ಚೀನಾ, ಪಾಕ್ ದೋಸ್ತಿ ಭಾರತಕ್ಕೆ ತಲೆನೋವು
ಆಗಸ್ಟ್ ೫ರಂದು ಶೇಖ್ ಹಸೀನಾ ಸರ್ಕಾರ ಪತನಗೊಂಡು, ಭಾರತ - ಬಾಂಗ್ಲಾದೇಶ ಸಂಬಂಧಕ್ಕೆ ಭಾರೀ ಹೊಡೆತ ಬಿತ್ತು. ಅಂದಿನಿಂದ ಪರಿಸ್ಥಿತಿ ದಿನೇ ದಿನೇ ಹದಗೆಟ್ಟು, ಉಭಯ ದೇಶಗಳ ಸಂಬಂಧ ಇನ್ನಷ್ಟು ಕುಸಿಯತೊಡಗಿತು. ಹದಗೆಟ್ಟ ಸಂಬಂಧ ಅಧಿಕಾರಿಗಳ ತೀಕ್ಷಣ ಮಾತುಗಳ ಮೂಲಕ, ಜನಸಾಮಾನ್ಯರ ಜೀವನ, ಉದ್ಯೋಗಗಳಿಗೆ ತೊಂದರೆ ಉಂಟುಮಾಡುವಂತಹ ಉದ್ವಿಗ್ನತೆಗಳಿಂದಲೂ ವ್ಯಕ್ತವಾಗತೊಡಗಿತು.
ಪರಿಸ್ಥಿತಿಯನ್ನು ವಿಕೋಪಕ್ಕೆ ಒಯ್ಯುವಂತಹ ಒಂದು ಘಟನೆ ಈ ವಾರ ಜರುಗಿತು. ಹಿಂದೂ ಕಾರ್ಯಕರ್ತರ ಗುಂಪೊಂದು ತ್ರಿಪುರಾದ ಅಗರ್ತಲಾದಲ್ಲಿರುವ ಬಾಂಗ್ಲಾದೇಶದ ಸಹಾಯಕ ಹೈಕಮಿಷನರ್ ಕಚೇರಿಗೆ ನುಗ್ಗಿ, ದಾಂಧಲೆ ಎಬ್ಬಿಸಿದರು. ಅಗರ್ತಲಾ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿದ್ದು, ರಾಜತಾಂತ್ರಿಕ, ವ್ಯಾಪಾರ ಮತ್ತು ದೂತಾವಾಸ ವಿಚಾರಗಳಲ್ಲಿ ಅತ್ಯಂತ ಮುಖ್ಯ ತಾಣವಾಗಿದೆ.
ಬಾಂಗ್ಲಾದೇಶದಲ್ಲಿ ಢಾಕಾ ವಿಶ್ವವಿದ್ಯಾಲಯ ಸೇರಿದಂತೆ, ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳ ಪ್ರವೇಶ ದ್ವಾರದ ಬಳಿ ಉದ್ದೇಶಪೂರ್ವಕವಾಗಿ ಭಾರತದ ರಾಷ್ಟ್ರಧ್ವಜವನ್ನು ಹಾಕಿ, ಅದನ್ನು ತುಳಿದುಕೊಂಡು ಸಾಗುತ್ತಿದ್ದರು. ಇದಕ್ಕೆ ಪ್ರತಿಭಟನೆಯ ರೂಪದಲ್ಲಿ ಅಗರ್ತಲಾದಲ್ಲಿ ಬಾಂಗ್ಲಾ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಲಾಯಿತು.
