ಒತ್ತಾಯ ಪೂರ್ವಕ ಬಂದ್.. ಸಿಕ್ಕ ಸಿಕ್ಕವರಿಗೆ ಕಪಾಳಮೋಕ್ಷ
ಧಾರವಾಡ: ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ನೀಡಿದ್ದಾರೆನ್ನಲಾದ ಹೇಳಿಕೆ ವಿರೋಧಿಸಿ ಇಂದು ಹುಬ್ಬಳ್ಳಿ, ಧಾರವಾಡ ಅವಳಿನಗರ ಬಂದ್‌ಗೆ ದಲಿತಪರ ಸಂಘಟನೆಗಳು ಕರೆ ನೀಡಿವೆ.
ಬೆಳಿಗ್ಗೆ 6 ಗಂಟೆಯಿಂದಲೇ ದಲಿತಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಲ್ಲಿ ತೆರೆಯಲಾಗಿದ್ದ ಹೋಟೆಲ್‌ಗಳಿಗೆ ನುಗ್ಗಿದ ಪ್ರತಿಭಟನಾಕಾರರು ಅವುಗಳನ್ನು ಒತ್ತಾಯಾಪೂರ್ವಕವಾಗಿ ಬಂದ್ ಮಾಡಿಸಿದ ದೃಶ್ಯಗಳು ಕಂಡುಬಂದವು.
ಶ್ರೀನಗರ ವೃತ್ತದಲ್ಲಿ ರಸ್ತೆ ಮೇಲೆ ಇಡ್ಲಿ, ಸಾಂಬಾರ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳದಿಂದ ಹೋಗುವಂತೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಲ್ಲದೇ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಯಾವುದೇ ಒತ್ತಾಯಪೂರ್ವಕ ಬಂದ್ ಮಾಡಬಾರದು ಎಂದು ಆದೇಶವಿದ್ದರೂ ಈ ರೀತಿ ನಡೆದುಕೊಂಡಿರುವುದು ಕೆಂಗಣ್ಣಿಗೆ ಗುರಿಯಾಗಿದ.
ಅದೇ ರೀತಿ ಸರ್.ಸಿದ್ದಪ್ಪ ಕಂಬಳಿ ಕಾನೂನು ಕಾಲೇಜು ಕಾರ್ಯಾರಂಭ ಮಾಡಿದ್ದನ್ನು ಗಮನಿಸಿದ ಪ್ರತಿಭಟನಾಕಾರರು ಆ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ್ದಾರೆ. ಅಲ್ಲದೇ ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸಿ ಉಪನ್ಯಾಸಕರನ್ನೂ ತಳ್ಳಾಡಿ ಕಾಲೇಜು ಬಂದ್ ಮಾಡಿಸಿದ್ದಾರೆ.