For the best experience, open
https://m.samyuktakarnataka.in
on your mobile browser.

ಜಗದುಳುವಿಗೆ ಭಾರತ ಉಳಿಯಬೇಕು

07:35 AM Dec 01, 2024 IST | Samyukta Karnataka
ಜಗದುಳುವಿಗೆ ಭಾರತ ಉಳಿಯಬೇಕು

ಸುತ್ತಲೆಲ್ಲ ಅಗ್ನಿಕುಂಡ, ಮಧ್ಯದಲ್ಲಿ ಭಾರತ! ಇವತ್ತಿನ ಜಾಗತಿಕ ಪರಿಸ್ಥಿತಿಯ ಕಿರುನೋಟವಿದು. ಅಪಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ, ಬರ್ಮಾ, ನೇಪಾಳ, ಚೀನಾ ಮತ್ತು ಶ್ರೀಲಂಕಾಗಳ ಜೊತೆಗೆ ತನ್ನ ಗಡಿಯನ್ನು ಭಾರತ ಹೊಂದಿದೆ. ಈ ಏಳು ರಾಷ್ಟ್ರಗಳಲ್ಲಿ ಅಪಘಾನಿಸ್ತಾನ, ಪಾಕ್ ಮತ್ತು ಬಾಂಗ್ಲಾ ಮೂರು ದೇಶಗಳು ಈಗ ಹೊತ್ತಿ ಉರಿಯುತ್ತಿವೆ. ಶ್ರೀಲಂಕಾದಲ್ಲಿ ಆರ್ಥಿಕ ವ್ಯವಸ್ಥೆ ತೀರ ಹದಗೆಟ್ಟು ರಾಜಕೀಯ ವಿಪ್ಲವ ಸಂಭವಿಸಿದೆ. ಚೀನಾ ದೇಶವು ಭಾರತದ ಮೇಲೆ ಆಗಾಗ ಬೆಂಕಿಯನ್ನು ಕಾರುತ್ತಿದೆ. ನೇಪಾಳದಲ್ಲಿ ಕಮ್ಯುನಿಷ್ಟರು ಮತ್ತು ಪ್ರಜಾಪ್ರಭುತ್ವವಾದಿಗಳ ನಡುವೆ ಆಗಾಗ ಮೇಲಾಟಗಳು ಸಂಭವಿಸುತ್ತವೆ. ಅತ್ತ ಇರಾನ್-ಇರಾಕ್, ರಶಿಯಾ-ಉಕ್ರೇನ್, ಇಸ್ರೇಲ್-ಪಾಲಿಸ್ತೇನ್ ಹೀಗೆ ರಾಷ್ಟ್ರ-ರಾಷ್ಟ್ರಗಳ ನಡುವೆ ಭಯಾನಕ ಯುದ್ಧಗಳು ನಡೆಯುತ್ತಿವೆ. ಇವು ಕಣ್ಣಿಗೆ ಕಾಣುವ ಘರ್ಷಣೆಗಳಾದರೆ ಗಡಿ ಹಂಚಿಕೊಂಡಿರುವ ಮತ್ತು ವ್ಯಾಪಾರದ ಆರ್ಥಿಕ ಪೈಪೋಟಿಯನ್ನು ನಡೆಸುವ ರಾಷ್ಟ್ರಗಳ ನಡುವೆ ಶೀತಲ ಸಮರಗಳು ಆಗಾಗ ನಡೆಯುತ್ತಲೇ ಇರುತ್ತವೆ.
