ಕುಕ್ಕೆ: ಚಂಪಾಷಷ್ಠಿ ಮಹಾರಥೋತ್ಸವ
ಮಂಗಳೂರು: ದಕ್ಷಿಣ ಭಾರತದ ನಾಗಾರಾಧನೆಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡದ ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಜಾತ್ರಾ ಮಹೋತ್ಸವದ ಚಂಪಾಷಷ್ಠಿ ಮಹಾರಥೋತ್ಸವ ಶನಿವಾರ ಅದ್ದೂರಿಯಾಗಿ ನಡೆಯಿತು.
ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಈ ಭಕ್ತಿ ಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪ್ರಾತಃಕಾಲ ೬.೫೭ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾದರು. ಸುವರ್ಣ ವೃಷ್ಠಿಯಾಗಿ, ಚಿಕ್ಕ ರಥೋತ್ಸವ ಜರುಗಿತು. ಬಳಿಕ ಚಂಪಾ ಷಷ್ಠಿ ಮಹಾರಥೋತ್ಸವ ಜರುಗಿತು. ಬಳಿಕ ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ ನೆರವೇರಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಬಿ.ರಮಾನಾಥ ರೈ, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಕಧಿಕಾರಿ ಯೇಸುರಾಜ್ ಸೇರಿದಂತೆ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.