ಎಚ್ಎಂಪಿವಿ ಬಗ್ಗೆ ಭಯ ಬೇಡ
ಬೆಂಗಳೂರು: ಎಚ್ಎಂಪಿವಿ ವೈರಾಣು ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಆರೋಗ್ಯ ಇಲಾಖೆಯವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗಾಂಧಿಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್ಎಂಪಿವಿ ಬಗ್ಗೆ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದು ಆತಂಕಾರಿಯಾದ ವೈರಸ್ ಅಲ್ಲ ಹಾಗೂ ಅದು ಚೀನಾದಿಂದ ಬಂದಿಲ್ಲ. 2001ರಿಂದಲೇ ಈ ವೈರಾಣು ಪತ್ತೆಯಾಗಿದ್ದು, ಎಚ್ಎಂಪಿವಿ ವೈರಸ್ ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಾಗಿ ತಗಲುತ್ತದೆ. ಆದರೆ ಅದು ಅಪಾಯಕಾರಿಯಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದ್ರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಗೃಹ ಸಚಿವ ಜಿ. ಪರಮೇಶ್ವರ ಅವರು ಏರ್ಪಡಿಸಿದ್ದ ಔತಣಕೂಟ ರದ್ದಾಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ಗೊತ್ತಿಲ್ಲ ಎಂದರು. ಔತಣಕೂಟ ಕರೆದಿರುವುದಾಗಲಿ ಅಥವಾ ರದ್ದಾಗಿರುವುದಾಗಲಿ ನನಗೆ ತಿಳಿದಿಲ್ಲ. ಅವರೊಂದಿಗೆ ಮಾತನಾಡುವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.