For the best experience, open
https://m.samyuktakarnataka.in
on your mobile browser.

ಡಿಸೋಜಾ ಮನೆಗೆ ಕಲ್ಲು: ಇಬ್ಬರ ಬಂಧನ

05:12 PM Aug 28, 2024 IST | Samyukta Karnataka
ಡಿಸೋಜಾ ಮನೆಗೆ ಕಲ್ಲು  ಇಬ್ಬರ ಬಂಧನ

ಮಂಗಳೂರು: ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರ ಮಂಗಳೂರಿನ ಮನೆಗೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬೋಳಂತೂರಿನ ಭರತ್‌ ಯಾನೆ ಯಕ್ಷಿತ್‌(21) ಮತ್ತು ದಿನೇಶ್‌ ಕುಡ್ತಮೊಗೇರು((20) ಬಂಧಿತರು. ಆರೋಪಿ ಭರತ್‌ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಾರಾಯಣಕೋಡಿ ನಿವಾಸಿ. ಈತನ ವಿರುದ್ಧ ಈ ಹಿಂದೆ ಮೂರು ಹಲ್ಲೆ ಪ್ರಕರಣ ದಾಖಲಾಗಿತ್ತು. ಇನ್ನೋರ್ವ ಆರೋಪಿ ದಿನೇಶ್‌ ಕನ್ಯಾನ ಫೈನಾನ್ಸ್‌ನಲ್ಲಿ ವಸೂಲಿ ಕೆಲಸ ಮಾಡುತ್ತಿದ್ದಾನೆ.
ಆ. 21ರಂದು ರಾತ್ರಿ 9.30ರ ಸುಮಾರಿಗೆ ಇವರಿಬ್ಬರು ಮಂಗಳೂರಿನ ಹೊಟೇಲ್‌ವೊಂದರಲ್ಲಿ ಊಟ ಮಾಡಿದ ಬಳಿಕ ಐವನ್‌ ಡಿಸೋಜಾ ಮನೆಗೆ ಕಲ್ಲು ಎಸೆಯಲು ನಿರ್ಧರಿಸಿದ್ದಾರೆ. ರಾತ್ರಿ 11.45ರ ಸುಮಾರಿಗೆ ಬೈಕ್‌ನಲ್ಲಿ ಬಂದ ಆರೋಪಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾದ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಐವನ್‌ ಡಿಸೋಜಾ ನೀಡಿದ ಹೇಳಿಕೆಗಳ ಮೇಲಿನ ಕೋಪವೇ ತಮ್ಮ ಕೃತ್ಯದ ಹಿಂದಿನ ಉದ್ದೇಶ ಎಂದು ಆರೋಪಿಗಳು ತನಿಖೆಯಲ್ಲಿ ತಿಳಿಸಿದ್ದಾರೆ.
ಘಟನೆ ಬಳಿಕ ಸೆಂಟ್ರಲ್‌ ಎಸಿಪಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿತ್ತು. ಬೈಕ್‌ನಲ್ಲಿ ಬಂದು ಹೆಲ್ಮೆಟ್‌ ಧರಿಸಿ ಕಲ್ಲು ತೂರಾಟ ಕೃತ್ಯ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಸಿಸಿ ಕ್ಯಾಮೆರಾ ಮತ್ತು ಮೊಬೈಲ್‌ ದಾಖಲೆಗಳ ಮೂಲಕ ಆರೋಪಿಗಳ ಚಲನವಲನ ಪತ್ತೆ ನಡೆಸಲಾಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.