೧೯೭೧ರವರೆಗೆ ಪಶ್ಚಿಮ ಪಾಕಿಸ್ತಾನದ ಕಪಿಮುಷ್ಠಿಯಲ್ಲಿ ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ) ಸಿಲುಕಿ ನಲುಗಿಹೋಗಿತ್ತು. ೧೯೪೭ರಲ್ಲಿ ಆದ ಭಾರತ ವಿಭಜನೆಯ ಪಾಪಗ್ರಸ್ತ ಕೂಸುಗಳೇ ಪಾಕ್ ಮತ್ತು ಬಾಂಗ್ಲಾದೇಶಗಳು. ಯಾವುದೇ ಆಳವಾದ ಸಿದ್ಧಾಂತವಿರದೇ, ವಿಶಾಲವಾದ ಗುರಿ ಇರದೇ, ಕೇವಲ ರಾಜಕೀಯ ಕಾರಣಕ್ಕಾಗಿ ಸೀಮಿತವಾದ ಕೋಮು ಆಧಾರಿತ ಕಾರಣಕ್ಕಾಗಿ ಜನ್ಮ ತಳೆದ ರಾಷ್ಟ್ರಗಳವು. ಆಗಿನ ರಾಜಕೀಯ ನೇತಾರರು ಮುಂದಾಗುವ ಅನಾಹುತಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೇ ಮಾಡಿದ ಒಂದು ರೀತಿಯ ಖಾಜೀ ನ್ಯಾಯ ಅದಾಗಿತ್ತು. ಹೀಗಾಗಿ ಹುಟ್ಟು ಪೋಲಿಯೋ ಪೀಡಿತ ಮಗುವಿನಂತೆ ಅವು ಆಗಾಗ ನೆರೆಹೊರೆಯವರಿಗೆ ಕಿರಿಕಿರಿ ಮಾಡುತ್ತಿರುತ್ತವೆ. ಬಾಂಗ್ಲಾ ವಿಮೋಚನೆಗೆ ಸೈನಿಕ ಸಹಾಯ, ಧನಸಹಾಯ ಮತ್ತು ನೈತಿಕ ಸ್ಥೆöÊರ್ಯವನ್ನು ಭಾರತವು ಪ್ರಾಮಾಣಿಕವಾಗಿಯೇ ಮಾಡಿತು. ಅದರ ಉಪಕಾರವನ್ನು ಸ್ಮರಿಸುತ್ತಲೇ ಭಾರತಕ್ಕೆ ಮಗ್ಗಲ ಮುಳ್ಳಾದವರು ಬಾಂಗ್ಲಾದೇಶಿಯರು. ಇದುವರೆಗೆ ಬಾಂಗ್ಲಾ ದೇಶದಿಂದ ನಿರುದ್ಯೋಗಿಗಳು, ರೋಹಿಂಗ್ಯಾಗಳು ಮತ್ತು ಇತರ ಬಾಂಗ್ಲಾದೇಶಿಯರು ಅಕ್ರಮವಾಗಿ ಭಾರತದ ಗಡಿ ದಾಟಿ ಬರುತ್ತಿದ್ದರು. ನಿರಂತರವಾಗಿ ನಡೆದ ಈ ನುಸುಳುವಿಕೆಯಲ್ಲಿ ನಾಲ್ಕು ಕೋಟಿಗಿಂತಲೂ ಹೆಚ್ಚು ಜನ ಭಾರತದ ವಿವಿಧ ರಾಜ್ಯಗಳಲ್ಲಿ ನೆಲಸಿ, ಭಾರತದ ಆರ್ಥಿಕ, ಸಾಮಾಜಿಕ ಮತ್ತು ಕಾಯ್ದೆ-ಕಾನೂನು ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದ್ದಾರೆ. ಸಾಕಷ್ಟು ಹೊಡೆತ ಕೊಟ್ಟಿದ್ದಾರೆ. ಇತ್ತೀಚೆಗೆ ಅಲ್ಲಿ ಕ್ಷೀಪ್ರ ಕ್ರಾಂತಿ ಸಂಭವಿಸಿದೆ. ಮತಾಂಧರು ಮುನ್ನೆಲೆಯಲ್ಲಿದ್ದಾರೆ. ನೋಬೆಲ್ ಪಾರಿತೋಷಕ ವಿಜೇತರನ್ನು ಮುಖವಾಡವಾಗಿ ಮಾಡಿ ಕೋಮುವಾದಿಗಳು ವಿಜೃಂಭಿಸುತ್ತಿದ್ದಾರೆ. ತಾಲಿಬಾನ್ ಪ್ರವೃತ್ತಿಯನ್ನು ತೋರುತ್ತಿದ್ದಾರೆ. ಬಾಂಗ್ಲಾದ ಶಾಂತಿಗೆ ಭಂಗ ತರದ ಅದರ ಆರ್ಥಿಕಾಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದ ಬಾಂಗ್ಲಾ ಹಿಂದೂಗಳ ಮೇಲೆ ಧರ್ಮಾಂಧರು ಗಧಾ ಪ್ರಹಾರ ಮಾಡಿದ್ದಾರೆ. ಇಸ್ಕಾನಿನ ಅನುಯಾಯಿಗಳನ್ನು ಮೂಲಭೂತವಾದಿ ಎಂದು ಜರಿದು ಬಂದಿಸಿದ್ದಾರೆ. ದೇಶದ್ರೋಹಿ ಸಂಘಟನೆ ಎಂದು ನಿಷೇಧಿಸುವ ಹಾದಿಯಲ್ಲಿದ್ದಾರೆ. ಗುಡಿ ಗುಂಡಾರಗಳನ್ನು ಗುಡಿಸಿ ಹಾಕುತ್ತಿದ್ದಾರೆ. ಹೀಗೆ ಉಪಕಾರ ಮಾಡಿದ ಭಾರತಕ್ಕೆ ಅಪಚಾರವನ್ನು ಬಾಂಗ್ಲಾದೇಶವು ಬಗೆಯುತ್ತಿದೆ. ಆರ್ಥಿಕ ವಿಷಯದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದ ವ್ಯಕ್ತಿಯನ್ನು ದೇಶದ ಮುಖ್ಯಸ್ಥರನ್ನಾಗಿ ಮಾಡಿಕೊಂಡ ರಾಷ್ಟ್ರವು ಕ್ರಮೇಣ ಆರ್ಥಿಕ ಅವನತಿಯತ್ತ ಸಾಗುತ್ತಿದೆ. ತಾಲಿಬಾನ್ ಸಂಸ್ಕöÈತಿಯ ಕಡೆಗೆ ತಿರುಗುತ್ತಿದೆ. ಹಿಂದೂ ಅಲ್ಪಸಂಖ್ಯಾತರ ಮಾರಣ ಹೋಮ ಮಾಡುತ್ತಿದೆ. ಇದಕ್ಯಾರು ಹೊಣೆ?
ಒಂದು ಕಾಲಕ್ಕೆ ಗಂಧಾರ ದೇಶವಾಗಿ ಗಾಂಧಾರಿಯಂತಹ ಪ್ರತಿವ್ರತೆಯನ್ನು ಕೊಡುಗೆಯಾಗಿ ಕೊಟ್ಟ ಅಪಘಾನಿಸ್ತಾನವು ಕೆಲವು ವರ್ಷಗಳ ಹಿಂದೆ ರಾಜಕೀಯ ವಿಪ್ಲವಕ್ಕೆ ಒಳಗಾಗಿದೆ. ತಾಲಿಬಾನ್ ಉಗ್ರವಾದಿಗಳು ಅಧಿಕಾರದ ಚುಕ್ಕಾಣಿಯನ್ನು ಹಿಡಿದುಕೊಂಡಿದ್ದಾರೆ. ಜಗತ್ತಿನ ಅತೀ ದೊಡ್ಡ ಬುದ್ಧನ ವಿಗ್ರಹವನ್ನು ನೆಲಸಮಗೊಳಿಸುವ ಮೂಲಕ ಅಪಘಾನಿಸ್ತಾನ ತಾನು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ನಗುತ್ತಿದ್ದ ಬುದ್ಧ ಅತ್ತು ಬಿದ್ದ! ಎನ್ನುವಂತಾಗಿದೆ. ಮಹಿಳೆಯರಿಗೆ ಉನ್ನತ ಶಿಕ್ಷಣವನ್ನು ನಿಷೇಧಿಸಿದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ನಿರ್ಬಂಧಿಸಿದೆ. ಆಪಘಾನಿಸ್ತಾನದ ಅಭಿವೃದ್ಧಿಗೆ ಶ್ರಮಿಸಿದ ಭಾರತೀಯರನ್ನು ದೇಶ ಬಿಟ್ಟು ತೊಲಗುವಂತೆ ಮಾಡಿದೆ.
