ಕ್ಯಾಬಿನ್ ಏರಿ ಪ್ರಾಣ ಉಳಿಸಿಕೊಂಡ ಟ್ರಕ್ ಚಾಲಕ: ಹೊಸ ಸೇತುವೆ ಸಂಚಾರ ಕೂಡ ಬಂದ್
ಕಾರವಾರ: ನಗರದ ಕೋಡಿಭಾಗದ ಬಳಿ ಕಾಳಿ ನದಿಯ ಸೇತುವೆ ಕುಸಿದ ವೇಳೆ ಲಾರಿಯ ಕ್ಯಾಬಿನ್ ಏರಿ ಪ್ರಾಣ ಹಿಡಿದುಕೊಂಡಿದ್ದ ಟ್ರಕ್ ಚಾಲಕನನ್ನು ಪೊಲೀಸರು ಹಾಗೂ ಮೀನುಗಾರರು ದೋಣಿ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.
ತಡರಾತ್ರಿ ನಡೆದ ಈ ದುರಂತದಲ್ಲಿ ಸೇತುವೆ ಕುಸಿದ ಬೆನ್ನಲ್ಲೆ ಟ್ರಕ್ ಕೂಡ ನದಿಗೆ ಬಿದ್ದಿದೆ. ಟ್ರಕ್ ಸಂಪೂರ್ಣ ಮುಳುಗಡೆಯಾಗಿದ್ದು ಟ್ರಕ್ ಕ್ಯಾಬಿನ್ ಮಾತ್ರ ನೀರಿನಲ್ಲಿ ಕಾಣತೊಡಗಿದೆ. ಗಾಯಗೊಂಡಿರುವ ಲಾರಿ ಚಾಲಕ ನೀರಿನಿಂದ ಹೊರಬಂದು ಲಾರಿ ಕ್ಯಾಬಿನ್ ಏರಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾಗ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾಗಿ ಆಗಮಿಸಿದ ಪೊಲೀಸರು ಹಾಗೂ ಮೀನುಗಾರರು ದೋಣಿಯನ್ನು ಕೊಂಡೊಯ್ದು ಆತನನ್ನು ದಡಕ್ಕೆ ಕರೆ ತಂದು ಕೂಡಲೇ ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಾರಿ ಚಾಲಕನನ್ನು ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂದು ಗುರುತಿಸಲಾಗಿದೆ.
ಇನ್ನು ವಿಷಯ ತಿಳಿದ ಕೂಡಲೇ ಎಚ್ಚೆತ್ತ ಉತ್ತರಕನ್ನಡ ಎಸ್.ಪಿ ನಾರಾಯಣ್, ಎಎಸ್‌ಪಿ ಜಯಕುಮಾರ ಹಾಗೂ ಡಿಎಸ್‌ಪಿ ಗಿರೀಶ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಶಾಸಕ ಸತೀಶ್ ಸೈಲ್ ಕೂಡ ಮಧ್ಯರಾತ್ರಿಯಲ್ಲಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಅವೈಜ್ಞಾನಿಕ ಕಾಮಗಾರಿಯಿಂದ ಕಳೆದ 15 ದಿನಗಳ ಹಿಂದಷ್ಟೆ ಶಿರೂರು ಗುಡ್ಡ ಕುಸಿತ ಆಗಿತ್ತು. ಆ ಘಟನೆ ಮರೆಯುವ ಮುನ್ನವೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಸದ್ಯ ಐಆರ್‌ಬಿ ಯಿಂದ ನಿರ್ಮಾಣ ಮಾಡಿರುವ ಹೊಸ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡಲು ಜಿಲ್ಲಾಧಿಕಾರಿ ಎನ್ ಎಚ್ ಎ ಐ ಗೆ ಆದೇಶ ನೀಡಿದ್ದಾರೆ.
ಸೇತುವ ಗುಣಮಟ್ಟದ ಬಗ್ಗೆ 12 ಗಂಟೆಯೊಳಗೆ ವರದಿ ಸಲ್ಲಿಸುವಂತೆಯೂ NHAIಗೆ ಆದೇಶಿಸಿರುವ ಡಿಸಿ ಲಕ್ಷ್ಮೀಪ್ರಿಯಾ, ಸೇತುವೆ ಗುಣಮಟ್ಟದ ವರದಿ ಬರುವವರೆಗೂ ಹೊಸ ಸೇತುವೆಯಲ್ಲಿಯೂ ಸಂಚಾರವನ್ನು ನಿಷೇಧ ಮಾಡಲಾಗಿದೆ. ಇದರಿಂದ ಸದ್ಯ ಕಾರವಾರದಿಂದ ಗೋವಾ ಸಂಪರ್ಕ ಮಾಡುವ ಸಂಚಾರ ಸಂಪೂರ್ಣ ಬಂದ್ ಆಗಿದೆ.