For the best experience, open
https://m.samyuktakarnataka.in
on your mobile browser.

ಗುಡದಯ್ಯನ ಶ್ರೀದೇವಿ ಪುರಾಣ

03:00 AM Sep 01, 2024 IST | Samyukta Karnataka
ಗುಡದಯ್ಯನ ಶ್ರೀದೇವಿ ಪುರಾಣ

ಇಡೀ ಶ್ರಾವಣ ಮಾಸದಲ್ಲಿ ಶ್ರೀ ದೇವಿ ಪುರಾಣ ಹೇಳುತ್ತಿದ್ದ ವೇದಮೂರ್ತಿ ಗುಡದಯ್ಯನವರನ್ನು ಇಡೀ ಊರ ಜನರು ಕೊಂಡಾಡುತ್ತಿದ್ದರು. ಗುಡದಯ್ಯ ಪುರಾಣ ಹೇಳುತ್ತಿದ್ದರೆ ನಮಗೆ ಬೇರೆ ಏನೂ ಬೇಡ. ಆತ ಹೇಳುವ ಪುರಾಣವನ್ನೇ ಕೇಳಬೇಕು ಎಂದು ಅನಿಸುತ್ತದೆ ಎಂದು ಲಾದುಂಚಿ ರಾಜ ಕಣ್ಣೀರು ಒರೆಸಿಕೊಳ್ಳುತ್ತ ಹೇಳುತ್ತಿದ್ದ. ಶ್ರಾವಣ ಮಾಸದಲ್ಲಿ ಏನು ತಪ್ಪಿಸಿದರೂ ಸ್ನಾನ ತಪ್ಪಿಸುವುದಿಲ್ಲ ಎಂದು ಆಣೆ ಮಾಡಿದ್ದ ಗುಡದಯ್ಯ, ಮುಂಜಾನೆ ಗೋಸ್ಲಹಳ್ಳಕ್ಕೆ ಹೋಗಿ ಸ್ನಾನ ಮಾಡಿ ಬರುತ್ತಿದ್ದ. ಸಂಜೆ ಸ್ವಚ್ಛವಾಗಿ ಕೈಕಾಲು ಮುಖ ತೊಳೆದುಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು ಶುಭ್ರವಾಗಿ ಎಲ್ಲರೂ ಬರುವುದಕ್ಕಿಂತ ಮುಂಚೆ ದೇವಸ್ಥಾನಕ್ಕೆ ಹೋಗುತ್ತಿದ್ದ. ತಲತಲಾಂತರದಿಂದ ಗುಡಿಪೂಜೆ ಮಾಡಿಕೊಂಡು ಬರುತ್ತಿದ್ದ ಕುಪ್ಪೇಸಿ ತನ್ನ ಮಗಳಿಗೆ ದೇವಿ ಎಂದು ಹೆಸರು ಇಟ್ಟಿದ್ದ. ಅವರ ಮನೆತನದಲ್ಲಿ ಯಾರೂ ಕಾಲೇಜು ಮೆಟ್ಟಿಲು ಹತ್ತಿರಲಿಲ್ಲ. ದೇವಿ ಮಾತ್ರ ಎರಡು ಚಾನ್ಸಿಗೆ ಎಸ್‌ಎಸ್‌ಎಲ್‌ಸಿ ಪಾಸಾಗಿ ಪಕ್ಕದ ಊರಿನ ಕಾಲೇಜಿಗೆ ಸೇರಿಕೊಂಡಿದ್ದಳು. ಗೆಳತಿಯರು ದೇವಿ ಬದಲಾಗಿ ಆಕೆಯನ್ನು ಶ್ರೀದೇವಿ ಎಂದು ಕರೆಯುತ್ತಿದ್ದರು. ನಂತರ ಊರಿನಲ್ಲಿಯೂ ಆಕೆಗೆ ಶ್ರೀದೇವಿ ಎಂದು ಕರೆಯುತ್ತಿದ್ದರು. ಕುಪ್ಪೇಸಿ ಇದೂ ಕೂಡ ದೇವಿಯ ಹೆಸರಲ್ಲವೇ? ಎಂದು ಸುಮ್ಮನಿದ್ದ. ಇಂತಹ ಶ್ರೀದೇವಿ ಪಿಯುಸಿ ಮೊದಲ ವರ್ಷದಲ್ಲಿ ಫೇಲಾಗಿ ಮನೆ ಸೇರಿದಳು. ದೇವಿಸೇವಾ ಎಂದು ಪ್ರತಿದಿನ ಸಾಯಂಕಾಲ ದೇವಿಗೆ ಅಲಂಕಾರ ಮಾಡುತ್ತಿದ್ದಳು. ಗುಡದಯ್ಯನೂ ಅದೇ ಸಮಯಕ್ಕೆ ಹೋಗುತ್ತಿದ್ದನಾದ್ದರಿಂದ ಇಬ್ಬರೂ ಆತ್ಮೀಯವಾಗಿದ್ದರು. ಪ್ರತಿದಿನ ಪುರಾಣ ಹೇಳುವಾಗ ಶ್ರೀದೇವಿಯು ಎಲ್ಲರಿಗಿಂತ ಮುಂದೆ ಕುಳಿತುಕೊಳ್ಳುತ್ತಿದ್ದಳು ಹಾಗಾಗಿ ಗುಡದಯ್ಯ ಆಕೆಯನ್ನು ನೋಡಿಯೇ ಪುರಾಣ ಹೇಳುತ್ತಿದ್ದ. ಶ್ರಾವಣ ಮಾಸದ ಕೊನೆಯ ದಿನ ಪುರಾಣ ಹೇಳುತ್ತಿದ್ದ ಗುಡದಯ್ಯನಿಗೆ ದೇವಿ ಮೈಮೇಲೆ ಬಂದಳು. ಜನರು ಗಾಬರಿಯಾಗಿ ನಿನಗೆ ಏನು ಬೇಕು ಹೇಳು ಅಂದಾಗ… ನಾನು ಇದೇ ಊರಲ್ಲಿ ಇರಲು ಬಯಸುತ್ತೇನೆ. ಇದೇ ಗುಡದಯ್ಯ ತಾನು ಸಾಯುವವರೆಗೆ ನನ್ನ ಪುರಾಣ ಹೇಳಲಿ ಎಂದು ಹೇಳಿದ ಊರವರು ಆಗಲಿ ಎಂದರು. ಮರುದಿನ ಪಂಚಾಯ್ತಿ ಸೇರಿಸಿ ಕುಪ್ಪೇಸಿಗೆ ಮಗಳನ್ನು ಗುಡದಯ್ಯನಿಗೆ ಕೊಡುವಂತೆ ಪುಸಲಾಯಿಸಿದರು. ಆತ ಒಲ್ಲದ ಮನಸ್ಸಿನಿಂದ ಒಪ್ಪಿದ. ಅವರಿಬ್ಬರಿಗೂ ಮದುವೆಯಾಯಿತು. ಈಗ ಗುಡದಯ್ಯ ಪುರಾಣ ಹೇಳುವುದನ್ನು ಬಿಟ್ಟಿದ್ದಾನೆ. ಸಾಹುಕಾರರ ಟ್ರ್ಯಾಕ್ಟರ್ ಡ್ರೈವರ್ ಆಗಿದ್ದಾನೆ.