ಗೋವಾ ಹೋಟೆಲ್‌ನಲ್ಲಿ ಯಲ್ಲಾಪುರದ ವ್ಯಕ್ತಿ ಸಾವು
06:15 PM Sep 26, 2024 IST | Samyukta Karnataka
ಪಣಜಿ(ಮಡಗಾಂವ): ಗೋವಾದ ಮಡಗಾಂವ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ತಂಗಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವ್ಯಕ್ತಿಯೋರ್ವರು ಮೃತಾವಸ್ಥೆಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಮಾಗೋಡಿನ ಮಾಲದಮನೆಯ ಸುಬ್ರಾಯ ಭಟ್ (೫೩) ಎಂದು ಗುರುತಿಸಲಾಗಿದೆ.
ಗೋವಾದ ಮಡಗಾಂವ್‌ನ ಹೋಟೆಲ್‌ವೊಂದರಲ್ಲಿ ಸುಬ್ರಾಯ ಭಟ್ ವಾಸ್ತವ್ಯ ಹೂಡಿದ್ದರು. ಆದರೆ ಮರುದಿನ ಬೆಳಗಾದರೂ ರೂಮಿನಿಂದ ಹೊರಬಾರದ ಕಾರಣ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಎಷ್ಟೇ ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ ಎನ್ನಲಾಗಿದೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿ ಕೋಣೆಯ ಬಾಗಿಲು ತೆರೆದು ನೋಡಿದಾಗ ಸುಬ್ರಾಯ ಭಟ್ ಮಂಚದ ಮೇಲೆ ಮಲಗಿರುವ ಸ್ಥಿತಿಯಲ್ಲಿದ್ದರು. ಕೂಡಲೇ ಇವರನ್ನು ಮಡಗಾಂವ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಇವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.