ಗ್ಯಾರಂಟಿ ಕೊಡುವುದಿಲ್ಲ…
ಯಾವ ಮೂಡಿನಲ್ಲಿ ಇದ್ದನೋ ಏನೋ ಮುದಿಗೋವಿಂದಪ್ಪ ಗ್ಯಾರಂಟಿ ಕೊಡುವುದಿಲ್ಲ ಎಂದು ಹೇಳಿರುವುದಕ್ಕೆ ದೊಡ್ಡ ರಂಪಾರಾಮಾಯಣ ಆಗಿದೆ. ಗೋವಿಂದಪ್ಪ ಗ್ಯಾರಂಟಿ ಕುರಿತು ಹೀಗಂದ… ಹಾಗಂದ… ಇನ್ನೊಂದಂದ… ಮತ್ತೊಂದು ಅಂದ ಎಂದು ತಲಿಗೊಂದು ಮಾತನಾಡಿದರು. ಮತ್ತೆ ಇಷ್ಟುದಿನ ಕೊಟ್ಟು ಈಗ ಕೊಡುವುದಿಲ್ಲ ಎಂದು ಹೇಳಿದರೆ ಹೇಗೆ ಎಂದು ಕ್ವಾಟಿಗ್ವಾಡಿ ಸುಂದ್ರವ್ವ ಭಯಂಕರ ಗರಂ ಆದಳು. ಗ್ಯಾರಂಟಿನ್ನ ನಂಬಿ ನಾವು ಇಷ್ಟೆಲ್ಲ ಸಾಲ-ಸೋಲ ಮಾಡಿದ್ದೇವೆ ಈಗ ಹೀಗಂದರೆ ಹೇಗೆ ನಾವು ಬಿಡುವುದಿಲ್ಲ ಎಂದು ಕರಿಭಾಗೀರತಿ ತನ್ನ ನಿಲುವನ್ನು ಸ್ಪಷ್ಟಪಡಿಸಿದಳು. ಮೇಕಪ್ ಮರೆಮ್ಮಳಂತೂ ದುಃಖಿಸುತ್ತ, ಈ ಕಡೆ ಮೇಕಪ್ ಮಾಡಿಕೊಳ್ಳುವ ವಸ್ತುಗಳು ತುಟ್ಟಿಯಾಗಿವೆ. ಈಗ ಗ್ಯಾರಂಟಿ ಕೊಡುವುದಿಲ್ಲ ಅಂದರೆ ಹೇಗೆ ಎಂದು ಅರ್ಧಂಭರ್ಧ ಅಳುತ್ತ ಹೇಳಿದಳು. ಎಲ್ಲರೂ ಸಮಾಧಾನ ಮಾಡಿಕೊಳ್ಳಿ ಎಂದು ಕಂಟ್ರಂಗಮ್ಮತ್ತಿ ಹೇಳಿದರೂ ಯಾರೊಬ್ಬರೂ ಆಕೆಯ ಮಾತನ್ನು ಕೇಳಲಿಲ್ಲ. ಮಹಿಳಾಮಂಡಳದ ಅಧ್ಯಕ್ಷೆ ರಂಗೂಬಾಯಿ ಅಂತೂ ಅದ್ಹೇಗೆ ಆಗುತ್ತದೆ. ನಾನು ಅಧ್ಯಕ್ಷಳಾಗಿದ್ದುಕೊಂಡು ಏನು ಪ್ರಯೋಜನ? ನಾನು ಕೇಳುತ್ತೇನೆ ನೀವೆಲ್ಲ ಸುಮ್ಮನಿರಿ ಎಂದು ರಮಿಸಿದಳು. ನಾವು ಪುಗಸೆಟ್ಟೆ ಬಸ್ಸಿನಲ್ಲಿ ಎಲ್ಲಿ ಹೋಗಬಾರದೋ ಅಲ್ಲೆಲ್ಲ ಹೋಗಿಬಂದೆವು. ಡ್ರೈವರ್ ಕಂಡಕ್ಟರ್ ಜತೆ ಜಗಳವಾಡಿದೆವು. ಅವರು ಇನ್ನೂವರೆಗೂ ನಮ್ಮ ಮೇಲೆ ಸಿಟ್ಟು ಇಟ್ಟುಕೊಂಡಿದ್ದಾರೆ ಈಗ ಗ್ಯಾರಂಟಿ ಕೊಡುವುದಿಲ್ಲ ಅಂದರೆ ಅವರು ನಮ್ಮನ್ನು ಬಿಟ್ಟಾರೆಯೇ? ಎಂದು ಜಿಲಿಬಿಲಿ ಎಲ್ಲವ್ವ ಜೋರು ಬಾಯಿ ಮಾಡಿ ಹೇಳಿದಾಗ ಎಲ್ಲರೂ ಒಂದುಕ್ಷಣ ಬೆಚ್ಚಿಬಿದ್ದರು. ಈಗ ಒಂದು ಕೆಲಸ ಮಾಡೋಣ… ಹೇಗೂ ಪುಗಸೆಟ್ಟೆ ಬಸ್ಸುಗಳು ಇವೆ. ಎಲ್ಲರೂ ಸೇರಿ ಬೆಂಗಳೂರಿಗೆ ಹೋಗಿ ಮದ್ರಾಮಣ್ಣನವರ ಕಡೆ ಹೋಗಿ ಕೇಳೋಣ ಈಗ ನಿಮ್ಮ ಮನೆಗೆ ನಡೆಯಿರಿ ಎಂದು ಎಲ್ಲರನ್ನೂ ಸಮಾಧಾನ ಮಾಡಿ ಕಳುಹಿಸಲಾಯಿತು. ಮರುದಿನ ಇವರೆಲ್ಲ ಸೇರಿ.. ಬೆಂಗಳೂರು ಬಸ್ಸು ಹತ್ತಿದರು. ಮದ್ರಾಮಣ್ಣನವರ ಮನೆಮುಂದೆ ಘೋಷಣೆ ಕೂಗುತ್ತ ಕುಳಿತರು. ಅವರು ಹೊರಗೆ ಬಂದು ಕೇಳಿದಾಗ… ಹಿಂಗಿಂಗೆ ಗ್ಯಾರಂಟಿ ವಿಷಯ ಅಂದಾಗ… ನಿಮಗಾರು ಹೇಳಿದರು ಅಂದರು. ಎಲ್ಲರೂ ಮುದಿಗೋವಿಂದಪ್ಪನ ಹೆಸರು ಹೇಳಿದಾಗ… ಮೊಬೈಲ್ ತೆಗೆದು ಸ್ಪೀಕರ್ ಆನ್ ಮಾಡಿದ ಮದ್ರಾಮಣ್ಣ ಮುದಿಗೋವಿಂದಪ್ಪನಿಗೆ ಕಾಲ್ ಮಾಡಿದರು. ಆ ಕಡೆಯಿಂದ ಹಲೋ ಅಂದಾಕ್ಷಣ… ನಾನಪ ಮುದಿಗೋವಿಂದಪ್ಪ ಮದ್ರಾಮಣ್ಣ ಮಾತಾಡ್ತೀನಿ… ಇವರಿಗೆಲ್ಲ ಗ್ಯಾರಂಟಿ ಕೊಡಂಗಿಲ್ಲ ಅಂತ ಹೇಳಿದಿಯಂತಲ್ಲ? ಎಂದಾಗ… ಅಯ್ಯೋ ಸ್ವಾಮಿ ಹಂಗಲ್ಲ… ನನ್ನ ಅಂಗಡಿಗೆ ಬಂದ ಬಗ್ಗೀಕಾನಿ ಒಂದು ಕೆಜಿ ಬೆಲ್ಲ ತೆಗೆದುಕೊಂಡ. ಈ ಬೆಲ್ಲ ಮನೆಯಲ್ಲಿ ತಿಂಗಳಾನುಗಟ್ಟಲೇ ಇಟ್ಟರೆ ಕಪ್ಪಾಗುವುದಿಲ್ಲವೇ? ಅಂದ. ಅದಕ್ಕೆ ನಾನು ಗ್ಯಾರಂಟಿ ಕೊಡುವುದಿಲ್ಲ ಅಂದೆ ಅವರು ಹಾಗೆ ತಿಳಿದುಕೊಂಡಿದ್ದಾರೆ ಎಂದು ಹೇಳಿದ. ಕೇಳಿದ್ರಾ ಎಂದು ಗಡಸುಧ್ವನಿಯಲ್ಲಿ ಹೇಳಿದ ಮದ್ರಾಮಣ್ಣನವರು ನೋಡಿದ್ರೇನಮ್ಮಾ…. ನಡೀರಿ ಉಂಡು ಹೋಗಿ ಎಂದು ಕಾರು ಹತ್ತಿ ಹೋದರು.