For the best experience, open
https://m.samyuktakarnataka.in
on your mobile browser.

ಕಾವೇರಿ ನದಿಗೆ ಮಲೀನ ಸೇರ್ಪಡೆ: ವರದಿ ಸಲ್ಲಿಸಲು ತಜ್ಞರ ಸಮಿತಿ ರಚನೆ

05:36 PM Dec 16, 2024 IST | Samyukta Karnataka
ಕಾವೇರಿ ನದಿಗೆ ಮಲೀನ ಸೇರ್ಪಡೆ  ವರದಿ ಸಲ್ಲಿಸಲು ತಜ್ಞರ ಸಮಿತಿ ರಚನೆ

ಬೆಳಗಾವಿ (ಸುವರ್ಣಸೌಧ): ಕಾವೇರಿ ನದಿಗೆ ಒಳಚರಂಡಿ ನೀರು, ಘನ ತ್ಯಾಜ್ಯ, ಕೈಗಾರಿಕೆ ತ್ಯಾಜ್ಯ ಹಾಗೂ ಇತರೆ ಸ್ವರೂಪದ ಮಲೀನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗಿ ಪರಿಸರಕ್ಕೆ ಆಗಿರುವ ಅನಾಹುತದ ತಡೆಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಕಳೆದ ಜೂನ್ ಮಾಹೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು ಹೇಳಿದರು.

ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 16ರಂದು ಸದಸ್ಯರಾದ ಕುಶಾಲಪ್ಪ ಎಂ.ಪಿ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.

ತಜ್ಞರ ಸಮಿತಿಯ ಸದಸ್ಯರು ಈಗಾಗಲೇ ಎರಡು ಬಾರಿ ಸಭೆ ನಡೆಸಿದ್ದಾರೆ. ತಜ್ಞರ ಸಮಿತಿಯು ಕಳೆದ ಜುಲೈ 4ರಂದು ಮೈಸೂರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾವೇರಿ ನದಿಗೆ ಭೇಟಿ ನೀಡಿ ನದಿಯ ಮಾಲಿನ್ಯದ ಬಗ್ಗೆ ಸದಸ್ಯರಿಂದ ವ್ಯಕ್ತವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದಿರುತ್ತದೆ. ಕಾವೇರಿ ನದಿಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳಿಂದ ಮಾಹಿತಿ ವಿವರಗಳನ್ನು ಸಮಿತಿಯು ಪಡೆದು ಭಾಗೀದಾರರೊಂದಿಗೆ ಸಮಾಲೋಚನೆಗಳನ್ನು ನಡೆಸಿರುತ್ತದೆ. ತಜ್ಞರ ಸಮಿತಿಯು ಪರಸ್ಪರ ಪರ್ಯಾಲೋಚನೆ ನಡೆಸಿದ ತರುವಾಯ ಸದಸ್ಯರಿಂದ ವ್ಯಕ್ತವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಪರಿಶೀಲಿಸಿ ಹಾಗೂ ಪ್ರಾದೇಶಿಕ ಅಧಿಕಾರಿಗಳಿಂದ ಪಡೆದ ಮಾಹಿತಿಯನ್ನು ಪರಾಮರ್ಶಿಸಿ ಅಧ್ಯಯನ ನಡೆಸಿ ವಿವರವಾದ ವರದಿ ತಯಾರಿಸಿರುತ್ತದೆ.

ತಜ್ಞರ ಸಮಿತಿಯು ಈಗಾಗಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತದೆ. ಈ ವರದಿಯನ್ವಯ ನದಿಯ ರಕ್ಷಣೆಗಾಗಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ, ಕಾವೇರಿ ನದಿ ನೀರಿನ ಮಾಲಿನ್ಯ ನಿಯಂತ್ರಿಸಲು ಹಾಗೂ ತಡೆಯಲು ತಾಂತ್ರಿಕ ಸಮಿತಿಯು ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಅಲ್ಪಾವಧಿ ಮತ್ತು ಧೀರ್ಘಾವಧಿ ಕ್ರಿಯಾಯೋಜನೆಗಳ ಬಗ್ಗೆ ಹಾಗೂ ಮಾಡಲಾಗಿರುವ ಅವಲೋಕನಗಳು, ಶಿಫಾರಸ್ಸುಗಳು ಹಾಗೂ ನೀಡಿರುವ ಸಲಹೆ ಮತ್ತು ಮಾರ್ಗೋಪಾಯಗಳ ಬಗ್ಗೆ ಭಾಗೀದಾರ ಇಲಾಖೆಗಳಾದ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಪೌರಾಡಳಿತ ನಿರ್ದೇಶನಾಲಯ, ಕಾವೇರಿ ನೀರಾವರಿ ನಿಗಮ ನಿಯಮಿತ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು, ಜಲ ಸಂಪನ್ಮೂಲ ಇಲಾಖೆಗಳ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥರುಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರ್ಯಾಲೋಚಿಸಿ ಮಾಲಿನ್ಯ ತಡೆಗೆ ಸಮಗ್ರ ಕಾರ್ಯನೀತಿಯನ್ನು ರೂಪಿಸಬೇಕಿರುತ್ತದೆ ಎಂದು ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದರು.

Tags :