For the best experience, open
https://m.samyuktakarnataka.in
on your mobile browser.

ಕರಾವಳಿಯಲ್ಲಿ ಮೊಂತಿ ಹಬ್ಬದ ಸಂಭ್ರಮ

02:13 PM Sep 08, 2024 IST | Samyukta Karnataka
ಕರಾವಳಿಯಲ್ಲಿ ಮೊಂತಿ ಹಬ್ಬದ ಸಂಭ್ರಮ

ಮಂಗಳೂರು: ಕರಾವಳಿಯಲ್ಲಿ ಕ್ಯಾಥೋಲಿಕ್ ಸಮುದಾಯದವರು ಶುಕ್ರವಾರ ಮೊಂತಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಚರ್ಚ್‍ಗಳಲ್ಲಿ ಹಬ್ಬದ ಅಂಗವಾಗಿ ವಿಶೇಷ ಬಲಿಪೂಜೆಯಲ್ಲಿ ಭಕ್ತರು ಭಾಗವಹಿಸಿದರು.
ಯೇಸು ಸ್ವಾಮಿಯ ತಾಯಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು ಕಥೋಲಿಕ್ ಕ್ರೈಸ್ತರು ಆಶೀರ್ವಚನ ಮಾಡಿದ ಭತ್ತದ ತೆನೆಯ ಕಾಳುಗಳನ್ನು ಹಾಲಿನಲ್ಲಿ ಅಥವಾ ಪಾಯಸದಲ್ಲಿ ಬೆರೆಸಿ ಸೇವಿಸುವ ಜತೆಗೆ ಸಸ್ಯಾಹಾರದಲ್ಲಿ ಭೋಜನವನ್ನು ಕುಟುಂಬದ ಜತೆಯಲ್ಲಿ ಸವಿಯುವ ಈ ಹಬ್ಬವನ್ನು ಕರಾವಳಿ ಭಾಗದಲ್ಲಿ ಆಚರಣೆ ಮಾಡಲಾಗುತ್ತದೆ.
ಪುಟಾಣಿ ಮಕ್ಕಳು ತಟ್ಟೆ, ಹೂವಿನ ಬುಟ್ಟಿಯಲ್ಲಿ ಹೂವುಗಳನ್ನು ತಂದು ಮೇರಿ ಮಾತೆಗೆ ಅರ್ಪಣೆ ಮಾಡಿಕೊಂಡು ಸಿಹಿ ತಿಂಡಿಗಳ ಜತೆಗೆ ಕಬ್ಬುಗಳನ್ನು ಪಡೆದುಕೊಂಡು ಸಂಭ್ರಮಿಸಿದರು. ಚರ್ಚ್‍ಗಳಲ್ಲಿ ಮೆರವಣಿಗೆಯ ಮೂಲಕ ಭತ್ತದ ತೆನೆಯನ್ನು ತಂದು ಚರ್ಚ್‍ನ ಒಳಗಿಟ್ಟು ಆಶೀರ್ವದಿಸುವ ಜತೆಯಲ್ಲಿ ಸಂಭ್ರಮದ ಬಲಿಪೂಜೆಯಲ್ಲಿ ಭಕ್ತರು ಭಾಗಹಿಸಿದರು. ಚರ್ಚ್‍ಗಳಲ್ಲಿ ಹಬ್ಬದ ಸಂತೋಷ ಹಂಚಿಕೊಳ್ಳಲು ಎಲ್ಲ ಭಕ್ತಾದಿಗಳಿಗೆ ಕಬ್ಬು ವಿತರಣೆ ಮಾಡಲಾಯಿತು. ಕೆಲವು ಚರ್ಚ್‍ಗಳಲ್ಲಿ ಹಬ್ಬದ ದಿನ ಸಂಜೆ ಧರ್ಮಕೇಂದ್ರ ಮಟ್ಟದಲ್ಲಿ ನಾನಾ ಸ್ಪರ್ಧೆ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ವಿಶೇಷ ಬಲಿಪೂಜೆಗಳು: ಕರಾವಳಿಯ ಎರಡು ಧರ್ಮಪ್ರಾಂತ್ಯಗಳಲ್ಲಿರುವ ಎಲ್ಲ ಚರ್ಚ್‍ಗಳಲ್ಲಿ ಶುಕ್ರವಾರ ವಿಶೇಷ ಬಲಿಪೂಜೆಗಳು ಸಾಗಿತು. ನಗರದ ಮಿಲಾಗ್ರಿಸ್, ರೊಸಾರಿಯೋ, ಉರ್ವ ಲೇಡಿಹಿಲ್, ಬೆಂದುರ್ ವೆಲ್, ಅಶೋಕ ನಗರ, ಕೂಳೂರು, ಕುಲಶೇಖರ ಸೇರಿದಂತೆ ಪ್ರಮುಖ ಚರ್ಚ್‍ಗಳಲ್ಲಿ ಹಬ್ಬದ ದಿನ ಬಲಿಪೂಜೆಗಳು ನಡೆಯಿತು. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಅವರು ನಗರದ ರೊಸಾರಿಯೋ ಕೆಥೆಡ್ರಲ್‍ನಲ್ಲಿ ಮೊಂತಿ ಹಬ್ಬದ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಿದರು.
ಕುಟುಂಬಗಳಲ್ಲಿ ಸಹ ಭೋಜನ: ಮೊಂತಿ ಹಬ್ಬದ ಅಂಗವಾಗಿ ಕ್ರೈಸ್ತ ಸಮುದಾಯದ ಕುಟುಂಬದವರು ಹೆಚ್ಚಾಗಿ ಸಸ್ಯಾಹಾರ ಭೋಜನವನ್ನು ತಮ್ಮ ಕುಟುಂಬದ ಮೂಲ ಮನೆಯ ಹಿರಿಯರ ಜತೆಯಲ್ಲಿ ಸೇರಿಕೊಂಡು ಮಾಡಿದರು. ಈ ಬಳಿಕ ಚರ್ಚ್‍ಗಳಿಂದ ತಂದ ತೆನೆಯ ಕಾಳುಗಳನ್ನು ಹಾಲು, ಪಾಯಸದ ಜತೆಯಲ್ಲಿ ಸೇವಿಸಿಕೊಂಡು ಹಬ್ಬದ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಿದರು. ವಿದೇಶದಲ್ಲಿರುವ ತಮ್ಮ ಕುಟುಂಬ ಸದಸ್ಯರಿಗೆ ತೆನೆಯನ್ನು ಅಂಚೆ ಲಕೋಟೆಯಲ್ಲಿ ತುಂಬಿಸಿದ ಅವರಿಗೆ ರವಾನೆ ಮಾಡುವ ಮೂಲಕ ಅವರು ಕೂಡ ಹಬ್ಬವನ್ನು ಆಚರಣೆ ಮಾಡುವಂತಾಗಲಿ ಎಂದು ಹಿರಿಯರು ಹಾರೈಸಿದರು.