ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಹಸು
ಅಂಕೋಲಾ: ಪಟ್ಟಣದ ಬಾಳೆಗುಳಿಯ ಗಜಾನನ ಶೆಟ್ಟರ ಮನೆಯಲ್ಲಿ ಹಸು ಮೂರು ಕರುಗಳಿಗೆ ಜನ್ಮ ನೀಡಿರುವುದು ಪ್ರಾಣಿ ಪ್ರಪಂಚದಲ್ಲಿ ನಡೆಯುವ ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗಿದೆ.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಿಶೇಷವಾಗಿ ಕಂಡು ಬರುವ ಮಲೆನಾಡು ಗಿಡ್ಡ ಹಸುವನ್ನು ಗಜಾನನ ಹಾಗೂ ವನಜಾ ದಂಪತಿ ಪಾಲನೆ-ಪೋಷಣೆ ಮಾಡುತ್ತಿದ್ದಾರೆ. ಇವರು ೧೯ಕ್ಕೂ ಹೆಚ್ಚು ದನ-ಕರುಗಳನ್ನು ಸಾಕಿ ಸಲುಹುತ್ತಿದ್ದು ಮಲೆನಾಡು ಗಿಡ್ಡ ತಳಿಯ ಹಸು ಮೂರು ಕರುಗಳಿಗೆ ಜನ್ಮ ನೀಡುವ ಮೂಲಕ ವಿಸ್ಮಯ ಮೂಡಿಸಿದೆ. ಜನಿಸಿದ ಕರುಗಳ ಪೈಕಿ ಎರಡು ಗಂಡು ಹಾಗೂ ಒಂದು ಹೆಣ್ಣು ಕರುವಾಗಿದ್ದು ನೋಡಲು ತುಂಬಾ ಅತ್ಯಾಕರ್ಷಕವಾಗಿದೆ.
ಆರೋಗ್ಯಪೂರ್ಣವಾಗಿರುವ ಮೂರು ಕರುಗಳು ಕ್ರಿಯಾಶೀಲ ಚಟುವಟಿಕೆಯೊಂದಿಗೆ ಚೆಂಗನೆ ಜಿಗಿದಾಡುತ್ತ ನೋಡುಗರಲ್ಲಿ ಸಂತಸ ಮೂಡಿಸುತ್ತಿದೆ. ಅಪರೂಪಕ್ಕೆನ್ನುವಂತೆ ಕಂಡು ಬರುವ ತ್ರಿವಳಿ ಕರುಗಳನ್ನು ಕಂಡು ಆನಂದಿಸಲು ಜನರು ಹರಿದು ಬರುತ್ತಿದ್ದಾರೆ. ಲಕ್ಷ್ಮೀ ಎಂದು ಮನೆಯವರು ಹೆಸರಿಟ್ಟಿರುವ ಈ ಹಸು ಮೊದಲ ಪ್ರಸವದಲ್ಲಿ ಮೂರು ಕರುಗಳನ್ನು ಹೆರುವ ಮೂಲಕ ಮನೆ ಮಂದಿಗೆಲ್ಲ ಸಂತಸ ತಂದಿದೆ.
ಪಶು ವೈದ್ಯರು ಅಭಿಪ್ರಾಯ ಪಡುವಂತೆ ಹಸುಗಳು ಒಮ್ಮೆ ಒಂದು ಕರುವನ್ನು ಪ್ರಸವಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡುವ ಮೂಲಕ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಹೀಗೆ ಜನಿಸಿದ ಮೂರು ಕರುಗಳು ಆರೋಗ್ಯಪೂರ್ಣ ಬೆಳವಣಿಗೆ ಕಾಣುವುದು ಅಪರೂಪ ಎಂದು ಹೇಳಲಾಗುತ್ತಿದ್ದು, ಗಜಾನನ ಶೆಟ್ಟರ ಮನೆಯ ಹಸು ಹೆತ್ತಿರುವ ಮೂರು ಕರುಗಳು ಸದೃಢವಾಗಿದೆ.
ತರಹೇವಾರಿ ತಳಿಗಳಾದ ಮಲೆನಾಡು ಗಿಡ್ಡ, ಗೀರ್, ಸಾಹಿಲ್ವಾರ್, ಕಿಲಾರಿ ತಳಿಯ ಹಸುಗಳನ್ನು ಇಲ್ಲಿ ಕಾಣಬಹುದಾಗಿದೆ. ಪಶು ಪಾಲನೆಯೊಂದಿಗೆ ವಿವಿಧ ತಳಿಯ ಕೋಳಿಗಳನ್ನು ಸಾಕಿ ಸಲುಹುವುದನ್ನು ಇವರು ರೂಢಿಸಿಕೊಂಡಿದ್ದಾರೆ. ಟರ್ಕಿ, ಹಂಸ, ಬಾತುಕೋಳಿ, ಗಿಣಿಪಿಕ್ ಸೇರಿದಂತೆ ಬಹು ಬಗೆಯ ಕೋಳಿಗಳು ಇಲ್ಲಿ ಕಾಣಬಹುದಾಗಿದ್ದು ಗಜಾನನ ಶೆಟ್ಟರ ಮನೆ ಪ್ರಾಣಿ-ಪಕ್ಷಿಧಾಮದಂತೆ ಭಾಸವಾಗುತ್ತದೆ.