ದತ್ತಾತ್ರೇಯ ಮೂರ್ತಿ ಭಗ್ನ: ಕಿಡಿಗೇಡಿಗಳ ಬಂಧನಕ್ಕೆ ಸಚಿವ ಜೋಶಿ ಆಗ್ರಹ
ನವದೆಹಲಿ: ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ದತ್ತಾತ್ರೇಯ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದ್ದಾರೆ.
ದೇಶಪಾಂಡೆ ನಗರದ ದತ್ತಾತ್ರೇಯ ದೇವಸ್ಥಾನದಲ್ಲಿನ ಈ ಘಟನೆ ಅಕ್ಷಮ್ಯ ಅಪರಾಧ ಎಂದು ಖಂಡಿಸಿರುವ ಸಚಿವರು, ಇತ್ತೀಚೆಗೆ ಹಲವೆಡೆ ಹಿಂದೂಗಳ ನಂಬಿಕೆಗೆ ಧಕ್ಕೆ ತರುವಂಥ ದುಷ್ಕೃತ್ಯಗಳು ಘಟಿಸುತ್ತಲೇ ಇದ್ದು, ಸರ್ಕಾರದ ಬಿಗಿ ಆಡಳಿತ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಮಾಜಘಾತಕರನ್ನು ತಕ್ಷಣ ಬಂಧಿಸಿ: ದತ್ತಾತ್ರೇಯ ಮೂರ್ತಿಯ ಕೈಗಳನ್ನು ಕತ್ತರಿಸಿ ದುಷ್ಕೃತ್ಯ ಎಸಗಿರುವ ಸಮಾಜಘಾತಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಗುರಿಪಡಿಸಬೇಕೆಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ನಾಡಿನೆಲ್ಲೆಡೆ ದಸರಾ ಮಹೋತ್ಸವ ಆಚರಿಸುತ್ತಿದ್ದು, ಜನತೆ ವಿಶೇಷ ಪೂಜೆ-ಪುನಸ್ಕಾರ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ಆದರೆ, ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ ಹಬ್ಬಗಳಲ್ಲಿ ಧಾರ್ಮಿಕ ಆಚರಣೆಗೆ ಭಂಗ ತಂದು ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.