ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವು
ಕುಂದಾಪುರ: ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ.
ಮೃತಪಟ್ಟ ಬಾಲಕರು ಬೈಂದೂರು ಯಡ್ತರೆ ಗ್ರಾಮದ ಯೋಜನಾ ನಗರದ ನಾಗೇಂದ್ರ (೧೩) ಹಾಗೂ ರೈಲ್ವೆ ನಿಲ್ದಾಣದ ಬಳಿಯ ಶಾನು ಮೊಹಮದ್ ಸಫಾನ್ (೧೩) ಎಂದು ಗುರುತಿಸಲಾಗಿದೆ.
ಬಾಲಕರು ಪರೀಕ್ಷೆ ಮುಗಿಸಿ ಮನೆಯಲ್ಲಿ ಊಟ ಮಾಡಿ ಇಬ್ಬರು ಬೈಂದೂರು ನಗರ ಸಮೀಪದ ಕೆರೆಕಟ್ಟೆ ಕೆರೆಯಲ್ಲಿ ಈಜಲು ತೆರಳಿದ್ದರು.
ಸರಿಯಾಗಿ ಈಜಲು ಬಾರದ ಇವರು ಮಳೆಯಲ್ಲಿ ಆಟವಾಡಲು ನೀರಿಗೆ ಇಳಿದಿದ್ದಾರೆ. ಕಳೆದೆರಡು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಮಳೆಯ ಕಾರಣ ಸ್ಥಳೀಯರು ಯಾರೂ ಇಲ್ಲದ ಕಾರಣ ಬಾಲಕರು ನೀರಿನಲ್ಲಿ ಮುಳುಗುತ್ತಿದ್ದಾಗ ಪರಿಸರದವರ ಗಮನಕ್ಕೆ ಬಾರದಿದ್ದುದರಿಂದ ಯಾರು ರಕ್ಷಣೆಗೆ ಇರಲಿಲ್ಲ ಎಂದು ತಿಳಿದುಬಂದಿದೆ.
ಬಾಲಕರು ಸಂಜೆಯವರೆಗೂ ಮನೆಗೆ ಬಾರದಿರುವ ಕಾರಣ ಬೈಂದೂರು ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು. ಬಳಿಕ ಹುಡುಕಾಟ ನಡೆಸಿದಾಗ ಕೆರೆಯ ಬಳಿ ಮೃತದೇಹ ಪತ್ತೆಯಾಗಿದೆ.
ರಾತ್ರಿ ಅಗ್ನಿ ಶಾಮಕದಳ ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕರ ಮೃತದೇಹವನ್ನು ಕೆರೆಯಿಂದ ಮೇಲಕ್ಕೆ ಎತ್ತಲಾಯಿತು.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.