ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
ಕಮತಗಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಮಲಪ್ರಭಾ ನದಿಯ ದಡದಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕಮತಗಿ ಪಟ್ಟಣದ ರಾಜು ಮಡಿಕೇರಿ(೧೨), ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದ ಹುಚ್ಚೇಶ ಗೌಡರ(೧೪) ಇಬ್ಬರು ಜತೆಗೂಡಿ ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಕಮತಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಮಲಪ್ರಭಾ ನದಿಯ ದಡದಲ್ಲಿ ಆಟವಾಡಲು ತೆರಳಿದ್ದಾಗ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇವರಿಬ್ಬರು ಸಂಜೆಯಾದರೂ ಮನೆಗೆ ಬಾರದ ಕಾರಣ ಪಾಲಕರು ಬಾಲಕರನ್ನು ಹುಡುಕಲು ಪ್ರಾರಂಭಿಸಿದಾಗ ನದಿಯ ದಡದಲ್ಲಿ ಬಾಲಕರು ಇಟ್ಟಿದ್ದ ಸೈಕಲ್‌ನ್ನು ಗಮನಿಸಿ ಅಮೀನಗಡ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ರಾತ್ರಿ ಕತ್ತಲಾಗಿದ್ದರಿಂದ ಬೆಳಿಗ್ಗೆ ಘಟನಾ ಸ್ಥಳಕ್ಕೆ ಅಮೀನಗಡ ಪೊಲೀಸ್ ಠಾಣೆಯ ಪಿಎಸ್‌ಐ ಜ್ಯೋತಿ ವಾಲಿಕಾರ ಭೇಟಿ ನೀಡಿ, ನಂತರ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅವರು ನದಿಯಲ್ಲಿ ಮುಳುಗಿದ್ದ ಇಬ್ಬರು ಬಾಲಕರ ಶವವನ್ನು ಹೊರತಗೆದರು, ಸ್ಥಳದಲ್ಲಿಯೇ ಇದ್ದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.