For the best experience, open
https://m.samyuktakarnataka.in
on your mobile browser.

ಕುಮಟಾದಲ್ಲಿ ಮತ ಏಣಿಕೆಗೆ ಕ್ಷಣಗಣನೆ: ಮತಪೆಟ್ಟಿಗೆಯಲ್ಲಿನ 13 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

08:14 AM Jun 04, 2024 IST | Samyukta Karnataka
ಕುಮಟಾದಲ್ಲಿ ಮತ ಏಣಿಕೆಗೆ ಕ್ಷಣಗಣನೆ  ಮತಪೆಟ್ಟಿಗೆಯಲ್ಲಿನ 13 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಕಾರವಾರ: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಮಂಗಳವಾರ ಮತ ಏಣಿಕೆ ನಡೆಯಲಿದ್ದು, ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳಲ್ಲಿನ ಕಣದಲ್ಲಿರುವ 13 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಕ್ಷೇತ್ರದಲ್ಲಿ ಮೇ 7 ರಂದು ನಡೆದಿದ್ದ ಚುನಾವಣೆಯಲ್ಲಿ ಶೇ.76.53 ರಷ್ಟು ಮತದಾನವಾಗಿದ್ದು, 6,33,630 ಪುರುಷರು, 6,22,392 ಮಹಿಳೆಯರು ಹಾಗೂ 5 ಮಂದಿ ಇತರರು ಸೇರಿದಂತೆ ಒಟ್ಟು 12,56,027 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಮನೆಯಿಂದಲೇ ನಡೆದ ಮತದಾನದಲ್ಲಿ 85 ವರ್ಷ ಮೇಲ್ಪಟ್ಟ 2985 ಮಂದಿ, 1924 ವಿಕಲಚೇತನರು, 253 ಅಗತ್ಯ ಸೇವೆಯ ನೌಕರರು ಹಾಗೂ 1164 ಚುನವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಮತದಾನ ಸೇರಿದಂತೆ ಒಟ್ಟು 6236 ಮತದಾನವಾಗಿದೆ. ಇದೀಗ ಒಂದು ತಿಂಗಳ ಬಳಿಕ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಎಲ್ಲರ ಚಿತ್ತ ಮತ ಏಣಿಕೆ ಕೇಂದ್ರಗಳತ್ತ ನೆಟ್ಟಿದೆ.
ಇನ್ನು ಜಿಲ್ಲೆಯಲ್ಲಿ ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 562 ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗಿದ್ದು ಮತ ಎಣಿಕೆ ಕಾರ್ಯವು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಸಂಪೂರ್ಣ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಯಿದ್ದು, ಖಾನಾಪುರ ವಿಧಾನಸಭಾ ಕ್ಷೆತ್ರದಲ್ಲಿ 23 ಸುತ್ತು , ಕಿತ್ತೂರು 17, ಹಳಿಯಾಳ 16, ಕರವಾರ 19, ಕುಮಟಾ 16, ಭಟ್ಕಳ 18, ಶಿರಸಿ 19, ಯಲ್ಲಾಪುರ ದಲ್ಲಿ 17 ಸುತ್ತಿನ ಮತ ಎಣಿಕೆ ನಡೆಯಲಿದೆ.
ಇನ್ನು ಮತ ಎಣಿಕೆ ಕಾರ್ಯಕ್ಕಾಗಿ ಪೊಲೀಸ್ ಇಲಾಖೆ ಅಗತ್ಯ ಭದ್ರತೆ ಕೂಡ ಕೈಗೊಂಡಿದೆ. 4 ಡಿವೈಎಸ್ಪಿ, 15 ಸಿಪಿಐ ಗಳು, 40 ಪಿಎಸ್‌ಐ, 54 ಎ.ಎಸ್.ಐ, 104 ಹೆಡ್ ಕಾನ್ಸ್ಟೇಬಲ್, 170 ಪೊಲೀಸ್ ಕಾನ್ಸ್ಟೇಬಲ್, 38 ಮಹಿಳಾ ಕಾನ್ಸ್ಟೇಬಲ್, 5 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 2 ಕೆ.ಎಸ್.ಆರ್.ಪಿ ಮತ್ತು ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ 1 ತುಕಡಿಗಳನ್ನು ನಿಯೋಜಿಸಲಾಗಿದೆ.

ಚುನಾವಣಾ ಕಣದಲ್ಲಿರುವವರು:
ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 13 ಮಂದಿ ಕಣದಲ್ಲಿದ್ದಾರೆ. ಈ ಪೈಕಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳ್ಕರ್, ಭಾರತೀಯ ಜನತಾ ಪಾರ್ಟಿಯ ಕಾಗೇರಿ ವಿಶ್ವೇಶ್ವರ ಹೆಗಡೆ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆ, ಕರ್ನಾಟಕ ರಾಜ್ಯ ಸಮಿತಿಯ ವಿನಾಯಕ ಮಂಗೇಶ ನಾಯ್ಕ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ ಅವರ ಸೋಲು ಗೆಲುವು ನಿರ್ಧಾರವಾಗಲಿದೆ.

ಮತ ಎಣಿಕೆ ಹಿನ್ನಲೆ ವಾಹನ ಸಂಚಾರ ನಿಷೇಧ
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಕುಮಟಾದ ಡಾ.ಎ.ವಿ.ಬಳಿಗಾ, ಕಲಾ ಮತ್ತು ವಿಜ್ಞಾನ ಕಾಲೀಜಿನ ಮತ ಎಣಿಕೆ ಕೇಂದ್ರದ ಮುಂಭಾಗದ ರಸ್ತೆಯಾದ ಕುಮಟಾ ತಾಲೂಕಿನ ಹೆಗಡೆ ಸರ್ಕಲ್‌ನಿಂದ ಹಳಕಾರ ಕ್ರಾಸವರೆಗೆ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ಜೂನ್ 4 ರ ಬೆಳಗ್ಗೆ 6 ಗಂಟೆಯಿAದ ಮತ ಎಣಿಕೆ ಮುಕ್ತಾಯವಾಗುವವರೆಗೆ ನಿಷೇಧಿಸಿ ಹಾಗೂ ಈ ಅವಧಿಯಲ್ಲಿ ವಿವೇಕನಗರ 4ನೇ ಕ್ರಾಸ ಮೂಲಕ, ವಿವೇಕನಗರ ಶಾಲೆಯ ಪಕ್ಕದ ಮಾರ್ಗವಾಗಿ ರಾಮಲಿಲಾ ಆಸ್ಪತ್ರೆ ಕ್ರಾಸ್ ಎನ್‌ಹೆಚ್-66 ಮುಖಾಂತರ ಕುಮಟಾ ಶಹರಕ್ಕೆ, ಹಳಕಾರ ಕ್ರಾಸ್‌ನಿಂದ ಹೆಗಡೆವರೆಗಿನ ಎಲ್ಲಾ ಸಾರ್ವಜನಿಕರು ಹಳಕಾರ ಕ್ರಾಸ್-ಚಿತ್ರಿಗಿ ಮಾರ್ಗವಾಗಿ ಶಹರಕ್ಕೆ ತಲುಪಲು ಮಾರ್ಗ ಬದಲಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ.