ಗಣೇಶ ವಿಸರ್ಜನೆ ವೇಳೆ ಕುಸಿದುಬಿದ್ದು ವ್ಯಕ್ತಿ ಸಾವು
ಭಟ್ಕಳ: ನಗರದಲ್ಲಿ ಬುಧವಾರ ರಾತ್ರಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ನಗರದ ಜನತಾ ಪತ್ತಿನ ಸಹಕಾರಿ ಸಂಘದ ನಿವೃತ್ತ ನೌಕರ, ಬೇಂಗ್ರೆ ಮಾವಿನಕಟ್ಟಾ ನಿವಾಸಿ ಮಾರುತಿ ಚೌಡಯ್ಯ ದೇವಾಡಿಗ (೬೨) ಎಂದು ಗುರುತಿಸಲಾಗಿದೆ. ಈತನು ಬುಧವಾರ ರಾತ್ರಿ ೪ ಸಾರ್ವಜನಿಕ ಗಣಪತಿಗಳನ್ನು ವಿರ್ಸಜನೆಗಾಗಿ ಚೌಥನಿ ಹೊಳೆಗೆ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿರುವ ಸಂದರ್ಭದಲ್ಲಿ ಮರೆವಣಿಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದ ಎನ್ನಲಾಗಿದೆ. ಹೂವಿನ ಮಾರುಕಟ್ಟೆಯ ಗುಡಿಗಾರರ ಮನೆ ಸಮೀಪ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಮಾರುತಿ ಕುಸಿದು ಬಿದ್ದ ಎನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿದಿಲ್ಲ. ಮೃತ ಮಾರುತಿ ದೇವಾಡಿಗ ನಗರದ ಜನತಾ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದು ಕಳೆದ ೨ ವರ್ಷದ ಹಿಂದಷ್ಟೇ ನಿವೃತ್ತಿಯಾಗಿದ್ದರು. ಪ್ರತಿ ವರ್ಷ ವಿಶ್ವ ಹಿಂದೂ ಪರಿಷತ್ ನಿಂದ ಪ್ರತಿಸ್ಠಾಪಿಸುವ ಗಣಪತಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಇವರು ಮೆರವಣಿಗೆಯಲ್ಲಿ ಮುಂದೆ ಇರುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರೂ ಪುತ್ರಿಯರು, ಬಂಧುಬಳಗ ಅಗಲಿದ್ದಾರೆ.