ಕಾಣೆಯಾದವರು ಎಲ್ಲಿ ಹೋಗುತ್ತಾರೆ…?
ತಿಗಡೇಸಿಗೆ ಭಯಂಕರವಾಗಿ ಕಾಡುತ್ತಿರುವ ಕಟ್ಟಕಡೆಯ ಪ್ರಶ್ನೆ ಎಂದರೆ ಕಾಣೆಯಾದವರು ಎಲ್ಲಿ ಹೋಗುತ್ತಾರೆ? ಎನ್ನುವುದು. ಚಿಕ್ಕವನಿದ್ದಾಗಿನಿಂದಲೂ ಈ ಪ್ರಶ್ನೆಗೆ ಭಯಂಕರ ತಲೆ ಕೆಡೆಸಿಕೊಂಡಿದ್ದ. ಊರಿನಲ್ಲಿ ಯಾರಾದರೂ ಎರಡು ದಿನ ಕಾಣದೇ ಇದ್ದರೆ… ಇಂಥವರು ಎಲ್ಲಿ ಕಾಣೆಯಾಗಿದ್ದಾರೆ ಎಂದು ಕೇಳುತ್ತಿದ್ದ. ಅವರು ಸಿಟ್ಟಿಗೆದ್ದು ಅರ‍್ಯಾಕೆ ಕಾಣೆಯಾಗುತ್ತಾರೆ.. ಇಲ್ಲೇ ಊರಿಗೆ ಹೋಗಿದ್ದಾರೆ ಎಂದು ಗದರಿದಾಗ ಸುಮ್ಮನಾಗುತ್ತಿದ್ದ. ಹೋರಾಟಗಾರ ಕನ್ನಾಲ್ಮಲ್ಲನು ಎರಡು ತಿಂಗಳು ಎಲ್ಲೋ ಹೋರಾಟಕ್ಕೆಂದು ಹೋಗಿದ್ದ. ಆ ದಿನದಿಂದಲೂ ತಿಗಡೇಸಿ ಕನ್ನಾಳ್ಮಲ್ಲ ಕಾಣೆಯಾಗಿದ್ದಾರೆ ಎಂದು ಹೇಳಿಕೊಂಡು ಬರುತ್ತಿದ್ದ. ಯಾರೇ ಎದುರಿಗೆ ಸಿಗಲಿ, ಅವರು ಮಾತನಾಡಿಸದಿದ್ದರೂ ಅವರನ್ನು ನಿಲ್ಲಿಸಿ… ವಿಷಯ ಗೊತ್ತ? ಕನ್ನಾಳ್ಮಲ್ಲ ಕಾಣೆಯಾಗಿದ್ದಾನೆ ಎಂದು ಹೇಳುತ್ತಿದ್ದ. ಜನರಿಗೆ ಗಾಬರಿಯಾಗಿ… ಅದ್ಯಾರೋ ಮಲ್ಲನಿಗೆ ಕರೆ ಮಾಡಿ ಇಂಗಿಂಗೆ ನೀನು ಕಾಣೆಯಾಗಿದ್ದೀಯ ಅಂತ ಕೇಳಿದಾಗ ಮರುದಿನವೇ ಊರಿಗೆ ಬಂದು ತಿಗಡೇಸಿಯ ಕಪಾಳಕ್ಕೆ ಹೊಡೆದು ಹಾಗೆನ್ನಬಾರದು ಎಂದು ಬುದ್ಧಿ ಹೇಳಿದ್ದ. ಈ ಎಲ್ಲವುಗಳಿಂದ ದೂರವಿರಿಸಬೇಕು ಎಂದು ತಿಗಡೇಸಿಯನ್ನು ಬೀಗರು ಕರೆದುಕೊಂಡು ಹೋದರು. ಮರುದಿನ ತಿಗಡೇಸಿ ಕಾಣೆಯಾಗಿದ್ದಾನೆ ಎಂದು ಸುದ್ದಿ ಹಬ್ಬಿತು. ಯಾವುದೇ ಊರಿಗೆ ಹೋದರೂ ತಿಗಡೇಸಿಗೆ ಕಾಣೆಯಾಗಿರುವ ಜಂಜಡಗಳು ತಲೆಯಿಂದ ದೂರವಾಗಲಿಲ್ಲ. ಚುನಾವಣೆ ಬಂದಾಗಲಂತೂ ತಿಗಡೇಸಿ ಬಾಯಲ್ಲಿ ಊರವರೆಲ್ಲ ಕಾಣೆಯಾಗುತ್ತಿದ್ದರು. ಅವರು ಕಾಣೆಯಾಗಿದ್ದಾರೆ… ಇವರು ಕಾಣೆಯಾಗಿದ್ದಾರೆ. ಎಲ್ಲರೂ ಕಾಣೆಯಾಗಿದ್ದಾರೆ ನಾನೊಬ್ಬನೇ ಇಲ್ಲಿರುವುದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಇತ್ತೀಚಿಗೆ ಎರಡೂ ಪಾರ್ಟಿಯ ಮಂದಿ ಕಾಣೆಯಾಗಿದ್ದಾರೆ ಎಂದು ಹಲುಬತೊಗಡಗಿದ. ಇವನನ್ನು ಹೇಗಾದರೂ ಮಾಡಿ ಸಿಗಿಸಬೇಕು ಎಂದು ತಳವಾರ್ಕಂಟಿ ಅಯ್ಯೋ ಇದನ್ನು ಎಲ್ಲ ಕಡೆ ಬೋರ್ಡು ಹಾಕಿಸಿಬಿಡು ನಿನ್ನ ಡಿಮ್ಯಾಂಡು ಹೆಚ್ಚುತ್ತದೆ ಮತ್ತು ಹುಡುಕಿಕೊಟ್ಟವರಿಗೆ ಬಹುಮಾನ ಎಂದು ಘೋಷಿಸು ಜನರು ನಿನ್ನ ಮರೆಯುವುದಿಲ್ಲ ಎಂದು ಕೊತಕೊಟ್ಟಿ ಕಡೆಯಿಂದ ಹೇಳಿಕಳುಹಿಸಿದ. ಖುಷಿಯಾದ ತಿಗಡೇಸಿ ಹಾಗೇ ಮಾಡುತ್ತೇನೆ ಎಂದು ಇಷ್ಟು ಮಂದಿ ಕಾಣೆಯಾಗಿದ್ದಾರೆ ಇವರನ್ನು ಹುಡುಕಿಕೊಟ್ಟವರಿಗೆ ಇಂತಿಷ್ಟು ಬಹುಮಾನ ಎಂದು ಎಲ್ಲೆಡೆ ಬೋರ್ಡು ಹಾಕಿಸಿದ. ಕೊನೆಗೆ ಪಾದಯಾತ್ರೆ-ಸಮಾವೇಶ ಮುಗಿದ ಮೇಲೆ ಎಲ್ಲರೂ ಊರಿಗೆ ಬಂದ ಕೂಡಲೇ ಎಲ್ಲರಿಗೂ ಏನು ಕೊಡಬೇಕೋ ಕೊಟ್ಟು ತಿಗಡೇಸಿ ಮುಂದೆ ನಿಲ್ಲಿಸಿ ಬಹುಮಾನದ ಮೊತ್ತ ಇಸಿದುಕೊಂಡು ಬಂದ. ತಿಗಡೇಸಿಗೆ ಏನೂ ಅರ್ಥವಾಗದೇ ಹಣ ಕಳೆದುಕೊಂಡಿದ್ದ.