For the best experience, open
https://m.samyuktakarnataka.in
on your mobile browser.

ಕೇಂದ್ರ ಸರ್ಕಾರದ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ

07:05 PM Dec 24, 2024 IST | Samyukta Karnataka
ಕೇಂದ್ರ ಸರ್ಕಾರದ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ

ಮಂಗಳೂರು: ಜನರಿಗೆ ಅನುಕೂಲವಾಗುವಂಥ ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಆವಾಜ್‌ 2.2 ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ದೇಶದ 24 ರಾಜ್ಯಗಳು ಈ ಯೋಜನೆ ಜಾರಿಗೆ ಸಹಿ ಹಾಕಿದ್ದರೂ ಕರ್ನಾಟಕ ಸರ್ಕಾರ ಇದುವರೆಗೆ ಸಹಿ ಹಾಕಿಲ್ಲ. ಈ ಕುರಿತು ಅಧಿವೇಶನದಲ್ಲಿ ರಾಜ್ಯ ಸಚಿವ ಜಮೀರ್‌ ಅಹ್ಮದ್‌ ಅವರು ‘ಯೋಜನೆಯಡಿ ಕೇಂದ್ರ ನೀಡುವ 1.5 ಲಕ್ಷ ರು. ಹಣದಲ್ಲಿ ಮನೆ ಕಟ್ಟಲಾಗದು’ ಎಂಬ ಹೇಳಿಕೆ ನೀಡಿದ್ದು ಹಾಸ್ಯಾಸ್ಪದ. ರಾಜ್ಯದ ಜನರ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕನಿಷ್ಠ ಕಾಳಜಿ ಇದ್ದರೆ ಪಿಎಂ ಆವಾಜ್‌ ಯೋಜನೆ ಜಾರಿಗೆ ಸಹಿ ಹಾಕಬೇಕು ಎಂದು ಆಗ್ರಹಿಸಿದರು.
ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿ ನಿಟ್ಟಿನಲ್ಲಿ ಸಿಆರ್‌ಝಡ್‌ ಸಮಸ್ಯೆ ಬಗೆಹರಿಸಲು ರಾಜ್ಯ ಬಂದರು ಇಲಾಖೆ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.

ಕೊಂಕಣ ರೈಲ್ವೆ ವಿಲೀನಕ್ಕೆ ಸಹಕರಿಸಿ: ಸಂಸತ್ತಿನಲ್ಲಿ ತಾನು ಎತ್ತಿದ 19 ಪ್ರಶ್ನೆಗಳು ಮತ್ತು ಅದಕ್ಕೆ ದೊರೆತ ಉತ್ತರಗಳ ಬಗ್ಗೆ ಮಾಹಿತಿ ನೀಡಿದ ಕ್ಯಾ. ಚೌಟ, ಕೊಂಕಣ ರೈಲ್ವೆಯ ಶೇರುಗಳನ್ನು ರಾಜ್ಯ ಸರ್ಕಾರ ಬಿಟ್ಟುಕೊಟ್ಟರೆ ಇಂಡಿಯನ್‌ ರೈಲ್ವೆ ಜತೆ ಕೊಂಕಣ ರೈಲ್ವೆಯನ್ನು ವಿಲೀನಗೊಳಿಸಲು ಸಿದ್ಧ ಎಂಬುದಾಗಿ ಕೇಂದ್ರ ಸಚಿವರು ಸಂಸತ್‌ನಲ್ಲಿ ಉತ್ತರ ನೀಡಿದ್ದಾರೆ. ಆ ಶೇರಿನ ಪೂರಕ ಹಣವನ್ನು ಕೇಂದ್ರ ಸರ್ಕಾರ ನೀಡಿದರೆ ಶೇರು ಬಿಟ್ಟುಕೊಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈಗಾಗಲೇ ಕೊಂಕಣ ರೈಲ್ವೆ ಕೋಟ್ಯಂತರ ರು. ಸಾಲದಲ್ಲಿರುವುದರಿಂದ ರಾಜ್ಯ ಸರ್ಕಾರ ಅದರ ಶೇರುಗಳನ್ನು ಬಿಟ್ಟುಕೊಟ್ಟು ವಿಲೀನಕ್ಕೆ ಸಹಕರಿಸಬೇಕು ಎಂದು ಕ್ಯಾ.ಚೌಟ ಒತ್ತಾಯಿಸಿದರು.

ರೈಲ್ವೆ ಲೈನ್‌: ಮಂಗಳೂರು- ಬೆಂಗಳೂರು ಹೈಕೆಪ್ಯಾಸಿಟಿ ರೈಲ್ವೆ ಲೈನ್‌ ಕುರಿತು ತಾನು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಇದರ ಪ್ರಾಮುಖ್ಯತೆಯನ್ನು ಒಪ್ಪಿಕೊಂಡಿದೆ. ಸುಬ್ರಹ್ಮಣ್ಯ- ಸಕಲೇಶಪುರ ನಡುವೆ ರೈಲ್ವೆ ಲೈನ್‌ ಎಲೆಕ್ಟ್ರಿಫಿಕೇಶನ್‌ ಕೆಲಸ ಮುಂದಿನ ಜೂನ್‌ನಲ್ಲಿ ಪೂರ್ತಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದರು. ಮಂಗಳೂರು ಜಂಕ್ಷನ್‌ ರೈಲ್ವೆ ಮತ್ತು ಸೆಂಟ್ರಲ್‌ನ್ನು ನೈಋತ್ಯ ರೈಲ್ವೆಗೆ ವಿಲೀನಗೊಳಿಸುವ ಉದ್ದೇಶದಿಂದ ಕೇಂದ್ರ ರೈಲ್ವೆ ಸಚಿವರ ಜತೆ ಮಾತುಕತೆ ನಡೆಸಿದ್ದು, ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ತಿಳಿಸಿದರು.

ಬಿ.ಸಿ.ರೋಡ್‌- ಗುಂಡ್ಯ ರಸ್ತೆ ಜೂನ್‌ಗೆ ಸಿದ್ಧ: ಮಂಗಳೂರು- ಬೆಂಗಳೂರು ನಡುವಿನ ಬಿ.ಸಿ.ರೋಡ್‌- ಗುಂಡ್ಯ ಚತುಷ್ಪಥ ಹೆದ್ದಾರಿ ಕಾಮಗಾರಿ 2025ರ ಜೂನ್‌ನಲ್ಲಿ ಪೂರ್ಣಗೊಳಿಸುವುದಾಗಿ ಕೇಂದ್ರ ಸಚಿವರು ಸಂಸತ್ತಲ್ಲಿ ಉತ್ತರ ನೀಡಿದ್ದಾರೆ ಎಂದರು.

ಶಿರಾಡಿ ಪರ್ಯಾಯ ರಸ್ತೆ ಚಿಂತನೆ: ಶಿರಾಡಿ ಘಾಟ್ ಭಾಗದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ ಸಾಧ್ಯತೆ ಕುರಿತು ಪ್ರಶ್ನೆ ಕೇಳಿದ್ದು, ಈ ನಿಟ್ಟಿನಲ್ಲಿ ಡಿಪಿಆರ್‌ ಕೆಲಸ ಆರಂಭವಾಗಿದೆ. ಪಶ್ಚಿಮ ಘಟ್ಟದಲ್ಲಿ ಇನ್ನೊಂದು ಮಾರ್ಗ ನಿರ್ಮಾಣ ಆಗಬೇಕಾದರೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಅನುಮತಿ ಹಾಗೂ ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಬೇಕು. ರಾಜ್ಯದ ಒಪ್ಪಿಗೆ ದೊರೆತರೆ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ತಿಳಿಸಿದರು.
ಅದೇ ರೀತಿ ಕಡಲ್ಕೊರೆತ, ಕೋಸ್ಟ್‌ ಗಾರ್ಡ್‌ ಅಕಾಡೆಮಿ, ಮಂಗಳೂರಿನಲ್ಲಿ ಪ್ರೀಮಿಯರ್‌ ಬ್ಯಾಂಕಿಂಗ್‌ ಸಂಸ್ಥೆ, ಅಡಕೆ ಎಲೆಚುಕ್ಕೆ ರೋಗ ಮತ್ತು ಹಳದಿ ರೋಗ ಕುರಿತು ಸರ್ಕಾರಿ- ಖಾಸಗಿ ಜಂಟಿ ಅಧ್ಯಯನ ಕುರಿತು ಸಂಬಂಧಿಸಿದ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ. ಅಡಕೆ ರೋಗಬಾಧಿತ ಪ್ರದೇಶಗಳ ರೈತರಿಗೆ ಅನುಕೂಲವಾಗುವಂತೆ ಪರ್ಯಾಯ ಬೆಳೆಯಾಗಿ ಕಾಫಿ ಬೆಳೆಯಬಹುದು ಎಂಬ ಅಧ್ಯಯನ ವರದಿ ಬಂದಿದೆ. ಈ ಕುರಿತು ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಪ್ರಮುಖರಾದ ಮೇಯರ್‌ ಮನೋಜ್‌ ಕೋಡಿಕಲ್‌, ಪ್ರೇಮಾನಂದ ಶೆಟ್ಟಿ, ಸಂಜಯ್‌ ಪ್ರಭು, ರಮೇಶ್‌ ಕಂಡೆಟ್ಟು, ವಸಂತ ಪೂಜಾರಿ ಇದ್ದರು.