ಕುಡುಬಿ ಜನಾಂಗದ ಕಥೆ-ವ್ಯಥೆ
ಚಿತ್ರ: ಗುಂಮ್ಟಿ
ನಿರ್ದೇಶನ: ಸಂದೇಶ್ ಶೆಟ್ಟಿ ಆಜ್ರಿ
ನಿರ್ಮಾಣ: ವಿಕಾಸ್ ಎಸ್ ಶೆಟ್ಟಿ
ತಾರಾಗಣ: ಸಂದೇಶ್ ಶೆಟ್ಟಿ ಆಜ್ರಿ, ವೈಷ್ಣವಿ ನಾಡಿಗ್, ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ ಮತ್ತಿತರರು.
ರೇಟಿಂಗ್: 3
-ಜಿ.ಆರ್.ಬಿ
ಈಗಾಗಲೇ ತೆರೆಯ ಮೇಲೆ ಅನೇಕ ಕಲೆಗಳು, ಸಮುದಾಯದ ಚಿತ್ರಣ, ನಾಡಿನ ಸಂಸ್ಕೃತಿ, ಆಚಾರಗಳ ಕುರಿತು ಬೆಳಕು ಚೆಲ್ಲಲಾಗಿದೆ. ಇದೀಗ ಕರಾವಳಿ ಪ್ರದೇಶದ ಸುತ್ತಮುತ್ತ ಕಂಡುಬರುವ ಜಾನಪದ ಕಲೆಯೊಂದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಗುಂಮ್ಟಿ ಸಿನಿಮಾ ಮೂಲಕ ನೆರವೇರಿದೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವೇ ಚಿತ್ರದ ಕಥಾಹೂರಣ.
ಕುಡುಬಿ ಸಮುದಾಯದಕ್ಕೆ ಹಿರಿಯರಾಗಿರುವ ನಾಯಕ ಕಾಶಿಯ ತಂದೆಗೆ ತಮ್ಮ ಸಮುದಾಯದಲ್ಲಿ ತಲೆಮಾರುಗಳಿಂದ ನಡೆಸಿಕೊಂಡು ಬಂದಿರುವ ‘ಗುಂಮ್ಟಿ’ ಎಂಬ ಸಾಂಸ್ಕೃತಿಕ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕೆಂಬ ಮಹದಾಸೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಕಾಶಿ, ‘ಗುಂಮ್ಟಿ’ ಆಚರಣೆಯನ್ನು ಹೀಗಳೆಯುತ್ತ, ಬೇರೆ ಕಡೆ ವಾಲುತ್ತಾನೆ. ಕೆಲವು ವರ್ಷಗಳ ಬಳಿಕ ನಡೆಯುವ ಘಟನೆಯೊಂದು ಕಾಶಿಯನ್ನು ಮತ್ತೆ ತವರಿನತ್ತ ತೆರಳುವಂತೆ ಮಾಡುತ್ತದೆ. ಅಲ್ಲಿಯವರೆಗೂ ಒಂದು ಹಂತದಲ್ಲಿ ಸಾಗುತ್ತಿದ್ದ ಕಥೆಗೆ ಪ್ರಮುಖ ತಿರುವು ಸಿಕ್ಕಂತಾಗುತ್ತದೆ. ಮುಂದೇನು ಎಂಬ ಕುತೂಹಲ ಅಲ್ಲಿಂದಲೇ ಶುರುವಾಗುತ್ತದೆ. ಸಿನಿಮಾ ಮುಗಿಯುವವರೆಗೂ ಆ ಕುತೂಹಲವನ್ನು ಹಾಗೆಯೇ ಮುಂದುವರಿಸಿರುವುದು ನಿರ್ದೇಶಕರ ಹೆಚ್ಚುಗಾರಿಕೆ.
ಇಡೀ ಸಿನಿಮಾ ದೇಸಿ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಹಂಚಿ ಹೋಗಿರುವ ಕುಡುಬಿ ಸಮುದಾಯ, ಅವರ ಜೀವನ ಮತ್ತು ಆಚರಣೆಗಳನ್ನು ನೈಜವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ.
ಕಾಶಿ ಪಾತ್ರಕ್ಕೆ ಸಂದೇಶ್ ಶೆಟ್ಟಿ ನ್ಯಾಯ ಸಲ್ಲಿಸಿದ್ದಾರೆ. ವೈಷ್ಣವಿ ನಾಡಿಗ್ ಮಲ್ಲಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ ಮೊದಲಾದವರು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನ, ಡೊಂಡಿ ಮೋಹನ್ ಸಾಹಿತ್ಯ-ಸಂಗೀತ ಚಿತ್ರಕ್ಕೆ ಪೂರಕವಾಗಿದೆ.