ದೇಶದಲ್ಲಿ 85 ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಅಸ್ತು
ನವದೆಹಲಿ: ದೇಶಾದ್ಯಂತ 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಈ ಮೂಲಕ ದೇಶದಲ್ಲಿ ಶೈಕ್ಷಣಿಕ ಅಭಿವೃದ್ಧಿಯತ್ತ ಮಹತ್ತರ ಹೆಜ್ಜೆ ಇರಿಸಿದೆ ಎಂದು ಜೋಶಿ ಬಣ್ಣಿಸಿದ್ದಾರೆ.
ದೇಶಾದ್ಯಂತ ಒಟ್ಟು 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ₹5872.08 ಕೋಟಿ ರೂಪಾಯಿ ಮಿಸಲಿರಿಸಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಕೇಂದ್ರೀಯ ವಿದ್ಯಾಲಯ ವಿಸ್ತರಣೆ: ರಾಜ್ಯದ ಶಿವಮೊಗ್ಗದಲ್ಲಿ ಇರುವ ಕೇಂದ್ರೀಯ ವಿದ್ಯಾಲಯದ ವಿಸ್ತರಣೆ ಒಳಗೊಂಡಂತೆ ಹೊಸ ವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು ಎಂದು ತಿಳಿಸಿದ್ದಾರೆ.
ದೇಶದಲ್ಲಿ 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಯಿಂದ ಭಾರತದಾದ್ಯಂತ ಮಕ್ಕಳ ಶಿಕ್ಷಣಕ್ಕೆ ಮತ್ತಷ್ಟು ಅವಕಾಶ ಲಭ್ಯವಾಗಲಿದೆ ಎಂದು ಸಚಿವ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.
28 ನವೋದಯ ವಿದ್ಯಾಲಯ ಸ್ಥಾಪನೆ: ಆವರ್ತನೆಯಲ್ಲಿಲ್ಲದ ಜಿಲ್ಲೆಗಳಲ್ಲಿ 28 ಹೊಸ ನವೋದಯ ವಿದ್ಯಾಲಯಗಳ ಸ್ಥಾಪನೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತೆಂದು ತಿಳಿಸಿದ್ದಾರೆ ಸಚಿವ ಜೋಶಿ.
ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳನ್ನು ಮತ್ತಷ್ಟು ಹೆಚ್ಚಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಭಾರತದ ಬಲವರ್ಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ತರ ಹೆಜ್ಜೆ ಇರಿಸಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ನವೋದಯಕ್ಕೆ ₹2359.82 ಕೋಟಿ ಅಂದಾಜು ವೆಚ್ಚ: 28 ನವೋದಯ ವಿದ್ಯಾಲಯಗಳ ಸ್ಥಾಪನೆಗೆ 2024-25 ರಿಂದ 2028-29ರವರೆಗೆ ಒತ್ತು ₹2359.82 ಕೋಟಿ ರು. ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.