For the best experience, open
https://m.samyuktakarnataka.in
on your mobile browser.

ಧಮ್ ಇದ್ದರೆ ಕಣದಲ್ಲಿ ನಿಲ್ಲಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧ

11:02 PM Mar 05, 2024 IST | Samyukta Karnataka
ಧಮ್ ಇದ್ದರೆ ಕಣದಲ್ಲಿ ನಿಲ್ಲಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧ

ಭಟ್ಕಳ: ಯಾರಿಗಾದರೂ ಧಮ್ ಇದ್ದರೆ ಬನ್ನಿ, ಉತ್ತರ ಕನ್ನಡ ಕಣದಲ್ಲಿ ನಿಲ್ಲಿ, ನಾನು ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಹಾಲಿ ಸಂಸದ ಅನಂತಕುಮಾರ ಹೆಗಡೆ ಸವಾಲು ಎಸೆದಿದ್ದಾರೆ.
ಭಟ್ಕಳ ತಾಲೂಕಿನ ಬೆಳಕೆ ಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ತಾವು ಕುಳಿತಿದ್ದ ಕುರ್ಚಿಯನ್ನೇ ಮೇಲಕ್ಕೆತ್ತಿ ಟೇಬಲ್ ಮೇಲೆ ಇಟ್ಟು ತಮ್ಮದೇ ಪಕ್ಷದ ಮುಖಂಡರಿಗೆ ಸವಾಲು ಹಾಕಿದರು. ನನ್ನ ಬದಲಾಗಿ ಕಣಕ್ಕೆ ನಿಲ್ಲುವ ಯಾರಾದರೂ ಉತ್ತರಕುಮಾರರು ಇದ್ದರೆ ಹೇಳಿ ನಾನು ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದೂ ಹೇಳಿದರು.
ಸಂಸದನಾಗಿ ಕಾರ್ಯ ನಿಭಾಯಿಸುವುದು ಸುಲಭದ ಮಾತಲ್ಲ. ಆದರೂ ಧೈರ್ಯ ಮಾಡಿ ನನ್ನ ಬದಲು ಕಣಕ್ಕೆ ಬರುವ ಉತ್ತರಕುಮಾರರಿದ್ದರೆ ಧೈರ್ಯವಾಗಿ ನನ್ನ ಎದುರು ಹಾಕಿರುವ ಕುರ್ಚಿಯಲ್ಲಿ ಬಂದು ಕೂರಬಹುದು ಎಂದರು. ತನ್ನನ್ನು ಆರು ಬಾರಿ ಸಂಸದನಾಗಿ ಆರಿಸಿ ಕಳುಹಿಸಿದ್ದೀರಿ ಎಂದು ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು ಭಟ್ಕಳದಲ್ಲಿ ಬಿಜೆಪಿಯೊಂದೇ ಭರವಸೆ ಎಂದೂ ಹೇಳಿದರು.
ಮಾಜಿ ಶಾಸಕ ಸುನಿಲ್ ನಾಯ್ಕ ಅವರು ಮಾತನಾಡಿದರು. ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಬಿಜೆಪಿ ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಸುಬ್ರಾಯ ದೇವಡಿಗ, ದೀಪಕ್ ನಾಯ್ಕ ಮಂಕಿ, ಶ್ರೀಕಾಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.