ಉದ್ಯಮಿ ಕೊಲೆ: ಅತ್ತೆ, ಪತ್ನಿ ಬಂಧನ
ಬೆಳಗಾವಿ: ಮೈ ತುಂಬಾ ಸಾಲದ ಹೊರೆ ಹೊತ್ತಿರುವ ಗಂಡನನ್ನು ಖಲಾಸ್ ಮಾಡಿ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಲು ಹೋದ ಪತ್ನಿ ಹಾಗೂ ಆಕೆಯ ತಾಯಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಪೀರನವಾಡಿಯ ನಿವಾಸಿ ನಗರದಲ್ಲಿ ಉದ್ಯಮ ನಡೆಸಿಕೊಂಡಿದ್ದ ವಿನಾಯಕ ಜಾಧವ(೪೮) ಎಂಬಾತ ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಸಾಲ ಮಾಡಿಕೊಂಡು ಊರು ಬಿಟ್ಟು ನಾಪತ್ತೆಯಾಗಿದ್ದ. ವಾಸವಿದ್ದ ಪೀರನವಾಡಿಯ ಮನೆ ಕೂಡಾ ಸಾಲಕ್ಕೆ ಅಡಮಾನ ಇಡಲಾಗಿತ್ತು. ಹಾಗಾಗಿ ಮನೆಗೆ ಬಂದು ಸಾಲಗಾರರು ಕಾಟ ಕೊಡುವುದಕ್ಕೆ ಶುರು ಮಾಡಿದ್ದರು. ಮನೆ ಮಾರಿಯಾದರೂ ನಮ್ಮ ಸಾಲ ತೀರಿಸಿ ಎಂದು ದುಂಬಾಲು ಬಿದ್ದಿದ್ದರು. ವಾಸಕ್ಕೆ ಇರುವ ಒಂದೇ ಮನೆ ಮಾರಿ ನಾವೆಲ್ಲಿ ಹೋಗೋದು? ಸಾಲ ಯಾರು ತಗೊಂಡಿದ್ದಾರೋ ಅವರನ್ನೇ ಕೇಳಿ ಎಂದು ಜಾಧವ ಪತ್ನಿ ರೇಣುಕಾ ಸಾಲಗಾರರನ್ನು ಜೋರು ಮಾಡಿ ಕಳುಹಿಸುತ್ತಿದ್ದಳು. ರೇಣುಕಾ ಮನೆಯಲ್ಲಿ ತನ್ನೊಂದಿಗೆ ತನ್ನ ತಾಯಿ ಶೋಭಾಳನ್ನು ಇರಿಸಿಕೊಂಡಿದ್ದಳು.
ಈತನ್ಮಧ್ಯೆ ವಿನಾಯಕ ಜಾಧವ ಮೂರು ವರ್ಷಗಳ ನಂತರ ಜುಲೈ ೨೯ರಂದು ತಡರಾತ್ರಿ ಧುತ್ತೆಂದು ಮನೆಗೆ ಬಂದಿದ್ದ. ಕಂಠಪೂರ್ತಿ ಕುಡಿದಿದ್ದ ಆತ ಪತ್ನಿಯ ಜತೆ ಜಗಳಕ್ಕೆ ನಿಂತಿದ್ದಾನೆ. ಗಂಡನ ವರ್ತನೆಯಿಂದ ಪತ್ನಿ ರೇಣುಕಾ ಕಂಗೆಟ್ಟು ಹೋಗಿದ್ದಾಳೆ.
ಪತಿಯ ವಿಪರೀತ ವರ್ತನೆ, ಸಾಲಗಾರರ ಕಾಟ ಎರಡಕ್ಕೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಪತಿಯನ್ನೇ ಖಲಾಸ್ ಮಾಡುವ ಕಠಿಣ ನಿರ್ಧಾರಕ್ಕೆ ರೇಣುಕಾ ಬಂದಿದ್ದಾಳೆ. ಕುಡಿದ ಅಮಲಿನಲ್ಲಿ ಜಗಳವಾಡಿ ಮಲಗಿದ್ದ ಗಂಡನ ಕುತ್ತಿಗೆ ಬಿಗಿದು ದಿಂಬಿನಿಂದ ಉಸಿರುಗಟ್ಟಿಸಿ ತಾಯಿ, ಮಗಳು ಆತನನ್ನು ಕೊಂದಿದ್ದಾರೆ. ನಂತರ ಇದೊಂದು ಸಹಜ ಸಾವು ಎಂಬಂತೆ ಬಿಂಬಿಸಲು ಮುಂದಾಗಿದ್ದಾರೆ.
ಆದರೆ ವಿನಾಯಕ ಸಹೋದರ ಅರುಣ್ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಹೊರಬರುತ್ತಿದ್ದಂತೆಯೇ ವಿನಾಯಕನನ್ನು ಉಸಿರುಕಟ್ಟಿಸಿ ಕೊಂದ ಅಂಶ ಬಯಲಾಗಿದೆ. ಪತ್ನಿ ಹಾಗೂ ಅತ್ತೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಯಲಾಗಿದೆ. ಸದ್ಯ ಗ್ರಾಮೀಣ ಪೊಲೀಸರು ರೇಣುಕಾ ಜಾಧವ ಹಾಗೂ ಶೋಭಾ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.