ಕೇಸ್ ವಾಪಾಸ್ ಪಡೆಯದಿದ್ದರೆ ಪ್ರತಿಭಟನೆ...
ಸುಳ್ಳು ಕೇಸು ದಾಖಲಿಸಿ ಕೋರ್ಟು ಕಚೇರಿ ಅಲೆಯುವಂತೆ ಮಾಡುತ್ತಿರುವುದು ಇವರ ಬೇಜವಾಬ್ದಾರಿ, ಅಸಮರ್ಥತೆಗೆ ಹಿಡಿದ ಕೈಗನ್ನಡಿ.
ಬೆಂಗಳೂರು: ಪ್ರತಿಭಟನೆ ಮಾಡಿದ ಪರೀಕ್ಷಾರ್ಥಿಗಳ ಕೇಸ್ ವಾಪಾಸ್ ಪಡೆಯದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ
ಪರೀಕ್ಷೆ ನಡೆದ ದಿನ ಏನಾಯಿತು ಎಂಬುದರ ವಿಡಿಯೋ ಸಮೇತ ಪೋಸ್ಟ್ ಮಾಡಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ,
ಪಿ.ಡಿ.ಒ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ತಡವಾಗಿ ಬಂತೆಂದು ಪ್ರತಿಭಟಿಸಿದ ಪರೀಕ್ಷಾರ್ಥಿಗಳ ಮೇಲೆ ಕಾಂಗ್ರೆಸ್ ಸರ್ಕಾರ ಎಫ್.ಐ.ಆರ್ ಹಾಕಿದೆ.
ನ್ಯಾಯಯುತವಾಗಿ ಪ್ರತಿಭಟನೆ ಮಾಡಿದ ಪರೀಕ್ಷಾರ್ಥಿಗಳು ಕೇಸ್ ಹಾಕಿಸಿಕೊಂಡು ಪರದಾಡುತ್ತಿದ್ದಾರೆ.
ಆದರೆ, ಲೋಕಸೇವಾ ಆಯೋಗದ ಸಮನ್ವಯದ ಕೊರತೆ ಹಾಗೂ ಬೇಜವಾಬ್ದಾರಿಯಿಂದ ಪ್ರಶ್ನೆ ಪತ್ರಿಕೆ 45 ನಿಮಿಷ ತಡವಾಗಿ ಬಂದದ್ದನ್ನು ಕರ್ತವ್ಯನಿರತ ಸಿಬ್ಬಂದಿಗಳೇ ಒಪ್ಪಿಕೊಂಡಿದ್ದಾರೆ.
ಇದಲ್ಲದೆ ಒಂದು ಪೇಪರ್ ಸೀಲ್ ಮೊದಲೇ ತೆರೆದಿದ್ದು, ಒಂದು ಕವರ್ ನಲ್ಲಿ 24 ಪ್ರಶ್ನೆ ಪತ್ರಿಕೆ ಇರಬೇಕಾದದ್ದು ಕೇವಲ 12 ಇದ್ದದ್ದನ್ನು ಪ್ರತ್ಯಕ್ಷ ಸಾಕ್ಷಿಗಳು ನೋಡಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ [KPSC] ಒಂದರ ಮೇಲೊಂದು ಲೋಪಗಳನ್ನು ಎಸಗುತ್ತಾ ಪರೀಕ್ಷಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವುದಲ್ಲದೆ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ಕೋರ್ಟು ಕಚೇರಿ ಅಲೆಯುವಂತೆ ಮಾಡುತ್ತಿರುವುದು ಇವರ ಬೇಜವಾಬ್ದಾರಿ, ಅಸಮರ್ಥತೆಗೆ ಹಿಡಿದ ಕೈಗನ್ನಡಿ.
ಸರ್ಕಾರ ಕೂಡಲೇ ಪರೀಕ್ಷಾರ್ಥಿಗಳ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಾಸ್ ಪಡೆಯಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಸರ್ಕಾರ ಅಧಿಕಾರಿಗಳ ಹಾಗೂ ಲೋಕ ಸೇವಾ ಆಯೋಗದ ತಪ್ಪಿನಿಂದ ಆದ ಪ್ರಮಾದವನ್ನು ಒಪ್ಪಿಕೊಂಡು ಕೇಸ್ ವಾಪಾಸ್ ಪಡೆಯದಿದ್ದರೆ ಲೋಕ ಸೇವಾ ಆಯೋಗದ ಕಚೇರಿಯ ಮುಂದೆ ಪರೀಕ್ಷಾರ್ಥಿಗಳ ಜೊತೆ ಪ್ರತಿಭಟಿಸುತ್ತೇನೆ ಎಂದಿದ್ದಾರೆ.