ತ್ರಿಪುರಾದ ಘಟನೆಗೆ ಬಾಂಗ್ಲಾದೇಶವೂ ಕ್ಷಿಪ್ರವಾಗಿ ಪ್ರತಿಕ್ರಿಯಿಸಿತು. ಬಾಂಗ್ಲಾದಾದ್ಯಂತ ಭಾರತದ ವಿರುದ್ಧ ಪ್ರತಿಭಟನೆಗಳು ನಡೆದವು. ಅಗರ್ತಲಾದ ತನ್ನ ಕಚೇರಿಯ ಮೇಲೆ ನಡೆದ ದಾಳಿಯ ಕುರಿತು ಬಾಂಗ್ಲಾದ ವಿದೇಶಾಂಗ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಭಾರತವನ್ನು ಟೀಕಿಸಿತು. ಭಾರತ ಅಗರ್ತಲಾದ ಘಟನೆಯನ್ನು ದುರದೃಷ್ಟಕರ ಎಂದಿದ್ದು, ದೇಶಾದ್ಯಂತ ಬಾಂಗ್ಲಾದೇಶದ ದೂತಾವಾಸ ಕಚೇರಿಗಳ ಭದ್ರತೆಯನ್ನು ಹೆಚ್ಚಿಸಿತು. ಆದರೆ, ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ಸುಲಭವಾಗಿ ಕಡಿಮೆಯಾಗುವಂತೆ ಕಾಣುತ್ತಿಲ್ಲ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಢಾಕಾದಲ್ಲಿನ ಭಾರತೀಯ ರಾಯಭಾರಿಯನ್ನು ಕರೆಸಿ, ಈ ವಿಚಾರದ ಕುರಿತು ಚರ್ಚಿಸಿತು. ಇದೇ ವೇಳೆ, ಭಾರತದ ಆಡಳಿತ ಪಕ್ಷವಾದ ಬಿಜೆಪಿಯ ಒಂದಷ್ಟು ಮುಖಂಡರು, ಬಾಂಗ್ಲಾದೇಶಕ್ಕೆ ನಡೆಸುವ ರಫುö್ತಗಳನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸುವ ಎಚ್ಚರಿಕೆ ನೀಡಿದ್ದಾರೆ. "ಒಂದು ವೇಳೆ ಮುಂದಿನ ವಾರದೊಳಗೆ ಬಾಂಗ್ಲಾದೇಶದ ಹಿಂದೂಗಳು ಮತ್ತು ಅವರ ಪ್ರಾರ್ಥನಾ ಸ್ಥಳಗಳ ಮೇಲಿನ ದಾಳಿ ನಿಲ್ಲದಿದ್ದರೆ, ನಾವು ಬಾಂಗ್ಲಾದೊಡನೆ ಐದು ದಿನಗಳ ವ್ಯಾಪಾರ ನಿರ್ಬಂಧ ಹೇರಲಿದ್ದೇವೆ" ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ಮುಖಂಡ, ಬಿಜೆಪಿಯ ಸುವೇಂದು ಅಧಿಕಾರಿ ಎಚ್ಚರಿಸಿದ್ದಾರೆ. ಒಂದು ವಾರದ ಬಳಿಕವೂ ಇದೇ ಪರಿಸ್ಥಿತಿ ಮುಂದುವರಿದರೆ, ಅನಿರ್ದಿಷ್ಟಾವಧಿಗೆ ವ್ಯಾಪಾರವನ್ನು ನಿರ್ಬಂಧಿಸಲಾಗುವುದು ಎಂದು ಅವರು ಹೇಳಿದ್ದು, ಭಾರತದ ಆಲೂಗಡ್ಡೆ ಮತ್ತು ಈರುಳ್ಳಿಗಳಿಲ್ಲದೆ ಬಾಂಗ್ಲಾದೇಶ ಹೇಗೆ ದಿನ ದೂಡುತ್ತದೆ ನಾವೂ ನೋಡುತ್ತೇವೆ ಎಂದು ಅಧಿಕಾರಿ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳಾಗುತ್ತಿದ್ದು, ಪ್ರಾರ್ಥನಾ ಸ್ಥಳಗಳನ್ನು ಹಾಳುಗೆಡವಲಾಗುತ್ತಿದೆ. ಇದರಿಂದಾಗಿ, ಭಾರತೀಯ ಟ್ರಕ್ ಚಾಲಕರು ಬಾಂಗ್ಲಾದೇಶದೊಡನೆ ವ್ಯಾಪಾರ ವಹಿವಾಟು ಕಡಿಮೆಗೊಳಿಸಿದ್ದಾರೆ. ಭಾರತದ ಆಸ್ಪತ್ರೆಗಳೂ ಬಾಂಗ್ಲಾದೇಶದಿಂದ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಭಾರತ - ಬಾಂಗ್ಲಾದೇಶ ಗಡಿಯನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿದ್ದು, ಭಾರತದಲ್ಲಿರುವ ಬಹಳಷ್ಟು ಬಾಂಗ್ಲಾದೇಶೀಯರು ತರಾತುರಿಯಿಂದ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ.
