For the best experience, open
https://m.samyuktakarnataka.in
on your mobile browser.

ಕಾಂಗ್ರೆಸ್‌ನಿಂದ ಸಂವಿಧಾನದ ಕಗ್ಗೊಲೆ

07:41 PM Dec 20, 2024 IST | Samyukta Karnataka
ಕಾಂಗ್ರೆಸ್‌ನಿಂದ ಸಂವಿಧಾನದ ಕಗ್ಗೊಲೆ

ಮಂಗಳೂರು: ಸಂವಿಧಾನದ ಘನತೆ ಗೌರವದ ಬಗ್ಗೆ ಮಾತನಾಡುವ ಕಾಂಗ್ರೆಸ್, ದೆಹಲಿ ಮತ್ತು ಕರ್ನಾಟಕದಲ್ಲಿ ಸಂವಿಧಾನದ ಕಗ್ಗೊಲೆ ಮಾಡಿದೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ವರ್ತನೆ ಮತ್ತು ಸಂಸದರ ಮೇಲಿನ ಹಲ್ಲೆ ಖಂಡನೀಯ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ. ರಾಹುಲ್ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧವೂ ಕ್ರಮವಾಗಬೇಕು ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಜಂಗಲ್ ರಾಜ್ಯ ನಿರ್ಮಾಣವಾಗಿದೆ. ಕಾಂಗ್ರೆಸ್ ಗುಂಡಾಗಳಿಗೆ ಮಣೆ ಹಾಕುತ್ತಿದೆ ಎಂಬುದು ಬೆಳಗಾವಿ ಅಧಿವೇಶನದ ವೇಳೆ ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದರು.
ಹಿರಿಯ ಶಾಸಕ ಸಿ.ಟಿ. ರವಿ ಅವರ ಮೇಲಿನ ಹಲ್ಲೆ ಖಂಡನೀಯ. ದುಂಡಾವರ್ತನೆ ತೋರಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಬೃಹತ್ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಸುವರ್ಣ ಸೌಧದ ಒಳಗೆ ಗೂಂಡಾ ಪ್ರವೃತ್ತಿಯ ಮಂದಿ ನುಗ್ಗಿ ಹಲ್ಲೆ ನಡೆಸುವುದೆಂದರೆ ಕಾಂಗ್ರೆಸ್ ಆಡಳಿದ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಸದನದ ಒಳಗೆ ನಡೆದ ವಿಚಾರಗಳ ಕುರಿತಂತೆ ಸಭಾಪತಿಯವರು ನಿಯಮಾನುಸಾರ ಕ್ರಮ ಕೈಗೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗೂಂಡಾಗಳಿಗೆ ಸುವರ್ಣಸೌಧ ಪ್ರವೇಶಿಸಲು ಅವಕಾಶ ಕಲ್ಪಿಸಿರುವುದು ದುರಂತ. ಒಂದೆಡೆ ಸಿ.ಟಿ. ರವಿಯವರನ್ನು ಬಂಧಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ. ಗೃಹಸಚಿವರು ಪೊಲೀಸರನ್ನು ಕೂಲಿಯಾಳುಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನ ಈ ರೀತಿಯ ನಡೆ ಖಂಡನೀಯ. ರಾಜ್ಯದಲ್ಲಿ ಸಿಎಂ ಸಿದ್ದರಾಮ್ಯಯನವರಿಂದಾಗಿ ಗೂಂಡಾ ರಾಜ್ಯವಾಗಿ ಬದಲಾಗುತ್ತಿದೆ ಎಂದು ನಳಿನ್ ಕಿಡಿಕಾರಿದರು.
ಸಿ.ಟಿ. ರವಿಯವರ ಮೇಲಾದ ಹಲ್ಲೆಯ ಕುರಿತಂತೆ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ವಿಧಾನಸೌಧದೊಳಗೆಯೇ ಇಂತಹ ಹಲ್ಲೆಗಳು ನಡೆಯುತ್ತವೆ ಎಂದಾದರೆ ಜನಸಾಮಾನ್ಯರ ಪಾಡೇನು?. ಗುರುವಾರದ ಘಟನೆ ಕಾಂಗ್ರೆಸ್‌ನ ದ್ವೇಷದ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ನಳಿನ್ ಆಕ್ರೋಶ ವ್ಯಕ್ತಪಡಿಸಿದರು.