ತುಳಸಿ ಗೌಡ ಆರೋಗ್ಯದಲ್ಲಿ ಚೇತರಿಕೆ
08:54 PM Apr 23, 2024 IST | Samyukta Karnataka
ಕಾರವಾರ: ಆರೋಗ್ಯದಲ್ಲಿ ಏರುಪೇರಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಅವರ ಆರೋಗ್ಯದಲ್ಲಿ ಮಂಗಳವಾರ ಚೇತರಿಕೆ ಕಂಡುಬಂದಿದೆ.
ಕ್ರಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವಿಶೇಷ ಕಾಳಜಿಯೊಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಕ್ರಿಮ್ಸ್ ಕಾರವಾರದ ನಿರ್ದೇಶಕ ಡಾ. ಗಜಾನನ ನಾಯಕ ತಿಳಿಸಿದ್ದಾರೆ.
ತುಳಸಿ ಗೌಡ ಅವರು ಸೋಮವಾರ ಆರೋಗ್ಯದಲ್ಲಿ ಏರುಪೇರಾಗಿ ಮನೆಯಲ್ಲಿ ಹಠಾತ್ ಕುಸಿದು ಬಿದ್ದಿದ್ದರು. ಅಲ್ಲದೆ ಸ್ವಲ್ಪ ಉಸಿರಾಟದ ಸಮಸ್ಯೆ ಕೂಡ ಕಂಡು ಬಂದಿದ್ದರಿಂದ ಅವರನ್ನು ತಕ್ಷಣ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.