ವಿವಾದದ ಮುಖ್ಯ ಕಾರಣಗಳು: ಅಗರ್ತಲಾ ಘಟನೆಗೂ ಮುನ್ನ, ಚಿತ್ತಗಾಂಗ್‌ನಲ್ಲಿರುವ ಇಸ್ಕಾನ್ ಸಂಸ್ಥೆಯ ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಂಧಿಸಿ, ಅವರಿಗೆ ಜಾಮೀನು ನಿರಾಕರಿಸಿದ್ದರಿಂದ ಭಾರತ - ಬಾಂಗ್ಲಾದೇಶಗಳ ನಡುವಿನ ಉದ್ವಿಗ್ನತೆ ತೀವ್ರಗೊಂಡಿತ್ತು. ಚಿನ್ಮಯ್ ದಾಸ್ ಅವರು ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದೆ, ದೇಶದ್ರೋಹ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಡಿಸೆಂಬರ್ ೩ರಂದು ಚಿನ್ಮಯ್ ದಾಸ್ ಪರ ವಾದಿಸಲು ವಕೀಲರು ಲಭಿಸಿಲ್ಲ ಎಂಬ ಕಾರಣ ನೀಡಿ, ಅವರ ಜಾಮೀನು ವಿಚಾರಣೆಯನ್ನು ಚಿತ್ತಗಾಂಗ್ ನ್ಯಾಯಾಲಯ ಜನವರಿ ೨ಕ್ಕೆ ಮುಂದೂಡಿತು.
ಇಸ್ಕಾನ್‌ನ ಕಲ್ಕತ್ತಾ ವಕ್ತಾರರಾದ ರಾಧಾರಮಣ್ ದಾಸ್ ಅವರು ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಚಿನ್ಮಯ್ ದಾಸ್ ಅವರ ಪರ ವಾದಿಸಲು ಮುಂದೆ ಬಂದಿದ್ದ ವಕೀಲ ರಮಣ್ ರಾಯ್ ಅವರ ಮೇಲೆ ನ್ಯಾಯಾಲಯದಲ್ಲೇ ಹಲ್ಲೆಯಾಗಿ, ಅವರ ಮನೆಯ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳ ಗುಂಪು ದಾಳಿ ನಡೆಸಿತ್ತು ಎಂದಿದ್ದಾರೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ವಕೀಲ ರಾಯ್ ಈಗ ಐಸಿಯುನಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.
