ಟ್ರಂಪ್ ಬರುತ್ತಿದ್ದಂತೆ ಥರ್ಮಲ್‌ಗೆ ಜೀವದಾನ
ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಅಧ್ಯಕ್ಷ ಪದವಿ ವಹಿಸಿಕೊಳ್ಳುತ್ತಿದ್ದಂತೆ ಅಮೆರಿಕದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಕೇಂದ್ರಗಳಿಗೆ ಜೀವದಾನ ಸಿಗಲಿದೆ. ಜಾಗತಿಕ ಮಟ್ಟದಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ಮುಚ್ಚಲು ತೀರ್ಮಾನವಾಗಿದ್ದರೂ ಟ್ರಂಪ್ ಇದಕ್ಕೆ ಒಪ್ಪುವುದಿಲ್ಲ. ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನ ಬಳಸಿ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಕೈಬಿಡಲು ಟ್ರಂಪ್ ಸಿದ್ಧರಿಲ್ಲ. ಪರಿಸರ ಮಾಲಿನ್ಯದ ಬಗ್ಗೆ ಅವರು ಚಿಂತಿಸುವುದಿಲ್ಲ. ಶಾಕೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ೮.೫೦ ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವುದು ಕಷ್ಟ. ಅಲ್ಲದೆ ಸೋಲಾರ್ ಹೆಚ್ಚು ಭೂಮಿ ಆಕ್ರಮಿಸಿಕೊಳ್ಳುತ್ತದೆ. ಕಡಿಮೆ ವಿದ್ಯುತ್ ಕೊಡುತ್ತದೆ. ಟ್ರಂಪ್ ಅದನ್ನು ಬಯಸುವುದಿಲ್ಲ. ಟ್ರಂಪ್‌ಗೆ ತದ್ವಿರುದ್ಧ ಬರಾಕ್ ಒಬಾಮಾ ಇದ್ದರು. ಅವರು ಸೋಲಾರ್‌ಗೆ ಹೆಚ್ಚು ಉತ್ತೇಜನ ನೀಡುತ್ತಿದ್ದರು. ಅಲ್ಲದೆ ಬೇರೆ ದೇಶದವರು ಸೋಲಾರ್ ಉಪಕರಣಗಳನ್ನು ಅಮೆರಿಕದಿಂದ ಖರೀದಿ ಮಾಡಿದರೆ ಕಡಿಮೆ ದರದಲ್ಲಿ ಕಂತುಗಳಲ್ಲಿ ನೀಡುತ್ತಿದ್ದರು. ಈ ಯೋಜನೆಯಿಂದ ಭಾರತಕ್ಕೂ ಲಾಭವಾಗಿತ್ತು. ಒಬಾಮಾ ಹೋದ ಮೇಲೆ ಆ ಯೋಜನೆಯೂ ನಿಂತು ಹೋಯಿತು.
ಈಗ ಟ್ರಂಪ್ ಕಾಲ. ಅಮೆರಿಕದಲ್ಲಿ ಒಟ್ಟು ೪೫೦೦ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಿವೆ. ಕಲ್ಲಿದ್ದಲು, ನೈಸರ್ಗಿಕ ಅನಿಲ, ಪೆಟ್ರೋಲಿಯ ಉತ್ಪನ್ನ ಬಳಸಲಾಗುತ್ತಿದೆ. ಕಲ್ಲಿದ್ದಲಿನಿಂದ ಶೇ. ೧೬, ನೈಸರ್ಗಿಕ ಅನಿಲದಿಂದ ಶೇ. ೪೩ರಷ್ಟು ವಿದ್ಯುತ್ ಬರುತ್ತಿದೆ. ಇದನ್ನು ಬೇರೆ ಉತ್ಪಾದನಾ ಮೂಲದಿಂದ ಸರಿತೂಗಿಸುವುದು ಕಷ್ಟ. ನಮ್ಮಲ್ಲೂ ಇದೇ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಸೋಲರ್‌ಗೆ ಹೆಚ್ಚಿನ ಬಂಡವಾಳ ಹೂಡಿ ಕಲ್ಲಿದ್ದಲು ಬಳಕೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಉತ್ಪಾದನೆಯನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ೪ ಲಕ್ಷ ಜನ ನಮ್ಮಲ್ಲಿ ಕೆಲಸ ಕಳೆದುಕೊಳ್ಳುವರು.