ಐತಿಹಾಸಿಕ ನೆಲೆಯೇ ಇಲ್ಲದೇ ಕೇವಲ ಜಾತಿ ಆಧಾರದ ಮೇಲೆ ತುಷ್ಟೀಕರಣದ ಮೂಲಕ ಅಸ್ತಿತ್ವಕ್ಕೆ ಬಂದ ರಾಷ್ಟ್ರ ಪಾಕಿಸ್ತಾನ. ೭೫ ವರ್ಷಗಳ ತನ್ನ ಇತಿಹಾಸದಲ್ಲಿ ಹಲವಾರು ಸಲ ಸೈನಿಕ ಆಡಳಿತಕ್ಕೊಳಗಾದ ದೇಶವದು. ಅಲ್ಲಿ ಚುನಾಯಿತ ಸರಕಾರ, ಮೌಲ್ವಿಗಳು, ಉಗ್ರಗಾಮಿಗಳು ಮತ್ತು ಸೈನ್ಯ ಯಾವುದು ಅಧಿಕಾರ ನಡೆಸುತ್ತಿದೆ ಎಂಬುದೇ ಪ್ರಶ್ನೆ! ಪ್ರಜಾಪ್ರಭುತ್ವದ ಮುಖವಾಡ ಹೊತ್ತ ಆ ದೇಶ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಅಂತರಾಷ್ಟ್ರೀಯವಾಗಿ ವಿಶ್ವಸಾರ್ಹತೆಯನ್ನು ಕಳೆದುಕೊಂಡಿದೆ. ಸಾಲಕ್ಕಾಗಿ ಎಲ್ಲ ದೇಶಗಳಿಗೂ ಕೈಯೊಡ್ಡುತ್ತಿದೆ. ಜಟ್ಟಿ ಬಿದ್ದರು ಮೀಸೆಗೆ ಮಣ್ಣು ಹತ್ತಿಲ್ಲ ಎನ್ನುವ ಧಾಟಿ ಅದರದು. ಜನರಿಂದ ಆಯ್ಕೆಯಾಗಿರುವ ಇಮ್ರಾನ್ ಖಾನರ ಮೇಲೆ ಹತ್ತು ಹಲವು ಕೇಸುಗಳನ್ನು ದಾಖಲಿಸಿ ಜೈಲಿಗೆ ಅಟ್ಟಿದೆ. ಪ್ರಜಾಪ್ರಭುತ್ವದ ಲೇವಡಿ ಮಾಡಿರುವ ಅಲ್ಲಿನ ಸರಕಾರದ ವಿರುದ್ಧ ಇಮ್ರಾನ್ ಖಾನರ ೩ನೇ ಪತ್ನಿ ಬುಶ್ರಾಬೀಬಿ ಡಿ ಚೌಕ್‌ನಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರನ್ನು ಸೇರಿಸಿ ಪ್ರತಿಭಟಿಸಿದ್ದಾರೆ. ಇಮ್ರಾನ್ ಖಾನ್‌ರನ್ನು ಬಿಡುಗಡೆ ಮಾಡದ ಹೊರತು ಡಿ ಚೌಕ್ ಬಿಟ್ಟು ಹೋಗೆವು ಎಂದ ಅವರನ್ನು ಪಾಕ್ ಸೈನ್ಯವು ಬಲವಂತವಾಗಿ ತೆರವು ಗೊಳಿಸಿದೆ. ಬಲೂಚಿಸ್ತಾನದಲ್ಲಿ ಪ್ರತ್ಯೇಕತೆಯ ಕೂಗು ಬಲಗೊಳ್ಳುತ್ತಿದೆ. ಅದು ಭಾರತದೆಡೆ ನೋಡುತ್ತಿದೆ.
