೈಕಿ 5,215 ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಲಾಗಿದೆ. ಇನ್ನುಳಿದ 187 ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ನಡೆಯುತ್ತಿದೆ. 536 ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದು, ಅವುಗಳ ಪೈಕಿ 531 ಟಿ.ಸಿ.ಗಳ ದುರಸ್ತಿ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಕೇವಲ 5 ಟಿ.ಸಿಗಳ ದುರಸ್ತಿ ಕಾರ್ಯ ಮಾತ್ರ ಬಾಕಿಯಿದೆ. ಅದೇ ರೀತಿ ಹಾನಿಯಾದ 184.43 ಕಿ.ಮೀ. ಉದ್ದದ ವಿದ್ಯುತ್‌ ತಂತಿಯಲ್ಲಿ 176.69 ಕಿ.ಮೀ. ಉದ್ದದ ವಿದ್ಯುತ್ ತಂತಿಯನ್ನು ದುರಸ್ತಿ ಮಾಡಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಹೆಸ್ಕಾಂ ನಿರಂತರ ಶ್ರಮ ವಹಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೂನ್- ಜುಲೈ ನಲ್ಲೇ ಹೆಚ್ಚು ಹಾನಿ:

ಜೂನ್ 1 ರಿಂದ ಜುಲೈ 22 ವರೆಗಿನ ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದ ಹೆಸ್ಕಾಂಗೆ ಹೆಚ್ಚು ನಷ್ಟವುಂಟಾಗಿದೆ. ಈ ಅವಧಿಯಲ್ಲಿ ಒಟ್ಟು 1,957 ವಿದ್ಯುತ್ ಕಂಬಗಳು, 120 ವಿದ್ಯುತ್ ಪರಿವರ್ತಕಗಳು ಹಾಗೂ 91.76 ಕಿ.ಮೀ ಉದ್ದದ ವಿದ್ಯುತ್ ತಂತಿ ಹಾನಿಯಾಗಿದ್ದು, ಇದರಿಂದ ಅಂದಾಜು 3.49 ಕೋಟಿ ರೂ. ಹಾನಿಯಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕುವಾರು ನಷ್ಟದ ಮಾಹಿತಿ

ತಾಲೂಕು ನಷ್ಟ (ಲಕ್ಷ ರೂ.ಗಳಲ್ಲಿ)

ಶಿರಸಿ 148.53
ಸಿದ್ದಾಪುರ 88.90
ಯಲ್ಲಾಪುರ 141.80
ಮುಂಡಗೋಡ 72.31
ಹಳಿಯಾಳ 28.30
ಜೋಯಿಡಾ 49.52
ದಾಂಡೇಲಿ 4.64
ಅಂಕೋಲಾ 88.54
ಕಾರವಾರ 38.96
ಕುಮಟಾ 121.48
ಹೊನ್ನಾವರ 157.28
ಭಟ್ಕಳ 42.25

ಒಟ್ಟು 9.82 ಕೋಟಿ ರೂ.