ನಕ್ಸಲರಿಗೆ ಪ್ಯಾಕೇಜ್ ಆಮಿಷ ಒಡ್ಡಿರುವುದು ಸರಕಾರದ ತಪ್ಪು ನಡೆ
ಸುರತ್ಕಲ್: ಮಾವೋವಾದಿ ಎಡಚಿಂತನೆ ಮೈಗೂಡಿಸಿಕೊಂಡು ಬಡವರಿಗೆ ನ್ಯಾಯ ಕೊಡುವ ನೆಪ ಹೇಳಿಕೊಂಡು ಕಾನೂನು ದಿಕ್ಕರಿಸಿ ಕಾಡಿನಲ್ಲಿ ಉಳಿದು ಗೆರಿಲ್ಲಾ ಯುದ್ಧ ನಡೆಸುವ ನಕ್ಸಲರಿಗೆ ತಪ್ಪಿನ ಅರಿವಾಗಿದ್ದರೆ ನ್ಯಾಯಾಂಗದ ಮುಂದೆ ಶರಣಾಗಲು ಸರಕಾರ ಸೂಚಿಸಬೇಕೆ ಹೊರತು ಹಣದ ಆಮಿಷ ಒಡ್ಡಿರುವುದು ತಪ್ಪು ನಿರ್ಧಾರ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಪೊಲೀಸರು ಸಂಪೂರ್ಣ ನಿರ್ಮೂಲನೆಯತ್ತಾ ಹೆಜ್ಜೆ ಇಡುವಾಗಲೇ ಕಾಂಗ್ರೆಸ್ ಸರಕಾರ ಯಾರದೋ ಒತ್ತಡಕ್ಕೆ ಮಣಿದು ನಕ್ಸಲರಿಗೆ ರಾಜಮರ್ಯಾದೆ ನೀಡಲು ಮುಂದಾಗಿದೆ. ಸರಕಾರದ ನಿರ್ಧಾರ ತಪ್ಪು ಸಂದೇಶ ನೀಡುತ್ತಿದೆ ಎಂದು ನಕ್ಸಲ್ ಶರಣಾಗತಿ ವಿಚಾರದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಕಾನೂನು, ನ್ಯಾಯಾಲಯಕ್ಕೆ ಗೌರವ ನೀಡಿ ಶರಣಾಗುವ ಬದಲು ಸರಕಾರಕ್ಕೆ ತಮ್ಮ ಬೆದರಿಕೆಯ ಬೇಡಿಕೆ ಇಟ್ಟು ಅದನ್ನು ಪೂರೈಸಿಕೊಳ್ಳುತ್ತಿದ್ದಾರೆ. ಸರಕಾರ ನೀಡುವ ಶರಣಾಗತಿ ಪ್ಯಾಕೇಜ್ ಭವಿಷ್ಯದಲ್ಲಿ ನಗರದಲ್ಲಿ ಹೊಸ ಆಂದೋಲನ ಉಂಟು ಮಾಡಲು ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುತ್ತದೆಯೆ? ಎಂಬುದನ್ನು ಪ್ರಶ್ನಿಸಿದ್ದಾರೆ.
ದೇಶದ ಕಾನೂನಿಗೆ ಗೌರವ ನೀಡಿ ನಿಶ್ಯರ್ಥವಾಗಿ ಬಂದು ಶರಣಾಗಿ ಇತರರಂತೆ ಸಾಮಾನ್ಯರಾಗಿ ಜೀವನ ನಡೆಸಲು ಮುಂದಾದಲ್ಲಿ ಮಾನವೀಯ ನೆರವು ನೀಡುವುದರಲ್ಲಿ ತಪ್ಪಿಲ್ಲ. ಆದರೆ ಪ್ರಸ್ತುತ ಸಿದ್ದರಾಮಯ್ಯ ಅವರು ನಕ್ಸಲರ ಎಲ್ಲಾ ಷರತ್ತುಗಳಿಗೆ ಒಪ್ಪಿ ಎಡಚಿಂತನೆಗೆ ಶರಣಾಗಿರುವಂತೆ ಕಾಣುತ್ತಿದೆ. ಬೃಹತ್ ಪ್ಯಾಕೇಜ್ ಪಡೆಯಲು ಇತರ ಕ್ರಿಮಿನಲ್ ಚಟುವಟಿಕೆ ನಡೆಸುವ ತಂಡಗಳು ಶರಣಾಗತಿಗೆ ಬೇಡಿಕೆ ಇಡಬಹುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಟೀಕಿಸಿದ್ದಾರೆ.