For the best experience, open
https://m.samyuktakarnataka.in
on your mobile browser.

ಟ್ರಂಪೇಸಿ ಕಿವಿ ನೋಡಿದೆಯೋ ಇಲ್ಲವೋ?

03:15 AM Sep 02, 2024 IST | Samyukta Karnataka
ಟ್ರಂಪೇಸಿ ಕಿವಿ ನೋಡಿದೆಯೋ ಇಲ್ಲವೋ

ಖಾಸಗಿ ಚಾನಲ್‌ನ ಖ್ಯಾತ ನಿರೂಪಕಿ ಕಿವುಡನುಮಿ ಒಂದು ಬಾರಿ ಕ್ಯಾಮರಾಕ್ಕೆ ಬಂದರೆ ಉಳಿದ ಕಡೆ ಲಕ್ಷ್ಯವೇ ಇರುತ್ತಿರಲಿಲ್ಲ. ಅಷ್ಟೊಂದು ಮಗ್ನಳಾಗಿರುತ್ತಿದ್ದಳು. ಕೆಲವೊಂದು ಬಾರಿ ಏನೋ ಹೇಳಲು ಹೋಗಿ ಮತ್ತೇನೋ ಹೇಳಿ ಎಡವಟ್ಟು ಮಾಡಿಕೊಳ್ಳುತ್ತಿದ್ದರೂ ಮರುಕ್ಷಣವೇ ಸಾವರಿಸಿಕೊಂಡು ರೂಟ್‌ಗೆ ಬರುತ್ತಿದ್ದಳು. ಹೀಗಾಗಿ ಆಕೆ ಮಾಡಿದ ಮಿಸ್ಟೇಕ್‌ಗಳು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇಂಥವೇ ಕಾರಣಕ್ಕೆ ಚಾನಲ್‌ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಆಕೆ ಫೋನಿನಲ್ಲಿ ಸೋದಿಮಾಮಾರ ಜತೆ ಮಾತನಾಡಿ ಕ್ಲಾರಿಫಿಕೇಶನ್ ಕೇಳುತ್ತಿದ್ದಳು. ಅಷ್ಟೇ ಏಕೆ ರಷಿಯಾ ಪುಟ್ಯಾನ ಮೊಬೈಲ್‌ನಲ್ಲಿ ಈಕೆಯ ನಂಬರ್ ಇತ್ತು. ಕೆಲವೊಂದು ಸಲ ಕಾಲ್ ಮಾಡಿದ ಕೂಡಲೇ ಪುಟ್ಯಾ ಫೋನ್ ಎತ್ತಿ ಹೇಳಮ್ಮಾ… ಕಿವುಡನುಮೀ ಎಂದು ರಾಗ ಎಳೆದು ಮಾತನಾಡುತ್ತಿದ್ದ. ಟ್ರಂಪೇಸಿಯಂತೂ ಈಕೆಯ ಫೋನೆತ್ತಿ ನಾ ಅಲ್ಲಿಗೆ ಬಂದಾಗ ಗ್ಯಾರಂಟಿ ನಿಮ್ಮನಿಗೆ ಬರುತ್ತೇನೆ ಎಂದು ಹೇಳುತ್ತಿದ್ದ. ಇತ್ತ ಕಿವುಡನುಮಿಗೆ ಕಮಲವ್ವನೂ ಭಯಂಕರ ಕ್ಲೋಸಂತೆ. ಅಂದು ನ್ಯೂಸ್ ಹೇಳುತ್ತಿದ್ದಾಗ ಲೈವ್‌ನಲ್ಲಿ ಅದ್ಯಾರಿಗೆ ಮಾಡುತ್ತಿದ್ದಳೋ ಏನೋ,, ನೋಡಿ ಕಮಲಮ್ಮನೇ ಫೋನಿಗೆ ಸಿಕ್ಕಿದ್ದಾರೆ ಮಾತನಾಡಿಸುತ್ತೇನೆ ಎಂದು ಹಲೋ ಕಮಲಾ ಅಂಟಿ ಅಂದಕೂಡಲೇ ಆ ಕಡೆಯಿಂದ ಹೇಗಿದಿಯೇ? ಎಂಬ ಧ್ವನಿ ಬಂತು. ನಿಮ್ಮ ಚುನಾವಣೆ ಏನಂತಿದೆ ಅಂದ ಕೂಡಲೇ ಆ ಕಡೆಯಿಂದ ಅದೇನಂತದೆ… ಟ್ರಂಪೇಸಿ ಕಿವಿ ನೋಡಿದೆಯೋ ಇಲ್ಲವೋ ಹೇಗಾಯ್ತು ಅಂತ ಅಂದಕೂಡಲೇ… ಮತ್ತೆ ಹಲೋ ಹಲೋ ಅಂದು ನಮ್ಮ ಸಂಪರ್ಕಕ್ಕೆ ಅವರು ಸಿಗುತ್ತಿಲ್ಲ ಮತ್ತೆ ಸಂಪರ್ಕಿಸುತ್ತೇನೆ ಎಂದು ಕಟ್ ಮಾಡಿದಳು. ಮತ್ತೆ ಮೊಬೈಲ್ ರಿಂಗಾದಾಗ ಅದನ್ನು ಎತ್ತಿ ಸ್ಪೀಕರ್ ಆನ್ ಇಟ್ಟು ಹೇಳಿ ಕಮಲಾ ಅಂಟೀ ಎಂದು ರಾಗ ಎಳೆದಳು. ಏಯ್ ನಾನು ನಿನ ಗಂಡ ಮಾತಾಡ್ತಾ ಇದೀನಿ ಸ್ಕೂಟಿ ಕೀಲಿ ಎಲ್ಲಿಟ್ಟಿ ಸಿಗವಲ್ಲದು…ನಿನ್ನೆ ನೀನೆ ಒಯ್ದಿದ್ದೆಲ್ಲ ಅಂದಾಗ.. ಆಕೆ ಅದು.. ಅದು… ತಡೀರಿ ವಾಪಸ್ ಮಾಡ್ತೀನಿ.. ಲೈವ್‌ನಲ್ಲಿದೀನಿ ಅಂತ ಫೋನ್ ಕಟ್ ಮಾಡಿದಳು.