For the best experience, open
https://m.samyuktakarnataka.in
on your mobile browser.

ಏಕ ಚುನಾವಣೆ ಮಸೂದೆಗೆ ಕೇಂದ್ರ ಸಂಪುಟ ಅಸ್ತು

11:09 PM Dec 12, 2024 IST | Samyukta Karnataka
ಏಕ ಚುನಾವಣೆ ಮಸೂದೆಗೆ ಕೇಂದ್ರ ಸಂಪುಟ ಅಸ್ತು

ನವದೆಹಲಿ: ಬಹುಚರ್ಚಿತ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದೇ ಅಧಿವೇಶನದಲ್ಲೆ ಸದನದಲ್ಲಿ ಅದನ್ನು ಮಂಡಿಸುವ ಸಾಧ್ಯತೆ ಇದೆ. ಈ ಮಸೂದೆಗೆ ಈಗಾಗಲೇ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿರುವುದರಿಂದ, ಇದನ್ನು ಜಂಟಿ ಸದನ ಸಮಿತಿಯ ಪರಾಮರ್ಶೆಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಕೆಲವೊಂದು ಮಹತ್ವದ ವಿಷಯಗಳಿರುವುದ ರಿಂದ ಡಿಸೆಂಬರ್ ೧೩ ಮತ್ತು ೧೪ರಂದು ಎಲ್ಲ ಸಂಸದರೂ ಹಾಜ ರಾಗಲೇಬೇಕೆಂದು ಬಿಜೆಪಿ ಸಂಸದರಿಗೆ ವಿಪ್ ಕೂಡ ಜಾರಿ ಮಾಡಿದೆ. ಆಗಲೇ ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ.
ದೇಶಾದ್ಯಂತ ಒಂದೇ ಬಾರಿ ಚುನಾವಣೆ ನಡೆಸುವ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿರುವ ಶಿಫಾರಸುಗಳನ್ನು ಸೆಪ್ಟೆಂಬರ್‌ನಲ್ಲಿಯೇ ಒಪ್ಪಿಕೊಳ್ಳಲಾಗಿದೆ. ಪ್ರಜಾಪ್ರಭುತ್ವದ ಇನ್ನಷ್ಟು ಚೈತನ್ಯಪೂರ್ಣವಾಗಲು ಇದು ನೆರವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪದೇ ಪದೇ ಚುನಾವಣೆಗಳು ಬರುವುದರಿಂದ ಆಡಳಿತಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಐದು ವರ್ಷಕ್ಕೆ ಒಂದೇ ಬಾರಿ ಚುನಾವಣೆ ನಡೆಸುವುದು ಒಳ್ಳೆಯದು ಎನ್ನುವುದು ಆಡಳಿತಾರೂಢ ಬಿಜೆಪಿ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಮಾಜಿ ರಾಷ್ಟçಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ನೀಡಿದ್ದ ವರದಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಅಂಗೀಕರಿಸಲಾಗಿತ್ತು. ಈ ಶಿಫಾರಸು ಗಳನ್ನು ಅಳವಡಿಸಿಕೊಂಡು ಮಸೂದೆ ಸಿದ್ಧವಾಗಿದ್ದು, ಇದಕ್ಕೆ ಸಂಪುಟದ ಒಪ್ಪಿಗೆ ದೊರೆತಿದೆ. ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು. ಅದಾದ ೧೦೦ ದಿನಗಳೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಒಂದೇ ಬಾರಿ ಚುನಾವಣೆ ನಡೆಸುವುದರಿಂದ ಜಿಡಿಪಿ ಶೇಕಡ ೧ರಿಂದ ೧.೫ರಷ್ಟು ಹೆಚ್ಚಾಗಲಿದೆ ಎಂದು ಹಣಕಾಸು ತಜ್ಞರು ಅಂದಾಜಿಸಿದ್ದಾರೆ ಎಂದು ಕೋವಿಂದ್ ಬುಧವಾರ ಹೇಳಿದ್ದರು.

ಮುಂದೇನು?
ಸಮಿತಿಯ ಶಿಫಾರಸುಗಳನ್ನು ಮತ್ತು ಮಸೂದೆಯನ್ನು ಮೋದಿ ಸರ್ಕಾರ ಒಪ್ಪಿಕೊಂಡಿರುವುದರಿಂದ ಅದನ್ನು ಸದನದಲ್ಲಿ ಮಂಡಿಸಲಾಗುವುದು.
ಲೋಕಸಭೆ ಮತ್ತು ವಿಧಾನಸಭೆಗಳಿಗೆ ಸಂಬಂಧಿಸಿದಂತೆ ಒಂದು, ಮುನಿಸಿಪಲ್ ಮತ್ತು ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಮತ್ತೊಂದು ಮಸೂದೆಗಳಿಗೆ ಅನುಮೋದನೆ ಪಡೆದುಕೊಳ್ಳಬೇಕು.
ಈ ಮಸೂದೆಯನ್ನು ಒಮ್ಮತದ ಮೂಲಕ ಅನುಮೋದನೆ ಪಡೆದುಕೊಳ್ಳುವ ಯತ್ನವಾಗಿ ಪರಿಶೀಲನೆಗೆ ಜಂಟಿ ಸದನ ಸಮಿತಿಗೂ ನೀಡುವ ಸಾಧ್ಯತೆ ಇದೆ.

ಬಿಜೆಪಿ ಸಮರ್ಥನೆ ಏನು?
ಒಂದೇ ಸಲ ಚುನಾವಣೆ ನಡೆಸಿದರೆ ಭಾರೀ ಪ್ರಮಾಣದಲ್ಲಿ ಹಣ ಉಳಿತಾಯ
ಏಕ ಚುನಾವಣೆಯಿಂದ ದೇಶದ ಜಿಡಿಪಿ ಶೇಕಡ ೧-೧.೫ರಷ್ಟು ಹೆಚ್ಚಳವಾಗಲಿದೆ
ಪದೇಪದೇ ಚುನಾವಣೆ ನೀತಿ ಸಂಹಿತೆ ಜಾರಿಯಿಂದ ದೇಶದ ಅಭಿವೃದ್ಧಿಗೆ ಅಡ್ಡಿ

ಪ್ರತಿಪಕ್ಷಗಳ ಆಕ್ಷೇಪ
ಏಕ ಚುನಾವಣೆಯಿಂದ ಪ್ರಜಾಪ್ರಭುತ್ವದ ಮೂಲ ರಚನೆಗೆ ಧಕ್ಕೆ ಬರಲಿದೆ
ಇಂತಹ ಕಾನೂನು ಜನರ ಗಮನ ಬೇರೆಡೆಗೆ ಸೆಳೆಯುವ ತಂತ್ರವಷ್ಟೆ
ಇದು ಪ್ರಾದೇಶಿಕ ದನಿಗಳನ್ನು ಕುಗ್ಗಿಸುತ್ತದೆ. ಒಕ್ಕೂಟ ವ್ಯವಸ್ಥೆಗೆ ಇದರಿಂದ ಹಾನಿ