ಐವನ್ ಮನೆಗೆ ಕಲ್ಲು ತೂರಾಟ ಖಂಡಿಸಿ ಕಾಂಗ್ರೆಸ್ ಪಾದಯಾತ್ರೆ
ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮನೆಗೆ ಕಲ್ಲು ತೂರಾಟ ನಡೆದ ಪ್ರಕರಣವನ್ನು ವಿರೋಧಿಸಿ ದ ಕ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಐವನ್ ಡಿಸೋಜಾ ಅವರ ಮನೆಯಿಂದ ಪಾದಯಾತ್ರೆ ಹಾಗೂ ಕಂಕನಾಡಿ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸಹಿತ, ಜಿಲ್ಲಾ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವೆಲೆನ್ಸಿಯಾದಿಂದ ಕಂಕನಾಡಿ ವೃತ್ತದವರೆಗೆ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನ ಕೂಗುತ್ತಾ ಪಾದಯಾತ್ರೆ ನಡೆಸಿದರು.
ಬಳಿಕ ಕಂಕನಾಡಿ ವೃತ್ತದ ಬ್ಯಾರಿಕೇಡ್‌ಗಳೊಂದಿಗೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಅಲ್ಲೇ ರಸ್ತೆಯ ಫುಟ್ಪಾತ್ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು.
ಕೆಪಿಸಿಸಿ ವಕ್ತಾರ ಎಂ. ಜಿ. ಹೆಗಡೆ ಮಾತನಾಡಿ, ಬಿಜೆಪಿಯವರು ಕರಾವಳಿಯಲ್ಲಿ ಯಾವ ಹಿಂಸೆಯ ಸಂಸ್ಕೃತಿಯನ್ನು ತರಲು ಇಚ್ಚಿಸುತ್ತಿದ್ದಾರೋ ಅದಕ್ಕೆ ವಿರುದ್ಧ ಸಂಸ್ಕೃತಿಯನ್ನು ರಾಹುಲ್ ಗಾಂಧಿ ಕಾಂಗ್ರೆಸ್ನವರಿಗೆ ಪಾಠ ಮಾಡಿದ್ದಾರೆ. ಕೈಲಾಗದ ಹೇಳಿಕೆ ನೀಡಿ ಜಿಲ್ಲೆಯ ಶಾಂತಿ ಕದಡುವ ಬಿಜೆಪಿ ಆಟ ಕರಾವಳಿಯಲ್ಲಿ ನಡೆಯದು. ನಾರಾಯಣ ಗುರುಗಳ ಸಂದೇಶ ಒಪ್ಪಿದ ಕರಾವಳಿಯಲ್ಲಿ ಸತ್ಯ ಮತ್ತು ಅಹಿಂಸೆಯ ಚಳವಳಿಯೇ ನಿಲ್ಲುವುದು. ಆದ್ದರಿಂದ ಕರಾವಳಿಯಲ್ಲಿ ಗಾಂಧಿಯೇ ಗೆಲ್ಲುವುದು ಹೊರತು ಗೋಡ್ಸೆಯಲ್ಲ ಎಂದರು.
ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಐವನ್ ಡಿಸೋಜಾರವರು ಬಡವರು, ರಿಕ್ಷಾದವರಿಗೆ ತೊಂದರೆ ಆದಾಗ ಪ್ರತಿಭಟನೆ ಮಾಡುವ ಬಿಜೆಪಿಯ ವಿರುದ್ಧ ತನ್ನ ಶಕ್ತಿಯನ್ನು ಬೆಳೆಸಿಕೊಂಡವರು. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆಯುವವರು. ಇಂತಹ ಐವನ್ರನ್ನು ಹೆಡೆಮುರಿಕಟ್ಟಬೇಕೆಂಬ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ದೂರಿದರು.
ಐವನ್ ಡಿಸೋಜಾ ಮಾತನಾಡಿ, ಬಿಜೆಪಿಯ ಇಂತಹ ಯಾವುದೇ ದಾಳಿಗೆ ಕಾಂಗ್ರೆಸ್ ಆಗಲಿ, ಐವನ್ ಆಗಲಿ ಜಗ್ಗುವುದಿಲ್ಲ. ಜನವಿರೋಧಿಯಾಗಿ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಯಾವ ಪರಿಣಾಮ ಆಗಲಿದೆ ಎಂಬುದು ಶ್ರೀಲಂಕಾ, ಬಾಂಗ್ಲಾ, ಉಗಾಂಡ, ಅಮೆರಿಕ ಮೊದಲಾದ ರಾಷ್ಟ್ರಗಳಲ್ಲಿ ನಡೆದಿರುವುದನ್ನು ಕಂಡಿದ್ದೇವೆ. ಹಾಗಾಗಿ ಬಾಂಗ್ಲಾ ದೇಶವನ್ನು ಉಲ್ಲೇಖಿಸಿ ಮಾತನಾಡಿದ್ದೇನೆಯೇ ಹೊರತು ಬಾಂಗ್ಲಾದೇಶ ಮಾದರಿ ಎಂದು ಹೇಳಿಲ್ಲ ಎಂದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಪಿ.ವಿ. ಮೋಹನ್, ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪದ್ಮರಾಜ್,ಮಮತಾ ಗಟ್ಟಿ, ಸುರೇಶ್ ಬಳ್ಳಾಲ್, ಶಾಹುಲ್ ಹಮೀದ್, ಶಾಲೆಟ್ ಪಿಂಟೋ, ಅಪ್ಪಿ, ಪ್ರವೀಣ್ ಚಂದ್ರ ಆಳ್ವ, ವಿಶ್ವಾಸ್ ಕುಮಾರ್ ದಾಸ್, ಅನಿಲ್ ಕುಮಾರ್, ಸಲೀಂ, ಪ್ರಕಾಶ್ ಸಾಲಿಯಾನ್, ವಿಕಾಸ್ ಶೆಟ್ಟಿ, ಸುಹಾನ್ ಆಳ್ವ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಮೊಟಕು: ಪಾದಯಾತ್ರೆ ಐವನ್ ಡಿ. ಸೋಜ ಮನೆಯಿಂದ ಆರಂಭಗೊಂಡು ಪಿವಿಎಸ್‌ನಲ್ಲಿರುವ ದ. ಕ. ಜಿಲ್ಲಾ ಬಿಜೆಪಿ ಕಚೇರಿ ತನಕ ಸಾಗಲಿದೆ ಎಂದು ವಕ್ತಾರ ಎಂ. ಜಿ. ಹೆಗಡೆ ತಿಳಿಸಿದ್ದರು. ಆದರೆ ಕಂಕನಾಡಿ ವೃತ್ತಕ್ಕೆ ಮೊಟಕುಗೊಂಡಿತು. ಇತ್ತ ಬಿಜೆಪಿ ಕಚೇರಿ ಮುಂದೆಯೂ ನೂರಾರು ಬಿಜೆಪಿ ಕಾರ್ಯಕರ್ತರು ಸೇರಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.