ಗ್ರಾಮ ಲೆಕ್ಕಿಗ ಅಮಾನತು
ಕುಷ್ಟಗಿ: ಪಟ್ಟಣದ ತಹಶೀಲ್ದಾರ ಕಚೇರಿಯ ಭೂಮಿ ಕೇಂದ್ರ ಗ್ರಾಮ ಆಡಳಿತ ಅಧಿಕಾರಿ ಶ್ರೀ ಸ್ವಾಮಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿರುವುದು ಮತ್ತು ಸರ್ಕಾರಿ ಹಣ ದುರುಪಯೋಗ ಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ನಲಿನ್ ಅತುಲ್ ಆದೇಶ
ಹೊರಡಿಸಿದ್ದಾರೆ. ಗ್ರಾಮ ಆಡಳಿತ ಅಧಿಕಾರಿ ಶ್ರೀ ಸ್ವಾಮಿ ಮೇ ೨೭ ರಿಂದ ೩೦ ರವರೆಗೆ ಒಟ್ಟು (ನಾಲ್ಕು) ದಿನಗಳು ಮೇಲಾಧಿಕಾರಿಗಳ ಪರವಾನಿಗೆ ಪಡೆಯದೇ, ರಜೆ ಅರ್ಜಿಯನ್ನು ಸಲ್ಲಿಸದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಸದರಿ ನೌಕರರಿಗೆ ಮೇ.೩೧ ರಂದು ಕಾರಣ ಕೇಳಿ ನೋಟಿಸ್ ಕಂದಾಯ ನಿರೀಕ್ಷಕರ ಮುಖಾಂತರ ಕಳುಹಿಸಲಾಗಿರುತ್ತದೆ. ಕಂದಾಯ ನಿರೀಕ್ಷಕ ನೋಟಿಸ್ ಜಾರಿ ಮಾಡಲು ನೌಕರರ ಮನೆಗೆ ಎರಡು ಬಾರಿ ಭೇಟಿ ಮಾಡಿದರೂ ಶ್ರೀಸ್ವಾಮಿ ಮನೆಯಲ್ಲಿ ವಾಸವಿರುವುದಿಲ್ಲ ಎಂಬುದು ತಿಳಿದುಬಂದಿದೆ.. ಪಹಣಿ ಕಿಯೋಸ್ಕ ಶಾಖೆಯಲ್ಲಿ ಸಾರ್ವಜನಿಕರಿಗೆ ವಿತರಿಸಲಾದ ಪಹಣಿ ಮತ್ತು ಮುಟೇಷನ್ ನಕಲು ಪ್ರತಿಗಳ ಮೊತ್ತ ಅಂದಾಜು ರೂ.೩೨,೮೧,೩೮೮/- ಗಳನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಕೆಲಸ ನಿರ್ವಹಿಸುವಲ್ಲಿ ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವುದರಿಂದ, ಸದರಿಯವರ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಹಾಗೂ ಶ್ರೀಸ್ವಾಮಿ ಹುದ್ದೆಯ ಲೀನನ್ನು ಕಾರಟಗಿ ತಾಲ್ಲೂಕಿನಲ್ಲಿ ಖಾಲಿ ಇರುವ ನಂದಿಹಳ್ಳಿ ಜೆ ಗ್ರಾಮಲೆಕ್ಕಿಗ ವೃತ್ತಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.