ಪ್ರಬಲವಾದ ಇಸ್ಲಾಮಿಕ್ ಮೂಲಭೂತವಾದ: ಶೇಖ್ ಹಸೀನಾ ಅವರ ಆವಾಮಿ ಲೀಗ್ ಪಕ್ಷ ಅಧಿಕಾರದಲ್ಲಿದ್ದಾಗ, ಬಾಂಗ್ಲಾದೇಶ ಮತ್ತು ಭಾರತದ ಸಂಬಂಧಗಳು ಅತ್ಯುತ್ತಮವಾಗಿದ್ದವು. ಹಸೀನಾ ಭಾರತದ ಭದ್ರತಾ ಅವಶ್ಯಕತೆಗಳನ್ನು ಮನಗಂಡಿದ್ದರಿಂದ, ಅವರನ್ನು ಭಾರತದ ನಂಬಿಕಸ್ಥ ಸ್ನೇಹಿತೆ ಮತ್ತು ಸಹಯೋಗಿ ಎಂದು ಪರಿಗಣಿಸಲಾಗಿತ್ತು. ಆದರೆ, ಹಸೀನಾ ಪದಚ್ಯುತಿಯ ಬಳಿಕ, ದೆಹಲಿ ಮತ್ತು ಢಾಕಾ ಸಂಬಂಧ ಹಳಸತೊಡಗಿತು. ಆಗಸ್ಟ್ ತಿಂಗಳಲ್ಲಿ ಹಸೀನಾ ಸರ್ಕಾರ ಪತನಗೊಂಡಂತೆಯೇ ಬಾಂಗ್ಲಾದೇಶದಲ್ಲಿ ಅವ್ಯವಸ್ಥೆ ತಲೆದೋರಿತು. ಧಾರ್ಮಿಕ ಅಲ್ಪಸಂಖ್ಯಾತರೂ ಸೇರಿದಂತೆ, ಶೇಖ್ ಹಸೀನಾ ಬೆಂಬಲಿಗರ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳು ದಾಳಿ ನಡೆಸತೊಡಗಿದರು. ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ತಾನು ಅಲ್ಪಸಂಖ್ಯಾತರನ್ನು ರಕ್ಷಿಸಲು ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿಕೆ ನೀಡಿತ್ತು.
ಹಸೀನಾ ಬಾಂಗ್ಲಾದೇಶ ತೊರೆದ ಬಳಿಕ, ಅಲ್ಲಿ ಇಸ್ಲಾಮಿಕ್ ಗುಂಪುಗಳ ಹೆಚ್ಚಳದ ಕುರಿತು ಭಾರತ ಗಂಭೀರ ಆತಂಕ ವ್ಯಕ್ತಪಡಿಸಿದೆ. ಇಸ್ಲಾಮಿಕ್ ರಾಜಕೀಯ ಸದಾ ಬಾಂಗ್ಲಾದೇಶದ ರಾಜಕೀಯ ಇತಿಹಾಸದ ಭಾಗವಾಗಿತ್ತು. ಆದರೆ, ಈಗ ಬಾಂಗ್ಲಾ ರಾಜಕಾರಣದಲ್ಲಿ ಮೂಲಭೂತವಾದಿ ಜಮಾತ್ ಎ ಇಸ್ಲಾಮಿ ಸಂಘಟನೆ ಹೆಚ್ಚಿನ ಪ್ರಭಾವ ಹೊಂದಿರುವಂತೆ ಕಾಣುತ್ತಿದೆ. ೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಜಮಾತ್ ಸಂಘಟನೆ ಪಾಕಿಸ್ತಾನದ ಜೊತೆ ಕೈ ಜೋಡಿಸಿತ್ತು. ನವದೆಹಲಿಯ ಮನೋಹರ್ ಪರಿಕರ್ ಇನ್ಸಿ÷್ಟಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಆಂಡ್ ಅನಲೈಸಸ್ ಸಂಸ್ಥೆಯ ಸಂಶೋಧಕಿ ಸ್ಮöÈತಿ ಪಟ್ನಾಯಕ್ ಅವರು ಇತ್ತೀಚೆಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು. ಅವರು ಹಸೀನಾ ನಿರ್ಗಮನದ ಬಳಿಕ, ಬಾಂಗ್ಲಾದ ರಾಜಕೀಯವನ್ನು ರೂಪಿಸುವಲ್ಲಿ ಇಸ್ಲಾಮಿಸ್ಟ್ ಧೋರಣೆಗಳು ದೊಡ್ಡ ಪಾತ್ರ ನಿರ್ವಹಿಸುತ್ತಿವೆ ಎಂದಿದ್ದಾರೆ.
ಹಸೀನಾ ಜಮಾತ್ ಅನ್ನು ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒಳಪಡಿಸಿದ್ದರು. ೧೯೭೧ರ ಯುದ್ಧಾಪರಾಧಗಳಿಗೆ ಜಮಾತ್‌ನ ಮುಖಂಡರನ್ನು ವಿಚಾರಣೆಗೆ ಒಳಪಡಿಸಿ, ಹಲವರನ್ನು ಮರಣದಂಡನೆಗೆ ಗುರಿಪಡಿಸಲಾಗಿತ್ತು. ಜಮಾತ್ ಪಕ್ಷವನ್ನು ನಿಷೇಧಿಸಿ, ಅದರ ನೂರಾರು ಸದಸ್ಯರನ್ನು ಜೈಲಿಗೆ ಹಾಕಲಾಗಿತ್ತು. ಆದರೆ, ಹಸೀನಾ ಪದಚ್ಯುತಿಯ ಬಳಿಕ, ಜಮಾತ್ ಮತ್ತು ಇತರ ಇಸ್ಲಾಮಿಕ್ ಸಂಘಟನೆಗಳು ಹೆಚ್ಚು ಸಕ್ರಿಯವಾಗುತ್ತಿವೆ. ಅಧಿಕಾರಕ್ಕೆ ಏರುತ್ತಿದ್ದಂತೆ, ಬಾಂಗ್ಲಾದೇಶದ ಮಧ್ಯಂತರ ಆಡಳಿತಗಾರ ಮೊಹಮ್ಮದ್ ಯೂನುಸ್ ಜಮಾತ್ ಮೇಲಿನ ನಿಷೇಧವನ್ನೂ ತೆಗೆದುಹಾಕಿದ್ದಾರೆ.
ಹಸೀನಾ ದೇಶಭ್ರಷ್ಟರಾದಂತೆ, ಬಾಂಗ್ಲಾದೇಶದ ಇಸ್ಲಾಮಿಕ್ ಗುಂಪುಗಳು ತಮ್ಮ ಭಾರತ ವಿರೋಧಿ ಪ್ರಚಾರವನ್ನು ತೀವ್ರಗೊಳಿಸತೊಡಗಿದವು. ಹಸೀನಾ ನಿರ್ಗಮನದ ಬೆನ್ನಲ್ಲೇ ಬಾಂಗ್ಲಾದೇಶವನ್ನು ಕಾಡಿದ ಪ್ರವಾಹಕ್ಕೂ ಭಾರತವೇ ಕಾರಣ ಎಂದು ಇಸ್ಲಾಮಿಕ್ ಸಂಘಟನೆಗಳು ಆರೋಪಿಸಿದ್ದವು. ಶೇಖ್ ಹಸೀನಾರ ನಿರಂಕುಶ ಆಡಳಿತಕ್ಕೂ ಭಾರತ ಬಲವಾಗಿ ಬೆಂಬಲ ನೀಡಿದ್ದು ಇಂದು ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಭಾವನೆಗಳಿಗೆ ಮುಖ್ಯ ಕಾರಣವಾಗಿದೆ. ಆದರೆ, ಇಸ್ಲಾಮಿಕ್ ಸಂಘಟನೆಗಳು ಇಂತಹ ಹಲವಾರು ವಿಚಾರಗಳನ್ನು ಹರಡಿ, ಭಾರತ ವಿರೋಧಿ ಭಾವನೆ ತೀವ್ರವಾಗಲು ಕಾರಣವಾಗಿದ್ದವು.
ಬಾಂಗ್ಲಾದೇಶದಲ್ಲಿ ಇಂದು ಭಾರತ, ಆವಾಮಿ ಲೀಗ್, ಮತ್ತು ಹಿಂದೂಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುತ್ತಿದೆ ಎಂದು ಸ್ಮöÈತಿ ಪಟ್ನಾಯಕ್ ಹೇಳಿದ್ದಾರೆ. ಬಾಂಗ್ಲಾದೇಶಿ ಹಿಂದೂಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಭಾರತ ಸರ್ಕಾರವೂ ಗಮನ ಹರಿಸುತ್ತಿದೆ. ಆದರೆ, ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರ ಬವಣೆಗಳ ಕುರಿತು ಭಾರತೀಯ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಗಳನ್ನು ಆಧರಿಸಿದ ಅತಿರಂಜಿತ ವರದಿಗಳು ಪ್ರಕಟವಾಗಿವೆ ಎಂದು ಬಾಂಗ್ಲಾದೇಶೀಯರು ಹೇಳಿದ್ದಾರೆ.
