ಗಣೇಶ ವಿಸರ್ಜನೆ ವೇಳೆ ಗಲಾಟೆ: ಓರ್ವನಿಗೆ ಚಾಕು ಇರಿತ, ಮೂವರಿಗೆ ಗಾಯ
ಗಂಗಾವತಿ(ಕೊಪ್ಪಳ): ೧೭ನೇ ದಿನದ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ಗಲಾಟೆಯಾಗಿ, ಓರ್ವನಿಗೆ ಚಾಕು ಇರಿದಿದ್ದು, ಮೂವರು ಗಾಯಾಳುಗಳಾದ ಘಟನೆ ನಗರದ ಯಶೋಧಾ ಆಸ್ಪತ್ರೆ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಚಾಕು ಇರಿತಕ್ಕೊಳಗಾದ ಯುವಕನನ್ನು ಅಂಬೇಡ್ಕರ್ ನಗರದ ಶಿವು(೩೮) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಗಣೇಶ, ಮಂಜು, ಸಾಗರ್ ಎನ್ನಲಾಗಿದೆ.
ನಗರದ ಗುಂಡಮ್ಮ ಕ್ಯಾಂಪ್ ನ ಗಜಾನನ ಯುವಕರ ಸಂಘದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆಯಲ್ಲಿ ಡಿಜೆ ಹಾಡಿಗೆ ಹೆಜ್ಜೆ ಹಾಕುವಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾತು ಬೆಳೆದು ಎರಡು ಗುಂಪುಗಳ ಯುವಕರು ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತು. ಓರ್ವ ಯುವಕನಿಗೆ ಚಾಕು ಇರಿಯಲಾಗಿದ್ದು, ಮೂವರ ಮೇಲೆ ಹೆಲ್ಲೆ ಮಾಡಲಾಗಿದೆ. ಬಳಿಕ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಚಾಕು ಇರಿತಕ್ಕೊಳಗಾದ ಯುವಕ ಶಿವುನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಗಾಯಗೊಂಡ ಮೂವರು ಯುವಕರಾದ ಗಣೇಶ, ಮಂಜು, ಸಾಗರ್ ನನ್ನು ಚಿಕಿತ್ಸೆಗಾಗಿ ಗಂಗಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ೨೦ ಯುವಕರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.