೨೦೨೨ರಲ್ಲಿ ಲಂಕಾದಲ್ಲಿ ಅರಾಜಕತೆಯ ಪರಾಕಾಷ್ಠೆ ತಲುಪಿತ್ತು. ಚೀನಾದ ಕಪಿಮುಷ್ಠಿಯಲ್ಲಿ ಸಿಲುಕಿ ಆರ್ಥಿಕವಾಗಿ ದಿವಾಳಿಯಾಯಿತು. ಬಡತನ, ನಿರುದ್ಯೋಗ, ಹಸಿವೆಗಳಿಂದ ಕಂಗೆಟ್ಟ ಜನ ರಾಜಧಾನಿಗೆ ಮುತ್ತಿಗೆ ಹಾಕಿದರು. ತಮ್ಮನ್ನಾಳುವ ಜನರನ್ನು ಹೊರದಬ್ಬಿದರು. ಅದೃಷ್ಟವಶಾತ್ ಮತ್ತೇ ತಹಬದಿಗೆ ಬಂದ ಪರಿಸ್ಥಿತಿಯಲ್ಲಿ ಮತ್ತೇ ಭಾರತವನ್ನು ಸಹಾಯಕ್ಕಾಗಿ ಯಾಚಿಸಿದೆ.
ಹೀಗೆ ೨೦೨೧ರಲ್ಲಿ ಅಪಘಾನಿಸ್ತಾನ, ೨೦೨೨ ರಲ್ಲಿ ಶ್ರೀಲಂಕಾ, ೨೦೨೪ರಲ್ಲಿ ಪಾಕ್ ಮತ್ತು ಇದೀಗ ಬಾಂಗ್ಲಾದೇಶಗಳು ಮಗ್ಗಲು ಮುಳ್ಳುಗಳಾಗಿ ಭಾರತಕ್ಕೆ ಚುಚ್ಚುತ್ತಿವೆ. ಇವುಗಳ ಅಸಹಾಯಕತೆಯನ್ನು ಅಮೆರಿಕ ಮತ್ತು ಚೀನಾ ದೇಶಗಳು ತಮ್ಮ ಬೆಳೆ ಬೆಯಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಿವೆ. ಅವುಗಳಿಗೆ ಸೈನಿಕ, ಆರ್ಥಿಕ, ನೈತಿಕ ಸಹಾಯ ಮಾಡುತ್ತ ಭಾರತದ ಮೇಲೆ ಛೂ ಬಿಡುತ್ತಿವೆ. ಕಿರಿಕಿರಿಯನ್ನುಂಟು ಮಾಡುತ್ತಿವೆ. ಜಗತ್ತಿನ ಒಂದು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತದ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಅರಾಜಕತೆಯ ತಾಂಡವ ಮಾಡುತ್ತಿದೆ. ಮಾನವ ಹಕ್ಕುಗಳ ಹರಣವಾಗುತ್ತಿದೆ. ಜಾತಿವಾದಿಗಳ ಅಟ್ಟಹಾಸ ಮೆರೆಯುತ್ತಿದೆ. ಇಸ್ರೇಲ್, ಉಕ್ರೇನ್, ರಶಿಯಾ ಮುಂತಾದ ದೂರದ ರಾಷ್ಟ್ರಗಳು ತಮ್ಮೊಳಗಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಭಾರತದ ಮಧ್ಯಸ್ಥಿಕೆಯನ್ನು ಬಯಸುತ್ತಿರುವಾಗ ಭಾರತದ ಜೊತೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರಗಳು ಬೆಂಕಿ ಉಗುಳುತ್ತಿರುವುದು ವಿಪರ್ಯಾಸವೇ ಸರಿ. ತಮ್ಮ ಒಳಿತು ಎಲ್ಲಿದೆ ಎಂದು ತಿಳಿಯದ ಅವುಗಳ ಪ್ರವೃತ್ತಿ ಬಾಲಿಶವೇ ಸರಿ.
