ಕನ್ನಡ ಪರಿಚಾರಿಕೆ ಬದುಕಿಗದುವೆ ನಂಬಿಕೆ
ನಾಯಿಮರಿ ನಾಯಿಮರಿ ತಿಂಡಿ ಬೇಕೆ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು', 'ಯೇಳ್ಕೊಳ್ಳಾಕ್ ಒಂದ್ ಊರು ತಲೆಮೇಲೆ ಒಂದ್ ಸೂರು ಮಲಗಾಕೆ ಭೂಮ್ತಾಯಿ ಮಂಚ' ಇತ್ಯಾದಿ ಮನಮೋಹಕ ಪ್ರಾಸಬದ್ಧ ಹಾಡುಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಭಾಷೆಯ ಸೊಗಡನ್ನೂ, ವಿಶಾಲ ವೈವಿಧ್ಯತೆಯನ್ನೂ ವಿಶ್ವಕ್ಕೆ ಪರಿಚಯಿಸಿದ ಜಿ.ಪಿ. ರಾಜರತ್ನಂ ಕನ್ನಡನಾಡಿನ ಜನಪ್ರಿಯ ಸಾಹಿತಿಗಳಲ್ಲಿ ಅಗ್ರಗಣ್ಯರು, ಬಹುಮಾನ್ಯರು. ಚಾಮರಾಜನಗರದ ಗುಂಡ್ಲುಪೇಟೆಯ ಜಿ.ಪಿ. ಗೋಪಾಲಕೃಷ್ಣ ಅಯ್ಯಂಗಾರ್ ದಂಪತಿಗೆ ಜನಿಸಿದ ರಾಜಾ ಅಯ್ಯಂಗಾರರು ರಾಜರತ್ನಂ ಆಗಿ ಕನ್ನಡ ಸಾಹಿತ್ಯ ಲೋಕದ ರತ್ನವೇ ಆದದ್ದು ಸಾಂಸ್ಕೃತಿಕ ರಂಗದ ಅದೃಷ್ಟ. ಕನ್ನಡ, ಆಂಗ್ಲ ಭಾಷೆಯಲ್ಲಿ ಅಪಾರ ಹಿಡಿತ ಸಾಧಿಸಿ ತಮ್ಮ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರೂ ಅದ್ಯಾಕೋ ಆ ಕೆಲಸ ಬೇಸರ ತರಿಸಿ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿದ ರಾಜರತ್ನಂ ವೈಯಕ್ತಿಕ ಬದುಕಿನಲ್ಲಿ ನಡೆದ ಆಘಾತವು ಅವರನ್ನು ನೋವಿನ ಕಡಲಿಗೆ ದೂಡಿತು. ಬಹಳಷ್ಟು ಸಮಯದ ಬಳಿಕ ಚೇತರಿಸಿದ ರಾಜರತ್ನಂ, ಕನ್ನಡ ಪಂಡಿತ ಹುದ್ದೆಯನ್ನು ಅಲಂಕರಿಸಿ ಮತ್ತೆ ಅಧ್ಯಾಪಕ ವೃತ್ತಿಗೆ ಹಿಂದಿರುಗಿದರು. ತಮ್ಮ ಉತ್ಕೃಷ್ಟ ಬೋಧನಾ ಶೈಲಿ ಹಾಗೂ ಹಾಸ್ಯಗಂಭೀರ ನಡವಳಿಕೆಯಿಂದ ವಿದ್ಯಾರ್ಥಿಪ್ರಿಯರಾಗಿ ಗುರುತಿಸಿದ ರಾಜರತ್ನಂ ಯಾರಿಗೂ ತಿಳಿಯದಂತೆ ಮಾಡುತ್ತಿದ್ದ ಸಹಾಯ ಅನಂತ. ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದ ವಿದ್ಯಾರ್ಥಿಗಳ ವಸತಿ, ಬೋಧನಾ ಶುಲ್ಕವನ್ನು ಶಿಷ್ಯರಿಗೆ ತಿಳಿಯದಂತೆ ತಾವೇ ಪಾವತಿಸಿ ಧನ್ಯತೆ ಅನುಭವಿಸುತ್ತಿದ್ದ ಅವರ ಮನಸ್ಸು ನಿರ್ಮಲ. ಅನ್ನದಾನ ಆ ಕ್ಷಣದ ಹಸಿವನ್ನು ಇಂಗಿಸಿದರೆ, ವಿದ್ಯಾದಾನವು ಜೀವನಪೂರ್ತಿ ಆ ವ್ಯಕ್ತಿಯನ್ನು ಕಾಯುತ್ತದೆ ಎಂದೇ ನಂಬಿ, ಅದರಂತೆ ರಾಜನಂತೆ ಬಾಳಿದ ರತ್ನರು ಸಂಪಾದಿಸಿದ ಅತ್ಯಮೂಲ್ಯ ಆಸ್ತಿಯೇ ಅವರ ವಿದ್ಯಾರ್ಥಿ ವೃಂದ. ಮಾಸ್ತಿ ವೆಂಕಟೇಶ ಅಯ್ಯಂಗಾರರ ಸ್ಫೂರ್ತಿಯುತ ಮಾತು ಹಾಗೂ ವಿಶ್ವಾಸಪೂರ್ಣ ಪ್ರೇರಣೆಯಿಂದ ಪ್ರಭಾವಿತರಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿದ ರಾಜರತ್ನಂ ಪ್ರಾಸ ಪ್ರಯೋಗಗಳಿಗೆ ಪ್ರಸಿದ್ಧರು. 'ಸಾಹಿತ್ಯವನ್ನು ರಚಿಸುವುದಷ್ಟೇ ಸಾಹಿತಿಯ ಜವಾಬ್ದಾರಿಯಲ್ಲ, ಆತ ಸಾಹಿತ್ಯ ಆರಾಧಕನೂ ಪರಿಚಾರಕನೂ ಸಂಘಟಕನೂ ಆಗಿರಬೇಕು. ಭಾಷೆಯ ವಿಲಾಸದ ಬೀಜವನ್ನು ಒಮ್ಮೆ ತರುಣರ ಎದೆಯೆಂಬ ಭೂಮಿಯಲ್ಲಿ ಬಿತ್ತಿ ನೋಡಿ. ನಾವು ಹಿರಿಯರು ಆಶ್ಚರ್ಯ ಪಡುವಂತೆ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ಎಳೆಯರು ತರುವುದರಲ್ಲಿ ಸಂಶಯವೇ ಇಲ್ಲ. ಕಿರಿಯರ ಬೆನ್ನುತಟ್ಟುವ ಕಾರ್ಯ ನಮ್ಮಿಂದಾಗಬೇಕು' ಎಂದ ರಾಜರತ್ನಂ ತಮ್ಮ ವಿದ್ಯಾರ್ಥಿಗಳಲ್ಲಿ ಲೇಖನಾಸಕ್ತಿ ಮೂಡಿಸಲು ವಿದ್ಯಾರ್ಥಿ ವಿಚಾರ ಪುಸ್ತಕ ಸಂಪುಟಗಳನ್ನು ಹೊರತಂದರು. ಕನ್ನಡ ಸಾಹಿತ್ಯದಲ್ಲಿ ಹೊಸ ಬಗೆಯ ಅವಕಾಶ ಸೃಷ್ಟಿಸಿ ಅದುವರೆಗೆ ಮಾಮೂಲಿಯಾಗಿದ್ದ ಪಥ ಮತ್ತು ಪಂಥದಿಂದ ಕೊಂಚ ಆಚೆ ಸರಿದು ಕಾವ್ಯರಸ ವರ್ಷಧಾರೆಗೈದ ರಾಜರತ್ನಂ ಪದಗಳ ಜೊತೆ ಆಟವಾಡುತ್ತಲೇ ರತ್ನನ ಪದಗಳನ್ನು ಕೂಡಿಸಿದರು. ಸಂಧಿ, ಸಮಾಸಗಳೊಡನೆ ಹಗ್ಗಜಗ್ಗಾಟ ನಡೆಸುವವರಂತೆ ಸಾಹಿತ್ಯ ವೇದಿಕೆಯನ್ನು ಬಳಸಿದ ಅವರ 'ತುತ್ತೂರಿ' ಕನ್ನಡದ ಸರ್ವೋಕೃಷ್ಟ ಕೃತಿ. ಭಾಷಾ ವಿಲಾಸವನ್ನು ಸಂಸ್ಕೃತದಲ್ಲಷ್ಟೇ ಓದಿ ಆನಂದಿಸಿದ್ದವರಿಗೆ ತುತ್ತೂರಿಯು ಹೊಸ ಲೋಕವನ್ನೇ ತೆರೆದಿಟ್ಟಿತು. ಪದಮಿತ್ರನೆಂದೇ ಸ್ನೇಹಿತರ ವಲಯದಲ್ಲಿ ಪ್ರಸಿದ್ಧರಾಗಿದ್ದ ಅವರ ನಾಗನ ಪದಗಳು ಅಕ್ಷರ ವಿಶ್ವದ ನಿಜರತ್ನ. ಬುದ್ಧ-ಮಹಾವೀರರ ಸಾಹಿತ್ಯವನ್ನು ಪರಿಚಯಿಸಿದ ರಾಜರತ್ನಂ, ಶ್ರೀಮಂತ ಕನ್ನಡವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಧೀಮಂತ. ಸಾಹಿತ್ಯಿಕವಾಗಿ ಆಳಕ್ಕೆ ನುಗ್ಗಿದ ಅವರು ತಮ್ಮನ್ನು ತಾವು ಸಾಹಿತಿ ಎಂದು ಕರೆಸಿಕೊಳ್ಳುವುದಕ್ಕಿಂತ 'ನಾನು ಕನ್ನಡ ಸಾಹಿತ್ಯ ಪರಿಚಾರಕ' ಎಂದೇ ಘೋಷಿಸಿದರು. ಹಾರ, ತುರಾಯಿ, ಸಮ್ಮಾನಗಳಿಗಿಂತಲೂ ಅಗತ್ಯವಾದುದು ಸಾಹಿತ್ಯದ ವಿಕಾಸವೆಂದೇ ಬಲವಾಗಿ ನಂಬಿ ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿ, ಅಧ್ಯಕ್ಷತೆ ವಹಿಸಿ, ಸಹೃದಯರ ಪುರಸ್ಕಾರಗಳಿಗೆ ಪಾತ್ರರಾಗಿ ನಿಸ್ಪೃಹ ಜೀವನ ನಡೆಸಿ ನೂರಾರು ಯುವಸಾಹಿತಿಗಳನ್ನು ಪರೋಕ್ಷವಾಗಿಯೂ ಸೃಷ್ಟಿಸಿ ಜಿ.ಪಿ. ರಾಜರತ್ನಂ, ಕರ್ನಾಟಕದ ಸಾಹಿತ್ಯರತ್ನರಷ್ಟೇ ಅಲ್ಲ, ಜಾಗತಿಕ ವಿದ್ವಲೋಕದ ಧ್ರುವತಾರೆಯೂ ಹೌದು. ಹಾಡೊಂದನ್ನು ಹಿಂದುಸ್ತಾನಿ, ಕರ್ನಾಟಕ ಶಾಸ್ತ್ರೀಯ, ಜಾನಪದ, ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಿ ಕನ್ನಡದಲ್ಲಿ ಮಾತ್ರ ಕಾಣಸಿಗುವ ಅತಿವಿಶಿಷ್ಟ ಸುಗಮ ಸಂಗೀತ ಕ್ಷೇತ್ರವನ್ನು ಪರಿಚಯಿಸಿ ಬೆಳೆಸಿದ ದಿಗ್ಗಜ ಪಾಂಡೇಶ್ವರ ಕಾಳಿಂಗರಾಯರು 'ಕಿನ್ನರ ಕಂಠದ ಕನ್ನಡ ಕೋಗಿಲೆ' ಎಂಬ ಉಪಾಧಿಗೆ ಪಾತ್ರರಾದ ಕನ್ನಡಮ್ಮನ ಸೇವಕ. ಬಹುಶ್ರುತ ಯಕ್ಷಗಾನ ಕಲಾವಿದ ನಾರಾಯಣರಾವ್-ನಾಗರತ್ನಮ್ಮ ದಂಪತಿ ಮಗನಾಗಿ ಉಡುಪಿಯಲ್ಲಿ ಜನಿಸಿದ ಕಾಳಿಂಗರಾಯರು ಸೋದರಮಾವನ ದೇವರನಾಮ ಅಭ್ಯಾಸದಿಂದ ಬಾಲ್ಯದಲ್ಲೇ ಭಾವರಾಗತಾಳಗಳ ಆಕರ್ಷಣೆಗೆ ಒಳಗಾದರು. ಶಾಲಾದಿನದ 'ಚಂದ್ರಹಾಸ' ಪಾತ್ರದ ನಿರರ್ಗಳ ವಾಕ್ಪಟುತ್ವ, ಹಿಂಜರಿಕೆಯಿಲ್ಲದ ಅಭಿನಯವನ್ನು ಮೆಚ್ಚಿದ ಬ್ರಿಟಿಷ್ ಅಧಿಕಾರಿಯಿಂದ ಚಿನ್ನದ ಪದಕ ಪಡೆದ ಬಾಲಕ, ರಂಗನಾಥ ಭಟ್ಟರ ನಾಟಕ ಶಾಲೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ನಾಟಕರಂಗದ ಪಟ್ಟುಗಳನ್ನು ಬಹಳ ಬೇಗನೆ ಕರಗತಗೊಳಿಸಿ, ಸಂಗೀತ ಶಿಕ್ಷಣವನ್ನು ಪಡೆದು ಕರ್ನಾಟಕ ಮತ್ತು ಹಿಂದುಸ್ತಾನಿ ವಿಭಾಗದಲ್ಲಿ ಪೂರ್ಣಪಾಂಡಿತ್ಯ ಗಳಿಸಿದರು. ನಾಟಕದಲ್ಲೇ ಬದುಕು ವ್ಯರ್ಥವಾಗಬಾರದೆಂಬ ಗುರುಗಳ ಮಾತನ್ನೊಪ್ಪಿ ಚೆನ್ನೈನ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದರೂ ಆಸಕ್ತಿ ಕೈಬೀಸಿ ಕರೆಯುತ್ತಿತ್ತು. ಗುಬ್ಬಿ ವೀರಣ್ಣ ಕಂಪನಿಯ ದಶಾವತಾರ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡಿ ಮೈಲುಗಲ್ಲು ನೆಟ್ಟ ಕಾಳಿಂಗರಾಯರು ಸುಮಾರು ಆರು ವರ್ಷಗಳ ಕಾಲ ಸಂಗೀತ ನಿರ್ದೇಶಕರಾಗಿ ರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿದರು. ರಂಗದ ಮೇಲೆ ನವನವೀನ ಪ್ರಯೋಗಗಳಿಗೆ ಹೆಸರುವಾಸಿಯಾಗಿ ನಾಟಕಗಳನ್ನು ಜನಾಕರ್ಷಣೆಯ ಕೇಂದ್ರವಾಗಿ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಿರ್ದೇಶಕ ನಾಗೇಂದ್ರರಾಯರ
ವಸಂತಸೇನಾ' ಚಲನಚಿತ್ರಕ್ಕೆ ನೀಡಿದ ಸಂಗೀತ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿತು. ಸಾಲುಸಾಲು ಚಿತ್ರಗಳಿಗೆ ಹಾಡಿ, ಸಂಗೀತ ಸಂಯೋಜಿಸಿ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಕಾಳಿಂಗರಾಯರು ಅ.ನ.ಕೃಷ್ಣರಾಯರ, 'ಕನ್ನಡದ ಕಾವ್ಯವನ್ನು ಜನತೆಗೆ ತಲುಪಿಸುವ ಸಂಗೀತದೂತನ ಅಗತ್ಯವಿದೆ. ಹಾಡಿಗೆ ಜೀವತುಂಬಿ `ಶ್ರೋತೃಗಳ ಮನಮುಟ್ಟಬಲ್ಲ ಸಾಮರ್ಥ್ಯ ನಿಮಗಿದೆ' ಎಂಬ ಸ್ಫೂರ್ತಿ ಮಾತನ್ನು ಸವಾಲಾಗಿ ಸ್ವೀಕರಿಸಿ ಸುಗಮ ಸಂಗೀತ ಕ್ಷೇತ್ರವನ್ನು ಪರಿಚಯಿಸಿ, ಭದ್ರ ಬುನಾದಿ ಹಾಕಿದರು. ಕಾಳಿಂಗರಾಯರು ಸರಳತೆ, ಸಹೃದಯತೆಗೆ ಅನ್ವರ್ಥ. ಭಿಕ್ಷೆ ಬೇಡುವ ಬಾಲೆಯ ಕಂಠ ಮಾಧುರ್ಯಕ್ಕೆ ಮನಸೋತು ಆಕೆಯಿಂದ ಹಾಡಿಸಿದ್ದ ಕುಸುಮವತ್ ರಾಯರು, ಸ್ವಾಭಿಮಾನ ಕೆಣಕಿದ ಅಧಿಕಾರಿಯ ವಿರುದ್ಧ ಹರಿಹಾಯ್ದು ಪಿಂಚಣಿಯನ್ನೇ ಧಿಕ್ಕರಿಸಿದ ವಜ್ರವತ್ ಕಠೋರರೂ ಹೌದು. ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗದೆ ಎಲೆಮರೆಯ ಕಾಯಿಯಂತಿದ್ದ ನೂರಾರು ಯುವಪ್ರತಿಭೆಗಳನ್ನು ಮುನ್ನಲೆಗೆ ತಂದು ಎಳೆಯರೊಡನೆ ಮಗುವಾಗಿ ಕರಗುವ ವಿಶಿಷ್ಟ ವ್ಯಕ್ತಿತ್ವ ಅವರದು. ಕಾಳಿಂಗರಾಯರ ಧ್ವನಿಯಲ್ಲಿ ಹೊರಹೊಮ್ಮಿದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಮುಗಿಲ ಮಾರಿಗೆ, ಬಾರಯ್ಯ ಬೆಳದಿಂಗಳೇ, ಎಲ್ಲಾದರು ಇರು, ಬಾಗಿಲೊಳು ಕೈಮುಗಿದು, ಇಳಿದು ಬಾ ತಾಯೆ ಮೊದಲಾದ ನಿತ್ಯಹರಿದ್ವರ್ಣ ಹಾಡುಗಳು ಸಂಗೀತರಸಿಕರ ಸಂಜೀವನಿ. ನಾಟಕ, ಚಲನಚಿತ್ರ, ಸಂಗೀತ, ಆಕಾಶವಾಣಿಯ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯ ಲೋಕವನ್ನು ಆವರಿಸಿದ ಕನ್ನಡ ಕೋಗಿಲೆ ಹಾಡು ನಿಲ್ಲಿಸಿದ ದಿನ ನಾಡಿಗೆ ಸೂತಕಛಾಯೆ ಆವರಿಸಿದ್ದೇ ಅವರ ದೈತ್ಯಪ್ರತಿಭೆಗೆ ಸಾಕ್ಷಿ. ಇಂದು ವಿಸ್ತಾರವಾಗಿ ಬೆಳೆದು ಪ್ರತಿಭಾವಂತ ಗಾಯಕರನ್ನು ಸೃಷ್ಟಿಸುತ್ತಿರುವ ಸುಗಮ ಸಂಗೀತ ಕ್ಷೇತ್ರದ ಆದ್ಯಚಾಲಕ ಪಿ. ಕಾಳಿಂಗರಾಯರು ಗಾನಮಂಡಲದ ಅನರ್ಘ್ಯ ರತ್ನವೆಂದರೆ ಅತಿಶಯೋಕ್ತಿ ಆಗಲಾರದು. ಕನ್ನಡದ ಸಾಹಿತ್ಯ ಲೋಕದ ಕುಬೇರ ಕಥೆಗೆ ಹೊಸ ಆಯಾಮವಿತ್ತು ಚರಿತ್ರೆಯನ್ನೇ ನಿರ್ಮಿಸಿ, ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ವಿದೇಶೀಯರಲ್ಲೂ ಕುತೂಹಲ ಮೂಡಿಸಿದ ಅಪಾರ ಸಂಖ್ಯೆಯ ಕವನಗಳ ಕರ್ತೃ ರಾಜರತ್ನಂ ಅವರನ್ನು ಜನ್ಮದಿನದ ಶುಭಾವಸರದಲ್ಲಿ ನೆನಪಿಸುತ್ತಲೇ, ಗಾನಗಂಧರ್ವನೆಂದು ಹೆಸರಾಗಿ ಅನಕೃ ದೀಕ್ಷೆಯಿಂದ ಅಧಿಕೃತ ಗಾಯಕರಾಗಿ ನಾದಲೋಕ ಪ್ರವೇಶಿಸಿದ ಕಾಳಿಂಗರಾಯರ ದೀಕ್ಷಾ ದಿನವನ್ನೂ ಸಂಭ್ರಮಿಸೋಣ.