For the best experience, open
https://m.samyuktakarnataka.in
on your mobile browser.

‘ಕಾಪಿಕಾಡ್’ ಕಾಮಿಡಿ ಶೋಗೆ ಬಹಿಷ್ಕಾರದ ಬೆದರಿಕೆ..!

05:00 PM Sep 06, 2024 IST | Samyukta Karnataka
‘ಕಾಪಿಕಾಡ್’ ಕಾಮಿಡಿ ಶೋಗೆ ಬಹಿಷ್ಕಾರದ ಬೆದರಿಕೆ

ಮಂಗಳೂರು: ತುಳು ನಾಡಿನ ಖ್ಯಾತ ನಟ ನಿರ್ದೇಶಕ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ‘ಬಿಜೆಪಿ ಸದಸ್ಯತ್ವʼ ಇದೀಗ ವಿವಾದ ಸೃಷ್ಟಿಸಿದ್ದು ಬಿಜೆಪಿ ಸದಸ್ಯತ್ವ ಪಡೆದ ಕಾರಣಕ್ಕೆ ಸೌದಿ ಅರೇಬಿಯಾದಲ್ಲಿ ಕಾಮಿಕಾಡ್ ಅವರ ಕಾಮಿಡಿ ಶೋ ಕಾರ್ಯಕ್ರಮಕ್ಕೆ ಬಹಿಷ್ಕಾರದ ಬೆದರಿಕೆ ಬಂದಿದೆ.
ಬಿಜೆಪಿ ‘ಸದಸ್ಯತ್ವ’ ವಿವಾದ ಕರಾವಳಿಯ ಪ್ರಸಿದ್ದ ತುಳು ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರನ್ನು ಸುತ್ತಿಕೊಂಡಿದೆ. ಬಿಜೆಪಿ ‘ಸದಸ್ಯತ್ವ’ ಪಡೆದ ಕಾರಣಕ್ಕೆ ಕಾರ್ಯಕ್ರಮ ಬಹಿಷ್ಕಾರದ ಬಿಸಿ ತಟ್ಟಿದೆ. ಸೌದಿ ಅರೇಬಿಯಾದಲ್ಲಿ ಕಾಪಿಕಾಡ್ ಕಾಮಿಡಿ ಶೋಗೆ ಬಹಿಷ್ಕಾರದ ಬೆದರಿಕೆ ಬಂದಿದ್ದು, ಕಾಪಿಕಾಡ್ ಶೋ ಬಹಿಷ್ಕಾರದ ಪೋಸ್ಟರ್ ಇದೀಗ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಉಲ್ಟಾ ಹೊಡೆದಿದ್ದು ಬಿಜೆಪಿ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಸದಸ್ಯತ್ವ ಆನ್‌ಲೈನ್ ಅಭಿಯಾನದ ಅಂಗವಾಗಿ ಬುಧವಾರ ಮಾಜಿ ಕೇಂದ್ರ ಸಚಿವ ಡಿ.ವಿ‌. ಸದಾನಂದ ಗೌಡ ಸಮ್ಮುಖದಲ್ಲಿ ಕಾಪಿಕಾಡ್ ಮನೆಯಲ್ಲೇ ನಡೆದ ಸರಳ ಕಾರ್ಯಕ್ರಮದಲ್ಲಿ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿದ್ದರು.
ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಪ್ರಕಟನೆ ಕೂಡ ನೀಡಿತ್ತು. ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದ ಬಗ್ಗೆ ಬಿಜೆಪಿಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಕೂಡ ಹಾಕಲಾಗಿತ್ತು. ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ಕೂಡ ಅಧಿಕೃತ ಫೇಸ್ಬುಕ್ ಖಾತೆ, ರಾಜ್ಯ ಮತ್ತು ದ.ಕ ಜಿಲ್ಲಾ ಬಿಜೆಪಿ ಕೂಡ ಫೇಸ್ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಫೋಸ್ಟ್ ವೈರಲ್ ಬೆನ್ನಲ್ಲೇ ದೇವದಾಸ್ ಕಾಪಿಕಾಡ್‌ಗೆ ಬಹಿಷ್ಕಾರದ ಬಿಸಿ ತಟ್ಟಿದೆ. ಸೆ. 13 ಹಾಗೂ 14ರಂದು ಸೌದಿಯ ಜುಬೈಲ್‌ನ ಪುಲಿ ರೆಸ್ಟೋರೆಂಟ್‌ನಲ್ಲಿ ಆಯೋಜನೆಯಾಗಿರುವ ಕಾಪಿಕಾಡ್ ಕಾಮಿಡಿ ಕಾರ್ಯಕ್ರಮಕಕ್ಕೆ ಬಹಿಷ್ಕಾರ ಹಾಕುವ ಬೆದರಿಕೆಗಳು ಬಂದಿವೆ. ಬಿಜೆಪಿ ಸದಸ್ಯತ್ವ ಪಡೆದ ಹಿನ್ನೆಲೆ ಕಾರ್ಯಕ್ರಮ ಬಹಿಷ್ಕರಿಸಿ ಅಂತ ಪೋಸ್ಟ್ ಗಳನ್ನು ಹರಿಯಬಿಡಲಾಗಿದ್ದು ವೈರಲ್ ಆಗ್ತಿವೆ. ಇದರ ಬೆನ್ನಲ್ಲೇ ಕಾಪಿಕಾಡ್ ಉಲ್ಟಾ ಹೊಡೆದಿದ್ದು ತಾನು ಬಿಜೆಪಿ ಸದಸ್ಯತ್ವ ಪಡೆದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆಯ ಆಡಿಯೋ ಕೂಡ ವೈರಲ್ ಆಗ್ತಿದೆ.
‘ಬಿಜೆಪಿ ನಾಯಕರ ಜೊತೆ ಕೇವಲ ಸೌಹಾರ್ದ ಭೇಟಿ ನಡೆದಿದೆ, ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ, ಯಾವುದೇ ಪಕ್ಷಕ್ಕೆ ನಾನು ಸೇರ್ಪಡೆಯಾಗಿಲ್ಲ.ಎಲ್ಲಾ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸಂಬಂಧ ಇದೆʼ ಎಂಬ ಸ್ಪಷ್ಟನೆ ಆಡಿಯೋ ವೈರಲ್ ಆಗ್ತಿದೆ. ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರಿಗೆ ಸರ್ವ ಧರ್ಮಗಳಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರೋ ದೇವದಾಸ್ ಕಾಪಿಕಾಡ್ ಅವರನ್ನು ಜಾತಿ, ಧರ್ಮ, ಪಕ್ಷ ಬಿಟ್ಟು ಪ್ರೀತಿಸುವ ಅಭಿಮಾನಿಗಳಿಗೆ ಕಾಪಿಕಾಡ್ ಅವರ ಒಂದು ಪಕ್ಷಕ್ಕೆ ಸೇರುವ ನಡೆ ಸಹಜವಾಗಿಯೇ ಬೇಸರ ತಂದಿದೆ.