ತನ್ನ ಇತಿಹಾಸದಲ್ಲಿ ಎಂದಿಗೂ ಪರರಾಷ್ಟ್ರ್ಟದ ಮೇಲೆ ಅನವಶ್ಯಕವಾಗಿ ದಾಳಿ ಮಾಡದ ಭಾರತವನ್ನು ಇಂದು ಅನೇಕ ರಾಷ್ಟ್ರಗಳು ಶಾಂತಿಧೂತನಾಗಿ ಕಂಡಿವೆ. ಆದರೆ ಅದರ ಸುತ್ತಲಿನ ದೇಶಗಳಲ್ಲೇ ಅಶಾಂತಿಯ ತಾಂಡವ ನೃತ್ಯ ನಡೆದಿದೆ. ದೀಪದ ಕೆಳಗೇ ಕತ್ತಲಿರುವಂತಾಗಿದೆ. ಒಂದಿಲ್ಲೊಂದು ಸಂದರ್ಭದಲ್ಲಿ ಭಾರತದ ಸಹಾಯ ಪಡೆದ ರಾಷ್ಟ್ರಗಳೇ ಭಾರತದ ಎದುರಿಗೆ ತಿರುಗಿ ಬಿದ್ದಿದೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಗುಲ್ಲೆಬ್ಬಿಸುವ ಈ ರಾಷ್ಟ್ರಗಳು ತಮ್ಮ ದೇಶದೊಳಗಿನ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿವೆ. ದಬ್ಬಾಳಿಕೆ ನಡೆಸುತ್ತಿವೆ. ದ್ವಿತೀಯ ದರ್ಜೆಯ ನಾಗರಿಕರಂತೆ ಕಾಣುತ್ತಿವೆ. ದೇಶ ಬಿಟ್ಟು ಹೋಗುವ ವಾತಾವರಣವನ್ನು ನಿರ್ಮಿಸುತ್ತಿವೆ. ಭಾರತದ ಪ್ರತಿಷ್ಠೆಯನ್ನು ಜಾಗತಿಕ ಮಟ್ಟದಲ್ಲಿ ಕೆಳಗೆಳೆಯುವ ಒಂದು ಸಂಘಟಿತ ಪ್ರಯತ್ನದ ಗುಮಾನಿ ಕೂಡ ಇದೆ.
ವಸುದೈವ ಕುಟುಂಬಕಂ'' ಎಂದು ನಂಬಿಸರ್ವೇ ಜನಾಃ ಸುಖಿನೋ ಭವಂತು'' ಎಂದು ಆಶಿಸಿ, ``ಕೃಣ್ವಂತೋ ವಿಶ್ವಂ ಆರ್ಯಂ'' ಎಂದು ಕಾರ್ಯತತ್ಪರರಾದ ಭಾರತಕ್ಕೆ ಇದು ಸಂಧಿ ಕಾಲ. ಇತಿಹಾಸದಲ್ಲಿ ಇಂತಹ ಹಲವಾರು ಸವಾಲಿನ ಪ್ರಶ್ನೆಗಳನ್ನು ಭಾರತ ಸಾವಿರಾರು ವರ್ಷಗಳವರೆಗೆ ಎದುರಿಸಿದೆ. ಯಶಸ್ವಿಯಾಗಿ ಹೊರಹೊಮ್ಮಿದೆ ತನ್ನತನವನ್ನು ಉಳಿಸಿಕೊಂಡಿದೆ. ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಜಗದ ಉಳುವಿಗೆ ಭಾರತದ ಉಳಿವು ಅವಶ್ಯವಾಗಿದೆ. ಇನ್ನೂ ಮುಂದೆಯೂ ತನ್ನ ಒಳ ಮತ್ತು ಹೊರ ಶತ್ರುಗಳ ವಿರುದ್ಧ ತೊಡೆತಟ್ಟಿ ದೃಢವಾಗಿ ಭಾರತ ನಿಲ್ಲಬೇಕಿದೆ.
ಉದಾತ್ತವಾದ ವಿಚಾರ-ಆಚಾರವನ್ನು ಹೊಂದಿರುವ ಭಾರತೀಯ ಚಿಂತನೆಯು ವಿಶ್ವವ್ಯಾಪಿಯಾಗಿ ಹಬ್ಬಬೇಕು. ಅದುವೇ ಜಗದ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಡಿಪಾಯವಾಗಬಲ್ಲದು. ಆದ್ದರಿಂದ ಜಗದುಳಿವಿಗೆ ಭಾರತ ಉಳಿಯಬೇಕು ಮತ್ತು ಬೆಳೆಯಬೇಕು.