ಪಾಕ್ - ಚೀನಾದೊಡನೆ ಹೆಚ್ಚುತ್ತಿರುವ ಸ್ನೇಹ: ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಮತ್ತು ಭಾರತ ವಿರೋಧಿ ರಾಜಕಾರಣ ಭಾರತದ ಭದ್ರತೆಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿನ ಅಸ್ಥಿರತೆ ಮತ್ತು ಹಿಂಸಾಚಾರಗಳ ಪರಿಣಾಮ ಭಾರತದ ಮೇಲೂ ಆಗುವ ಸಾಧ್ಯತೆಗಳಿರುವುದರಿಂದ, ಭಾರತ ಈ ಕುರಿತು ಕಳವಳ ವ್ಯಕ್ತಪಡಿಸುತ್ತಿದೆ. ಬಾಂಗ್ಲಾದೇಶ ಅಸ್ಥಿರವಾದರೆ, ಅದರೊಡನೆ ಇರುವ ಮುಕ್ತ ಗಡಿಯ ಮೂಲಕ ಸಮಸ್ಯೆಗಳು ಭಾರತದೊಳಗೂ ಕಾಲಿಡಬಹುದು ಎಂದು ಪಟ್ನಾಯಕ್ ಹೇಳಿದ್ದಾರೆ.ಇಸ್ಲಾಮಿಕ್ ಗುಂಪುಗಳ ಪ್ರಭಾವ ಹೆಚ್ಚಾಗಿ, ಪಾಕಿಸ್ತಾನಕ್ಕೆ ಬಾಂಗ್ಲಾದೇಶದೊಡನೆ ಸಂಬಂಧ ವೃದ್ಧಿಸಲು ನೆರವಾಗಬಹುದು ಎನ್ನುವುದು ಭಾರತದ ಆತಂಕವಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಪಾಕಿಸ್ತಾನದ ಸರಕು ಸಾಗಣೆಯ ಹಡಗು ಚಿತ್ತಗಾಂಗ್ ಬಂದರಿಗೆ ಆಗಮಿಸಿದ್ದು ಈ ಚಿಂತೆಗೆ ಕಾರಣವಾಗಿದೆ. ಇದು ಪಾಕಿಸ್ತಾನ - ಬಾಂಗ್ಲಾದೇಶಗಳ ನಡುವೆ ಹೆಚ್ಚಿನ ವ್ಯಾಪಾರ, ಸಮುದ್ರ ಸಂಪರ್ಕಕ್ಕೆ ಹಾದಿಮಾಡಿಕೊಡುವ ಸಾಧ್ಯತೆಗಳಿವೆ. ಇದು ಬಾಂಗ್ಲಾದೇಶ - ಪಾಕಿಸ್ತಾನಗಳ ನಡುವೆ ಭದ್ರತಾ ಸಹಕಾರಕ್ಕೆ ನಾಂದಿಯಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