ಕರ್ನಾಟಕದಲ್ಲಿ ಒಟ್ಟು ೫ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಕೆಲಸ ಮಾಡುತ್ತಿವೆ. ಇದರಲ್ಲಿ ಒಂದು ಖಾಸಗಿ ರಂಗದಲ್ಲಿದ್ದು ವಿದೇಶಿ ಕಲ್ಲಿದ್ದಲು ಬಳಸುತ್ತಿದೆ. ರಾಯಚೂರು, ಬಳ್ಳಾರಿ, ಯರಮರಸ್ ಕೇಂದ್ರಗಳಲ್ಲಿ ಸಂಪೂರ್ಣವಾಗಿ ಕನ್ನಡಿಗರೇ ದುಡಿಯುತ್ತಿದ್ದಾರೆ. ಕೂಡಗಿಯಲ್ಲಿ ಎನ್‌ಟಿಪಿಸಿ, ಉಡುಪಿಯಲ್ಲಿ ಖಾಸಗಿ ರಂಗದಲ್ಲಿ ವಿದ್ಯುತ್ ಕೇಂದ್ರ ಕೆಲಸ ಮಾಡುತ್ತಿದೆ. ಇವುಗಳ ಪಿಎಲ್‌ಎಫ್ ನೋಡಿದರೆ ಶೇ. ೪೭ರಿಂದ ೬೩ ರಷ್ಟು ಮಾತ್ರ ಇದೆ. ಅಲ್ಲದೆ ವರ್ಷದಲ್ಲಿ ಒಂದು ತಿಂಗಳು ಈ ಘಟಕಗಳಿಗೆ ವಿರಾಮ ನೀಡಲೇಬೇಕು. ಸಾಮಾನ್ಯವಾಗಿ ಎಲ್ಲ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಅಕ್ಟೋಬರ್‌ನಿಂದ ಮಾರ್ಚ್ವರೆಗೆ ಅತಿ ಹೆಚ್ಚು ಎಂದರೆ ೪೨೦೦ ರಿಂದ ೪೪೦೦ ದಶಲಕ್ಷ ಯೂನಿಟ್ ವಿದ್ಯುತ್ ನೀಡುತ್ತದೆ. ನಂತರ ಕಲ್ಲಿದ್ದಲು ಗಣಿಗಳಲ್ಲಿ ಉಷ್ಣಾಂಶ ಅಧಿಕಗೊಳ್ಳುವುದರಿಂದ ಕಲ್ಲಿದ್ದಲು ತೆಗೆಯಲು ಆಗುವುದಿಲ್ಲ. ಜಲ ವಿದ್ಯುತ್ ಕೇಂದ್ರಗಳು ಮಳೆಗಾಲದಲ್ಲಿ ಹೆಚ್ಚು ಕೆಲಸ ಮಾಡುವುದರಿಂದ ಆ ಕಾಲದಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ವಿರಾಮ ನೀಡಲಾಗುವುದು.
ರಾಜ್ಯದಲ್ಲಿ ಪೀಕ್ ಲೋಡ್ ಕಾಲದಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ೨೬೪೩ ಮೆಗಾವ್ಯಾಟ್ ವಿದ್ಯುತ್ ಕೊಡುತ್ತದೆ. ಕೇಂದ್ರೀಯ ವಿದ್ಯುತ್ ಜಾಲದಿಂದ ನಮ್ಮ ರಾಜ್ಯಕ್ಕೆ ೩೦೦೦ ಮೆಗಾವ್ಯಾಟ್ ವಿದ್ಯುತ್ ಲಭಿಸುತ್ತದೆ. ಕರ್ನಾಟಕದ ಮೂಲಗಳಲ್ಲಿ ಥರ್ಮಲ್ ಪಾಲು ೫೦೫೦ ಮೆಗಾವ್ಯಾಟ್. ಇದನ್ನು ಕಡಿಮೆ ಮಾಡುವುದರಲಿ ಇದನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ವರದಿಯಂತೆ ಈಗಿರುವ ಶಾಖೋತ್ಪನ್ನ ಘಟಕಗಳೊಂದಿಗೆ ಹೊಸದಾಗಿ ೮೪೩೬ ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳನ್ನು ಆರಂಭಿಸಬೇಕು. ಪರಿಸ್ಥಿತಿ ಹೀಗಿರುವಾಗ ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರಗಳನ್ನು ಕೆಲವು ವರ್ಷಗಳು ಕೈಬಿಡಲು ಬರುವುದಿಲ್ಲ. ಕಲ್ಲಿದ್ದಲಿನಿಂದ ಪಡೆಯವ ವಿದ್ಯುತ್‌ಗೆ ಸಮಾನವಾಗಿ ಸೋಲಾರ್ ಪಡೆಯುವುದು ಕಷ್ಟ. ಸೋಲಾರ್ ಪಿಎಲ್‌ಎಫ್ ಅತಿ ಕಡಿಮೆ. ಅಲ್ಲದೆ ಅತಿ ಹೆಚ್ಚು ಭೂಮಿ ಬೇಕು. ಕೇಂದ್ರ ಸರ್ಕಾರ ಸೋಲಾರ್‌ಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಇದರಿಂದ ಮೋದಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬರಬಹುದು. ಅದರೆ ಹೊಟ್ಟೆ ತುಂಬುವುದಿಲ್ಲ. ವಿಚಿತ್ರದ ಸಂಗತಿ ಎಂದರೆ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‌ಗೆ ೨.೪೫ ರೂ. ಇದ್ದರೆ ಗ್ರಾಹಕರು ಪಡೆಯುವ ಸೋಲಾರ್‌ಗೆ ಪ್ರತಿ ಯೂನಿಟ್‌ಗೆ ೫ರಿಂದ ೭ನ ರೂ. ನೀಡಬೇಕು. ಇದಕ್ಕೆ ೨೫ ವರ್ಷಗಳ ಒಪ್ಪಂದ ಕಾರಣ. ಇದರಲ್ಲೂ ಉದ್ಯಮಿಗಳು ಮತ್ತು ರಾಜಕಾರಣಗಳು ದರೋಡೆ ಮಾಡುತ್ತಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಉದ್ಯಮಿಗಳು ಕಡಿಮೆ ದರದಲ್ಲಿ ಸೋಲಾರ ಪಡೆಯುತ್ತಿದ್ದಾರೆ. ಅವರಿಗೆ ಎರಡೂ ರೀತಿಯಲ್ಲಿ ಲಾಭ. ಸೋಲಾರ್ ಫಲಕ ಹಾಕಿ ಜನ ಸಾಮಾನ್ಯರಿಗೆ ಹೆಚ್ಚಿನ ದರದಲ್ಲಿ ವಿದ್ಯುತ್ ನೀಡುವುದು. ತಮ್ಮ ಉದ್ಯಮಕ್ಕೆ ಬೇಕಾದ ವಿದ್ಯುತ್ತನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದು. ಇದರಲ್ಲಿ ರಾಜಕಾರಣಿಗಳಿಗೆ ಪಾಲು ಹೋಗುತ್ತಿರುವುದರಿಂದ ಯಾರೂ ಇದರ ವಿರುದ್ಧ ಧ್ವನಿ ಎತ್ತುವವರಿಲ್ಲ. ಬಡಪಾಯಿ ಗ್ರಾಹಕ ವಿದ್ಯುತ್ ದರ ಇಳಿಯುತ್ತದೆ ಎಂದು ಬಕಪಕ್ಷಿಯಂತೆ ಕಾಯುತ್ತಿರುತ್ತಾನೆ. ಈಗ ಎಲ್ಲ ರಾಜ್ಯಗಳಲ್ಲೂ ೨೦೦ ಯೂನಿಟ್ ಉಚಿತ ವಿದ್ಯುತ್ ಕೊಡುವ ಗ್ಯಾರಂಟಿ ಜನ ಮನ್ನಣೆ ಪಡೆಯುತ್ತಿದೆ. ಇದರಿಂದ ರಾಜಕಾರಣಿಗೆ ಮತ್ತಷ್ಟು ಹಣ ಹೊಡೆಯಲು ಅನುಕೂಲವಾಗಲಿದೆ.
ಕಲ್ಲಿದ್ದಲು ವಿದ್ಯುತ್ ಕೇಂದ್ರವನ್ನು ಮುಂದುವರಿಸಿದರೆ ಸಾಕಷ್ಟು ಲಾಭವೂ ಇದೆ. ಇದಕ್ಕೆ ನಂಬಿಕೊಂಡು ಕೆಪಿಸಿ ನೌಕರರು ಬದುಕಿದ್ದಾರೆ. ಈ ಘಟಕಗಳು ನಿಂತು ಹೋದರೆ ಅವರ ಬದುಕು ಮೂರಾಬಟ್ಟೆಯಾಗುತ್ತದೆ. ನಮ್ಮ ಕಲ್ಲಿದ್ದಲಿನಲ್ಲಿ ಹಾರುವ ಬೂದಿ ಅಧಿಕ. ಇದರಿಂದ ವಿದ್ಯುತ್ ಕೇಂದ್ರಗಳ ಮೂಲಕ ಹಾರುವ ಬೂದಿ ಹೆಚ್ಚು ಲಭಿಸುತ್ತದೆ. ಇದನ್ನು ಈಗ ಸಿಮೆಂಟ್ ಜತೆ ಮಿಶ್ರಣ ಮಾಡಿ ಸಿಮೆಂಟ್ ಇಟ್ಟಿಗೆ ತಯಾರಿಸಲಾಗುತ್ತಿದೆ. ವಿದೇಶಿ ಕಲ್ಲಿದ್ದಲು ಬೆಲೆ ಅಧಿಕ. ಅಲ್ಲದೆ ಅದರಲ್ಲಿ ಹಾರುವ ಬೂದಿ ಕಡಿಮೆ. ರಂಜಕದ ಅಂಶ ಹೆಚ್ಚು. ಅದನ್ನು ಬಳಸಿದರೆ ಆಮ್ಲದ ಮಳೆ ಬರುವ ಸಂಭವವಿದೆ. ನಮ್ಮಲ್ಲಿ ಆ ಸಮಸ್ಯೆ ಇಲ್ಲ. ಹಾರುವ ಬೂದಿಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ ಎಂದು ವರದಿಗಳು ಹೇಳುತ್ತವೆ. ಆದರೆ ಜನ ಇದರ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿಲ್ಲ. ನಮ್ಮಲ್ಲಿ ಕಲ್ಲಿದ್ದಲು ನಿಕ್ಷೇಪ ಸಾಕಷ್ಟಿದೆ. ಅದನ್ನು ಬಳಸದೇ ಹೋದಲ್ಲಿ ತೆರೆದ ಗಣಿಗಳು ಮುಂದಿನ ದಿನಗಳಲ್ಲಿ ರೋಗರುಜಿನಗಳ ಆವಾಸಸ್ಥಾನವಾಗುತ್ತದೆ. ಒಂದು ವೇಳೆ ಅವುಗಳನ್ನು ಮುಚ್ಚಲು ತೀರ್ಮಾನಿಸಿದರೆ ಅದಕ್ಕೆ ಸಾವಿರಾರು ಕೋಟಿ ರೂ. ವೆಚ್ಚ ಮಾಡಬೇಕು. ಅದಕ್ಕಿಂತ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸಿಕೊಳ್ಳುವುದು ಸೂಕ್ತ. ಪರಿಸರವಾದಿಗಳು ಇದನ್ನು ಒಪ್ಪುವುದಿಲ್ಲ. ಆದರೆ ವ್ಯವಹಾರಿಕವಾಗಿ ನೋಡಿದಾಗ ಇದೇ ಸರಿಯಾದ ಮಾರ್ಗ ಎನಿಸುವುದರಲ್ಲಿ ಸಂದೇಹವಿಲ್ಲ.
ಹಿಂದೆ ಜಲ ವಿದ್ಯುತ್ ಕಡಿಮೆ ದರದಲ್ಲಿ ಲಭಿಸುತ್ತಿತ್ತು. ಈಗ ಜಲ ವಿದ್ಯುತ್ ನಂಬಿಕೆಗೆ ಅರ್ಹವಲ್ಲ. ಮಳೆ ಬಂದರೆ ಬಂತು ಇಲ್ಲದಿದ್ದಲ್ಲಿ ಇಲ್ಲ. ಹೀಗಿರುವಾಗ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಲ್ಲಿ ಇಡೀ ದೇಶದ ಆರ್ಥಿಕ ಪ್ರಗತಿ ಕುಸಿಯುತ್ತದೆ. ಪರಿಸರ ರಕ್ಷಣೆ ದೃಷ್ಟಿಯಿಂದ ಸೋಲಾರ್, ಪವನ ವಿದ್ಯುತ್ ಬಳಸುವುದು ಸೂಕ್ತ. ಆದರೆ ಇವುಗಳು ನಮ್ಮ ಅಗತ್ಯವನ್ನು ಪೂರೈಸಲಾರದು. ಸೋಲಾರ್‌ಗೆ ಹೆಚ್ಚು ಬಂಡವಾಳ ಬೇಕು. ಹೆಚ್ಚು ಜನರಿಗೆ ಉದ್ಯೋಗ ನೀಡುವುದಿಲ್ಲ. ರೈತರು ಉಳುಮೆ ಬಿಟ್ಡು ಭೂಮಿಯನ್ನು ಸೋಲಾರ್‌ಗೆ ಕೊಟ್ಟು ಬಿಟ್ಟರೆ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಇಳಿಮುಖಗೊಳ್ಳುತ್ತದೆ. ಬಂಜರು ಭೂಮಿಗೆ ಮಾತ್ರ ಸೋಲಾರ್ ಸೀಮಿತಗೊಳ್ಳಬೇಕು. ಫಲವತ್ತಾದ ಭೂಮಿಯನ್ನು ಇದಕ್ಕೆ ಬಳಸದಂತೆ ಸರ್ಕಾರ ನಿರ್ಬಂಧ ವಿಧಿಸುವುದು ಅಗತ್ಯ. ವಿದ್ಯುತ್ ಉತ್ಪಾದನೆ ಅಧಿಕಗೊಂಡು ಆಹಾರ ಧಾನ್ಯದ ಕೊರತೆ ಉಂಟಾದಲ್ಲಿ ಅದನ್ನು ನಿಭಾಯಿಸುವುದು ಕಷ್ಟ.