ಖರ್ಗೆ-ಧನಕರ್ ನಡುವೆ ಮಾತಿನ ಚಕಮಕಿ: ಕಲಾಪ ಸೋಮವಾರಕ್ಕೆ ಮುಂದೂಡಿಕೆ
ನವದೆಹಲಿ: ಜಗದೀಪ್ ಧನಕರ್ ಮತ್ತು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ಇಂದು ತೀವ್ರ ಮಾತಿನ ಚಕಮಕಿ ನಡೆದಿದ್ದು, ರಾಜ್ಯಸಭೆಯು ಶುಕ್ರವಾರದ ಕಲಾಪಕ್ಕೆ ಸಾಕ್ಷಿಯಾಯಿತು, ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಅವಿಶ್ವಾಸ ನಿರ್ಣಯದ ಕುರಿತು ಮಾತನಾಡಿದ ಧನಕರ್ ಅವರು ನಾನು ರೈತನ ಮಗ. ನಾನು ದೇಶಕ್ಕಾಗಿ ಸಾಯಲೂ ಸಿದ್ಧ. ರೈತನ ಮಗನೇಕೆ ಉಪ ರಾಷ್ಟ್ರಪತಿ ಆಸನದಲ್ಲಿ ಕುಳಿತಿದ್ದಾನೆ ಎಂಬುದೇ ಸಂಸತ್ತಿನಲ್ಲಿ ನಿಮ್ಮ 24 ಗಂಟೆಗಳ ಸಮಸ್ಯೆಯಾಗಿದೆ. ನಾನು ನಿಮಗೆ ಸಾಕಷ್ಟು ಗೌರವ ನೀಡಿದ್ದೇನೆ. ನಿಮ್ಮ ವರ್ತನೆಯನ್ನೊಮ್ಮೆ ನೋಡಿಕೊಳ್ಳಿ. ನೀವು ಏನು ಮಾತನಾಡುತ್ತಿದ್ದೀರಿ ಎಂಬುದನ್ನು ನೋಡಿಕೊಳ್ಳಿ. ನಾನು ಸಾಕಷ್ಟು ಸಹಿಸಿದ್ದೇನೆ" ಎಂದು ಖರ್ಗೆ ಹಾಗೂ ಇನ್ನಿತರ ಕಾಂಗ್ರೆಸ್ ಸಂಸದರಿಗೆ ಕೈಮುಗಿದು ಧನಕರ್ ಮನವಿ ಮಾಡಿದರು.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಅಧ್ಯಕ್ಷರು ಕಾಂಗ್ರೆಸ್ ನಾಯಕರನ್ನು ಅವಮಾನಿಸಿದ್ದಾರೆ, ನಾನೂ ಕೂಡ ಕೂಲಿಕಾರನ ಮಗ, ನಿಮಗಿಂತ ಹೆಚ್ಚು ಸವಾಲುಗಳನ್ನು ಎದುರಿಸಿದ್ದೇನೆ… ನಮ್ಮ ಪಕ್ಷದ ನಾಯಕರನ್ನು ನಿಂದಿಸುತ್ತಿದ್ದೀರಿ, ಕಾಂಗ್ರೆಸ್‌ಗೆ ಅವಮಾನ ಮಾಡುತ್ತಿದ್ದೀರಿ. … ನಿಮ್ಮ ಹೊಗಳಿಕೆ ಕೇಳಲು ಇಲ್ಲಿಗೆ ಬಂದಿಲ್ಲ, ಚರ್ಚೆಗೆ ಬಂದಿದ್ದೇವೆ ಎಂದು ಖರ್ಗೆ ಹೇಳಿದರು.