ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ವಿಶ್ವಸಂಸ್ಥೆಯ ಗೌರವ
ಹೊನ್ನಾವರ: ಸ್ವಾತಂತ್ಯ ಪೂರ್ವದಲ್ಲಿ ಅಂದರೆ ೧೯೩೪ರಲ್ಲಿ ಸ್ಥಾಪನೆಯಾದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಗೆ ಈಗ ೯೦ನೇ ವರುಷದ ಸಂಭ್ರಮ. ಈ ಸಮಯದಲ್ಲೇ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ, ಗೌರವ, ಪ್ರಾಪ್ತವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಕ್ಷಗಾನ ರಂಗ ಭೂಮಿಯ ಇತಿಹಾಸದಲ್ಲಿ ಪ್ರಥಮ ದಾಖಲೆ ನಿರ್ಮಿಸಿದ ಮಂಡಳಿ, ಇಂದು ವಿಶ್ವಸಂಸ್ಥೆಯ ಗೌರವ ಪಡೆದುಕೂಂಡಿದ್ದು, ಯಕ್ಷಗಾನ ಸಂಸ್ಥೆಯೊಂದಕ್ಕೆ ಈ ಮಾನ್ಯತೆ ಪ್ರಥಮ ಬಾರಿಯಾಗಿ ಲಭಿಸಿದೆ.
ವಿಶ್ವದ ವಿವಿಧ ೫೮ ರಾಷ್ಟ್ರೀಯ ಸಂಸ್ಥೆಗಳಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ(ರಿ) ಒಂದಾಗಿದೆ. ಎಂಬುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಜೂನ್ ತಿಂಗಳಿನಲ್ಲಿ ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ನಡೆದ ೧೦ನೇ ಅಧಿವೇಶನದಲ್ಲಿ ಮಂಡಳಿಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೂ ೨೦೦೩ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ.
ಯುನೆಸ್ಕೋ ಮಾನ್ಯತೆ ಇಡಗುಂಜಿ ಮಂಡಳಿ ಸುದೀರ್ಘವಾಗಿ, ಯಕ್ಷಗಾನದ ಸಂವರ್ಧನೆ, ಪರಂಪರೆ, ಪ್ರಸಾರ, ಪ್ರಚಾರ, ದಾಖಲಾತಿ ಈ ಎಲ್ಲಾ ಪ್ರಯತ್ನ ಹಾಗೂ ಸಾಧನೆಗೆ ಅಂತರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ಸಿಕ್ಕ ಗೌರವವಾಗಿದೆ.
ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದಲ್ಲಿ ರಂಗಮಂದಿರ, ಯಕ್ಷಗಾನ ಪ್ರದರ್ಶನ, ಯಕ್ಷಗಾನ ಗುರುಕುಲ, ಶಿಕ್ಷಣ, ಆಟವೇ ಪಾಠ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಭಾಸಂ, ಪ್ರಾತ್ಯಕ್ಷತೆ, ಅಧ್ಯಯನ, ಕಾರ್ಯಾಗಾರ ಮುಂತಾದ ಕ್ಷೇತ್ರದಲ್ಲಿ ಕಳೆದ ೯೦ ವರುಷದಿಂದ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಮಂಡಳಿಯ ಸಾಧನೆ ಅಪಾರವಾದದ್ದು. ತಾಲೂಕಿನ ಹೆಮ್ಮೆಯ ಪರಂಪರಾಗತ ಸಂಸ್ಥೆಯೊಂದಕ್ಕೆ ಜಾಗತಿಕ ಮನ್ನಣೆ ಲಭಿಸಿದ್ದಕ್ಕೆ ತಾಲೂಕಿನ ಜನ ಸಂಭ್ರಮಗೊಂಡಿದ್ದಾರೆ.