ಬಾಂಗ್ಲಾದೇಶದ ಇಸ್ಲಾಮಿಕ್ ಗುಂಪುಗಳು ಚೀನಾದೊಡನೆ ಬಾಂಧವ್ಯ ಹೊಂದಿವೆ ಎಂದು ಭಾರತ ಭಾವಿಸಿದೆ. ಚಿನ್ಮಯ್ ದಾಸ್ ಬಂಧನವಾಗಿ, ಪ್ರತಿಭಟನೆಗಳು ನಡೆದ ದಿನ, ಚೀನಾದ ರಾಯಭಾರಿ ಯಾವೊ ವೆನ್ ಢಾಕಾದಲ್ಲಿನ ಚೀನಾ ರಾಯಭಾರ ಕಚೇರಿಯಲ್ಲಿ ಔತಣಕೂಟ ಏರ್ಪಡಿಸಿದ್ದರು. ಜಮಾತ್ ಎ ಇಸ್ಲಾಮಿ, ಹೆಫಾಜತ್ ಎ ಇಸ್ಲಾಮ್ ಸೇರಿದಂತೆ, ವಿವಿಧ ಇಸ್ಲಾಮಿಕ್ ಪಕ್ಷಗಳ ಮುಖಂಡರು ಅದರಲ್ಲಿ ಭಾಗಿಯಾಗಿದ್ದರು. ಆವಾಮಿ ಲೀಗ್ ಹೊರತಾಗಿ, ಇತರ ಪಕ್ಷಗಳೊಡನೆ ಸಂಬಂಧ ಹೊಂದಿರದ ಭಾರತ ಇವೆಲ್ಲವನ್ನೂ ಜಾಗರೂಕತೆಯಿಂದ ಗಮನಿಸುತ್ತಿದೆ.
ಭಾರತ-ಬಾಂಗ್ಲಾ ಸಂಬಂಧದ ಕುಸಿತ ಕೇವಲ ಸರ್ಕಾರಗಳ ಮಟ್ಟದಲ್ಲಿ ಮಾತ್ರ ಪರಿಣಾಮ ಬೀರುವುದಿಲ್ಲ. ಉಭಯ ದೇಶಗಳ ಪ್ರಜೆಗಳು ಧಾರ್ಮಿಕ, ಸಾಂಸ್ಕöÈತಿಕ, ವ್ಯಾಪಾರ ಮತ್ತು ಕೌಟುಂಬಿಕ ಸಂಬಂಧಗಳನ್ನು ಹೊಂದಿದ್ದಾರೆ. ದೇಶಗಳ ನಡುವಿನ ಸಂಬಂಧ ಹದಗೆಟ್ಟಂತೆ, ಗಡಿಯಾಚೆಗಿನ ಸಂಚಾರವೂ ಇಳಿಮುಖವಾಗಿದೆ. ಜುಲೈನಿಂದ ನವೆಂಬರ್ ತನಕ, ಕಲ್ಕತ್ತಾ ಮತ್ತು ಢಾಕಾ ನಡುವಿನ ವಿಮಾನ ಪ್ರಯಾಣಿಕರ ಸಂಖ್ಯೆ ಅರ್ಧದಷ್ಟು ಇಳಿಕೆ ಕಂಡಿದೆ. ಟ್ರಕ್ ಚಾಲಕರು ಬಾಂಗ್ಲಾಗೆ ತೆರಳುವುದನ್ನು ಕಡಿಮೆಗೊಳಿಸಿದ್ದು, ಅಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ ತಲೆದೋರಿದೆ.
ಉಭಯ ದೇಶಗಳ ನಡುವೆ ಅಪನಂಬಿಕೆಯ ಕಿಚ್ಚು ಹೆಚ್ಚುತ್ತಿದ್ದು, ಇದಕ್ಕೆ ಸುಳ್ಳು ಸುದ್ದಿಗಳು ಮತ್ತು ದ್ವೇಷ ಭಾಷಣಗಳು ತುಪ್ಪ ಸುರಿಯುತ್ತಿವೆ. ಈಗಾಗಲೇ ಧಾರ್ಮಿಕ ಉದ್ವಿಗ್ನತೆ ಮತ್ತು ಹಿಂಸಾಚಾರಗಳಿಂದ ನರಳಿರುವ ಪ್ರದೇಶದಲ್ಲಿ ಪರಿಸ್ಥಿತಿ ಸುಲಭವಾಗಿ ಕೈಮೀರಿ ಹೋಗುವ ಅಪಾಯಗಳಿವೆ.