ಕಾನೂನು, ನಿಯಮ ಎಲ್ಲ ಧರ್ಮೀಯರಿಗೆ ಒಂದೇ ರೀತಿ ಇರಲಿ
ಹುಬ್ಬಳ್ಳಿ: ಪ್ರಸಾದ ವಿತರಣೆಯಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಪ್ರಸಾದಕ್ಕೆ ಪ್ರಮಾಣೀಕರಣದ ಅಗತ್ಯವಿಲ್ಲ. ನಿಯಮ ಮಾಡಿದರೆ ಬರೀ ಹಿಂದುಗಳಿಗಷ್ಟೇ ಏಕೆ ಅನ್ವಯ. ಕಾಂಗ್ರೆಸ್‌ನಿಂದ ಪದೇ ಪದೇ ಈ ರೀತಿಯ ಹಿಂದೂ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಕಾನೂನು ಮತ್ತು ನಿಯಮಗಳು ಎಲ್ಲ ಧರ್ಮೀಯರಿಗೂ ಸಮಾನವಾಗಿರಲಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.
ರಾಣಿ ಚನ್ನಮ್ಮ(ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಆಜಾನ್ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ವರ್ಷಕೊಮ್ಮೆ ಎಲ್ಲ ಸಮಾಜ ಬಾಂಧವರು ಸೇರಿ ಸಂಭ್ರಮದಿಂದ ಆಚರಿಸುವ ಗಣೇಶೋತ್ಸವದ ಮೆರವಣಿಗೆಯಲ್ಲಿ ಡಿಜೆ ಹಚ್ಚಲು ಮುಂದಾಗುವವರಿಗೆ ಕಿರಿಕಿರಿ ಮಾಡುತ್ತಿರುವುದು ಸರಿಯಲ್ಲ. ಆಜಾನ್ ವಿಚಾರದಲ್ಲಿ ಎಲ್ಲ ಪಕ್ಷದವರು ಅಷ್ಟೇ. ಬಿಜೆಪಿಯವರೇನು ಸಾಚಾ ಅಲ್ಲ. ಬಿಜೆಪಿಯವರಿಗೆ ಕೇವಲ ಹಿಂದೂಗಳು ಬೇಕು. ಆಜಾನ್ ವಿರುದ್ಧ ಹೋರಾಟ ಮಾಡಿದಾಗ ಇದೇ ಬಿಜೆಪಿಯವರು ನಮ್ಮನ್ನು ಬಂಧಿಸಿದ್ದರು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಈದ್ಗಾ ಮೈದಾನದ ಗಣೇಶ ಪ್ರತಿಷ್ಠಾಪನೆ ವಿಚಾರದಲ್ಲಿ ಗಲಾಟೆ ಆಗುತ್ತೆ. ಬೆಂಕಿ ಹತ್ತುತ್ತೆ ಎಂದು ಬಹಳ ಜನ ಕಾಯುತ್ತಿದ್ದರು. ಆದರೆ, ಹಿಂದೂಗಳು ಶಾಂತಿಯುತವಾಗಿ ಗಣೇಶೋತ್ಸವ ಆಚರಿಸುವ ಮೂಲಕ ಶಾಂತಿಪ್ರಿಯರು ಎಂಬುದನ್ನು ಸಾರಿದ್ದೇವೆ ಎಂದರು.